‘ಬಾಡಿಗೆ ಮನೆಗಳ ರಾಜಚರಿತ್ರೆ’ ಆತ್ಮವೃತ್ತಾಂತದ ನಾಲ್ಕನೆಯ ಭಾಗ ಲೇಖಕ ಕೆ. ಸತ್ಯನಾರಾಯಣ ಅವರ ಕೃತಿ. ಶತಮಾನದುದ್ದಕ್ಕೂ ಬಾಡಿಗೆ ಮನೆಗಳಿಂದ ಪಡೆದ ಅಪೂರ್ವ ಅನುಭವಗಳನ್ನು ಒತ್ತಾಸೆಯಾಗಿ ಇಟ್ಟುಕೊಂಡ ಈ “ರಾಜಚರಿತ್ರೆ”ಯಲ್ಲಿ ಲೇಖಕರು ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಂಸ್ಕೃತಿಕ ಬದುಕಿನ ಮತ್ತು ಅಂತಃಕರಣದ ಶ್ರೀಮಂತ ಪದರುಗಳನ್ನು ಪ್ರೀತಿಯಿಂದ, ಉಲ್ಲಾಸದಿಂದ ಮಂಡಿಸುತ್ತಾ, ಶೋಧಿಸುತ್ತಾ ಹೋಗುತ್ತಾರೆ. ಬಹುಪಾಲು ಆತ್ಮಚರಿತ್ರೆಗಳಲ್ಲಿ ಕಂಡುಬರುವ ಹಳಹಳಿಕೆ, ಆತ್ಮರತಿ, ‘ನಾನೇ ಸರಿ’ತನದ ಧೋರಣೆ, ನನ್ನ ಬದುಕೇ ಅತ್ಯಮೂಲ್ಯ ಎಂಬ ನಿಲುವುಗಳಿಂದ ಇವರ ಬರವಣಿಗೆ ತಪ್ಪಿಸಿಕೊಂಡಿದೆ. ಭಾವ ತೀವ್ರವಾಗಿದ್ದೂ ವಸ್ತುನಿಷ್ಠವಾಗಿದೆ.
ಒಂದು ಕಾಲಮಾನದ ಕತೆಯನ್ನು ಹೇಳುತ್ತಿರುವಾಗಲೇ ವಿಶಾಲವಾದ ಚಾರಿತ್ರಿಕ ಪ್ರಜ್ಞೆಯನ್ನು ಉಳಿಸಿಕೊಂಡಿರುವುದು ಈ ಬರವಣಿಗೆಯ ಇನ್ನೊಂದು ವೈಶಿಷ್ಟ್ಯ. “ಬಾಡಿಗೆ ಮನೆ”, ಭಾರತೀಯರ ಬದುಕಿನ ಹೆಣಗಾಟ, ಸಾಧನೆ, ಕನಸುಗಾರಿಕೆಗಳ ಪ್ರತೀಕವಾಗಿದೆ. ಈ ರಾಜಚರಿತ್ರೆಯನ್ನು ಓದುತ್ತಿರುವಾಗಲೇ ಓದುಗರು ಅವರ ಮನಸ್ಸಿನಲ್ಲಿ ತಮ್ಮದೇ ಆದ ಚರಿತ್ರೆಯನ್ನು ರೂಪಿಸಿಕೊಳ್ಳುತ್ತಾ ಹೋಗುತ್ತಾರೆ. ಹಾಗಾಗಿ ಈ ಕೃ,ತಿ ಒಂದು ಸಾಮುದಾಯಿಕ ಕಥನವನ್ನು ಕೂಡ ಹುಟ್ಟುಹಾಕವಷ್ಟು ಶಕ್ತವಾಗಿದೆ. ಈ ಸಂಪುಟವೂ ಸೇರಿದಂತೆ ತಮ್ಮ ನಾಲ್ಕು ಸಂಪುಟಗಳಲ್ಲಿಯ ಆತ್ಮಚರಿತ್ರೆಯ ಮೂಲಕ (ನಾವೇನು ಬಡವರಲ್ಲ, ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ, ವೃತ್ತಿ ವಿಲಾಸ) ಆತ್ಮಚರಿತ್ರೆಯನ್ನು ಬರೆಯುವ ಇನ್ನೊಂದು ಮಾದರಿಯನ್ನು ಹಾಗೂ ಸಮಕಾಲೀನ ಚರಿತ್ರೆಯನ್ನು ಕಟ್ಟಿಕೊಡುವ ಭಿನ್ನ ರೀತಿಯನ್ನು ಲೇಖಕರು ತೋರಿಸಿಕೊಟ್ಟಿದ್ದಾರೆ.
ಇದು ಹಿರಿಯ ಲೇಖಕ ಕೆ. ಸತ್ಯನಾರಾಯಣ ಅವರ ಆತ್ಮವೃತ್ತಾಂತದ ನಾಲ್ಕನೆಯ ಭಾಗ. ಇದರ ನಾವೇನು ಬಡವರಲ್ಲ. ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ ಮತ್ತು ವೃತ್ತಿ ವಿಲಾಸ ಇದರ ಮೊದಲ ಮೂರು ಭಾಗಗಳು.ಮೂರು ಇವರ ತಾಯಿ-ತಂದೆ ವಾಸಮಾಡಿದ ಬಾಡಿಗೆ ಮನೆಗಳು, ಲೇಖಕರು ಆದಾಯ ತೆರಿಗೆ. ಅಧಿಕಾರಿಯಾಗಿ ದೇಶದ ಹಲವೆಡೆ ವಾಸ ಮಾಡಿದ ಬಾಡಿಗೆ ಮನೆಗಳ ಚಿತ್ರಣ ಇಲ್ಲಿದೆ. ಸ್ವತಃ ಮನೆಯ ಮಾಲೀಕರಾದಾಗಿನ ಅನುಭವವೂ ಅನಾವರಣಗೊಂಡಿದೆ. ಮನುಷ್ಯ ಬೇರುಗಳ ಮಾತ್ರವಲ್ಲದೇ ಕೊಂಬೆಗಳ ಬಗ್ಗೆ ಯೋಚಿಸುವುದರಿಂದ ಮಗನ ಮನೆಯ ಬಗ್ಗೆಯೂ ಬರೆದಿದ್ದಾರೆ. ಬಾಡಿಗೆ ಮನೆಗಳ ಆಕಾರ, ವಿನ್ಯಾಸಗಳ ಬಗ್ಗೆ ಮಾತ್ರ ಬರೆದಿದ್ದಾರೆ ಎಂದು ಓದುಗರ ನಿರೀಕ್ಷೆ ಇದ್ದರೆ, ಓದುತ್ತಾ ಹೋಗಿ, ನಿಮ್ಮ ಮುಂದೆ ಲೇಖಕರು ಕಂಡು ಅನುಭವಿಸಿದ, ಕಲ್ಪಸಿದ ಒಂದು ಕಾಲಘಟ್ಟದ ಸಮಾಜದ ಚರಿತ್ರೆಯೇ ತೆರೆದುಕೊಳ್ಳುತ್ತದೆ. ಅವರೇ ಹೇಳುವಂತೆ “ನೆನಪುಗಳೆಂದರೆ ಏನು? ಕಂಡದ್ದ, ಕೇಳಿಸಿಕೊಂಡದ್ದ ಇಲ್ಲ ಕನವರಿಸಿದ್ದ? ಅದೆಲ್ಲದರ ಅನುಭವ ಓದುಗರಿಗಾಗುತ್ತದೆ. ಈ ರಾಜಚರಿತ್ರೆ ಬರೆಯುವ ಮೊದಲು ವಿ.ಎಸ್ ನೈಪಾಲರ A House for Mr.Biswas ಮತ್ತು ಮಾರ್ಕೆಟ್ನ Living to Tell
a Tale ಕೃತಿಗಳನ್ನು ಮತ್ತೊಮ್ಮೆ ಓದಿದ್ದಾಗಿ ಹೇಳುತ್ತಾರೆ.
ಲೇಖಕರು ಸ್ವತಃ ವಾಸ ಮಾಡಿದ ಮನೆಗಳಲ್ಲದೆ ಇವರ ಹಿರಿಯರು ಒಂದು ಶತಮಾನದಿಂದ ವಾಸಮಾಡಿದ ಮನೆಗಳು ಇವರ ಭಾವಕೋಶದಲ್ಲಿ ಪ್ರವೇಶ ಪಡೆದಿರುವುದರಿಂದ ಆ ಮನೆಗಳ ಬಗ್ಗೆಯೂ ಬರೆದಿದ್ದಾರೆ. ಲೇಖಕರು ಹುಟ್ಟುವಾಗ ಅವರ ತಂದೆ ಪ್ಯಾಲೇಸ್ ಗುಟ್ಟಹಳ್ಳಿಯ ಒಂದು ವಠಾರದಲ್ಲಿದ್ದರಂತೆ. ಅಲ್ಲಿಂದ ಬಾಡಿಗೆಮನೆಗಳ ರಾಜಚರಿತ್ರೆ ಪ್ರಾರವಂಭವಾಗುತ್ತದೆ. ಬಾಡಿಗೆ ಮನೆಗಳನ್ನು ಖಾಲಿ ಮಾಡುವಾಗ, ಬೇರೆ ಮನೆಗೆ ಹೋಗುವಾಗ ತಮಗೆ ಯಾವುದೇ ರೀತಿಯ ಉದ್ಯೋಗ ಮೂಡಲಿಲ್ಲ, ಆದರೆ ಕಾಲಾನುಕ್ರಮದಲ್ಲಿ ಈ ಮನೆಗಳ ಬಗ್ಗೆ ಒಂದು ಮನೋಧರ್ಮ ರೂಪುಗೊಂಡಿತು ಎನ್ನುತ್ತಾರೆ. ಒಂದು ಮನೆಯೊಡನೆ ಭಾವನಾತ್ಮಕ ಸಂಬಂಧ ಉಂಟಾಗಬೇಕಾದರೆ ನಾವು ಮಾತ್ರವಲ್ಲ. ನಮ್ಮ ಹಿಂದಿನ ತಲೆಮಾರಿನವರೂ ಅಲ್ಲಿ ವಾಸಿಸಿರಬೇಕು. ಅಲ್ಲಿ ಹೆರಿಗೆ, ಮರಣ, ಮದುವೆ ಇವೆಲ್ಲ ಜರುಗಿರಬೇಕು, ಅಲ್ಲಿರುವ ಪ್ರತಿಯೊಂದು ವಸ್ತುಗಳ ಚರಿತ್ರೆಯೂ ಸೇರಿಕೊಂಡಿರುತ್ತದೆ. ಮನೆಯೆಂದರೆ ಅಲ್ಲಿ ನಡೆದ ಸಂಗತಿಗಳು ನೆನಪಾಗುತ್ತವೆ. ಇದರಲ್ಲಿ ಯಾರೋ ಮೂರನೆಯವರು ಹೇಳುವಂತೆ ಲೇಖಕರು ಹೇಳಿದ ಪ್ರಸಂಗವೊಂದಿದೆ. ತಾವು ಚಿಕ್ಕ ಮಗುವಾಗಿದ್ದಾಗ ಲಾಲ್ಬಾಗ್ಗೆ ಹೋಗಿದ್ದಾಗ ಲೇಖಕರ ಕತ್ತಿಗೆ ಹಾಕಿದ್ದ ಚಿನ್ನದ ಸರ ಕಳೆದು ಹೋಯಿತಂತೆ, “ಆ ಕಾಲದಲ್ಲಿ ಮದುವೆಯಾದ ಎಂಟು ಹತ್ತು ವರ್ಷಗಳಾದರೂ ದಾಂಪತ್ಯ ಕಚ್ಚಿಕೊಂಡಿತು ಎಂದು ಹೇಳುವ ಹಾಗಿರಲಿಲ್ಲವಂತೆ, ಯಾವ ಕಾರಣಕ್ಕಾದರೂ ಸರಿ ಗಂಡ, ಗಂಡನ ಮನೆಯವರು ಹೆಣ್ಣುಮಕ್ಕಳನ್ನು ವಾಪಸ್ ಕಳುಹಿಸಿಬಿಡುತ್ತಿದ್ದರಂತೆ. ಹೀಗಾಗಿ ಅವರ ಅಜ್ಜಿ ಮತ್ತು ತಾಯಿ ಚಿನ್ನದ ಸರ ಕಳೆದುಹೋದ ಬಗ್ಗೆ ನಡುಗಿಹೋಗಿದ್ದರಂತೆ. ಅವರ ತಂದೆಗೆ ಗೊತ್ತಾದಂತೆ ಮನೆಯಲ್ಲಿದ್ದ ಸಣ್ಣಪುಟ್ಟ ಆಭರಣಗಳನ್ನೇ ಕರಗಿಸಿ ಹೊಸ ಸರ ಮಾಡಿಸಿದರಂತೆ.
ಅವರ ತಂದೆಗೆ ಮದ್ದೂರು ತಾಲ್ಲೂಕು ಕೊಪ್ಪದಲ್ಲಿ ಒಂದು ಮನೆಯಿತ್ತು. ಆದರೆ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ದಾಯಾದಿಗಳ ಮಧ್ಯೆ ಬದುಕಿದ ಅವರ ತಂದೆಗೆ ಮನೆಯ ಬಗ್ಗೆ ಯಾವ ಭಾವನೆಗಳೂ ಇರಲಿಲ್ಲವೆನ್ನುತ್ತಾರೆ. ತಾವು ಬಾಲ್ಯದಲ್ಲಿ ಅಲ್ಲಿಗೆ ಹೋಗುತ್ತಿದ್ದಾಗ ತಮ್ಮ ಅಜ್ಜಿ ತಮ್ಮ ಪಾಡಿಗೆ ತಾವು ಮಾತಾಡಿಕೊಂಡಿರುತ್ತಿದ್ದುದನ್ನು ನೆನಪಿಸಿಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಇತಿಹಾಸವನ್ನೂ, ವರ್ತಮಾನವನ್ನು ಅಭಿನಯಿಸುತ್ತಾ, ಕಾಲವನ್ನೂ ತಾನೇ ರೂಪಿಸಿಕೊಂಡು ಕಟ್ಟಿಕೊಳ್ಳುತ್ತಾನೆಂಬುದು ತಮ್ಮ ಅರಿವಿಗೆ ಬಂದಿತು ಎನ್ನುತ್ತಾರೆ. ಅವರ ತಾಯಿಯ ಮನೆ ಬದಲಿಸುವ ಪ್ರವೃತ್ತಿಯಿಂದಾಗಿ ಒಂದೇ ಊರಿನಲ್ಲೇ ಮೂರು-ನಾಲ್ಕು ಮನೆಗಳನ್ನು ಬದಲಾಯಿಸಿದ್ದಾಗಿ ಹೀಗೆ ಮನೆ ನೋಡುತ್ತಿರುವಾಗ ಗುತ್ತಲಿನಲ್ಲಿ ಒಂದು ಮನೆ ಇಷ್ಟವಾಗಿ, ಅಲ್ಲಿಗೆ ಹೋಗಲಾಗದಿದ್ದರೂ ಆ ಮನೆಯಲ್ಲಿ ಕಾಲ್ಪನಿಕವಾಗಿ ವಾಸ ಮಾಡಿದ್ದರಂತೆ!
ಹಿಂದಿನ ನೆನಪುಗಳ ಕ್ಷಣವನ್ನು ಈಗ ಅನುಭವಿಸಿದಂತೆ ಹಾಗೂ ಈಗಲೇ ನಡೆಯುತ್ತಿರುವಂತೆ ಕಲ್ಪಿಸಿಕೊಂಡು ಬರೆದಿದ್ದಾರೆ. ದಾವಣಗೆರೆಯಲ್ಲಿ ಪ್ರಸಿದ್ಧ ಕಾದಂಬರಿ, ಚಲನಚಿತ್ರಕ್ಕೆ ವಸ್ತುವಾಗಿದ್ದ ಮಂಡಿ ಸಾಹುಕಾರರ ಪ್ರೇಯಸಿಯೋ, ಪತ್ನಿಯೋ ಆಗಿದ್ದ ರಂಗನಾಯಕಿಯ ಮನೆ ನೋಡಲು ತಾವು ಹೋಗಿ, ನೋಡಿ ಆ ಮನೆಯಿಂದ ಹೊರಬಂದಾಗ, ದೂರದಲ್ಲಿ ಮಂಡಿ ಸಾಹುಕಾರರು ಏದುಸಿರು ಬಿಡುತ್ತಾ ಬರುತ್ತಿರುವುದನ್ನೂ ಬಿಚ್ಚಿದ್ದ ಕೂದಲನ್ನು ಗಂಟು ಹಾಕಿಕೊಳ್ಳುತ್ತಾ ರಂಗನಾಯಕಿ ಮಹಡಿಯಿಂದ ಇಳಿದು ಬಂದು ಪ್ರತೀಕ್ಷೆ ಮಾಡುತ್ತಿರುವುದನ್ನೂ ನೋಡಿದರಂತೆ!
ಅವರಾಗಲೀ ಅವರ ಕುಟುಂಬದವರಾಗಲೀ ಯಾವುದೇ ತಪ್ಪು-ಪಾಪ. ಮಾಡದೇ ಇದ್ದರೂ, ಪೂಜೆ, ತೀರ್ಥಯಾತ್ರೆ ಮಾಡಿದ್ದರೂ, ಡಾಕ್ಟರರುಗಳಿಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದರೂ ತಮ್ಮ ತಾಯಿ ಹದಿನೈದು-ಇಪ್ಪತ್ತೈದು ವರ್ಷಗಳಿಂದ ಅಸ್ತಮಾ ರೋಗದಿಂದ ಬಳಲಿದ್ದಾಗಿ ಬರೆದಿದ್ದು ಅವರದೇ ಮಾತುಗಳೋ ಅಥವಾ ನಮ್ಮ ಸಮಾಜ ಸಾಮಾನ್ಯವಾಗಿ ಹೇಗೆ ಹೇಳಬಹುದೋ ಎಂಬಂತೆ ಹೇಳಿದ್ದಾರೆಯೇ? ಎಷ್ಟೇ ಕಾರ್ಯದೊತ್ತಡವಿದ್ದರೂ ಕಥೆ, ಕಾದಂಬರಿಗಳನ್ನು
ಬರೆಯುತ್ತಿದ್ದುದಾಗಿಯೂ, ಇದು ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ಸಹಾಯವಾಗುತ್ತಿತ್ತು ಎನ್ನುತ್ತಾರೆ. ತಾಯಿ-ತಂದೆಯವರೊಡನೆ ಕಳೆದ ಬಾಲ್ಯದ ಬಾಡಿಗೆ ಮನೆಗಳ ಕಥನ ಆಪ್ತವಾಗಿದ್ದು, ಇವೆಲ್ಲಾ ನಮ್ಮದೇ ಕಥೆ ಎಂದು ಅನಿಸುತ್ತದೆ.
-ಕೆ. ಪದ್ಮಾಕ್ಷಿ
ಕೃಪೆ: ಹೊಸಮನುಷ್ಯ ಆಗಸ್ಟ್ 2020
©2024 Book Brahma Private Limited.