ಅನುವಾದಕ ಹಾಗೂ ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವ ಬಾಲಸುಬ್ರಹ್ಮಣ್ಯ ಎನ್. ಹುಟ್ಟಿದ್ದು 1926 ಜನವರಿ 02 ರಂದು ಮೈಸೂರಿನ ನಂಜನಗೂಡಿನಲ್ಲಿ. ತಂದೆ ನರಸಿಂಹಶಾಸ್ತ್ರಿ, ತಾಯಿ ಲಕ್ಷ್ಮಮ್ಮ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದರು. ಸಂಸ್ಕೃತ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಇಂಗ್ಲೀಷ್-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿದ್ದರು. 'ಭಾರತೀಯ ಕಾವ್ಯ ಮೀಮಾಂಸೆ' ಬೃಹತ್ ಗ್ರಥವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಹಿರಿಮೆ ಅವರದು. ಅರಿಸ್ಟಾಟಲನ ಕಾವ್ಯಮೀಮಾಂಸೆ, ಹೆರೇಸನ ಸಾಹಿತ್ಯ ವಿಮರ್ಶೆ, ಕಲೆಗಳು ಮತ್ತು ಮಾನವ, ವೇದಾಂತಸಾರ, ಮೃಗಾಲಯದ ಮಹನೀಯರು, ಅಮರಕೋಶ ಅವರ ಪ್ರಮುಖ ಸಂಪಾದಿತ ಕೃತಿಗಳು. ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ದೊರೆತಿದೆ.