‘ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ’ ಲೇಖಕ ಎಸ್. ದಿವಾಕರ್ ಅವರ ಪ್ರಬಂಧ ಸಂಕಲನ. ಕತೆಗಾರ ಅಗೂಸ್ತೋ ಮೊಂತೆರ್ರೋಸೊ ಒಂದೇ ಒಂದು ಸಾಲಿನ ಸಣ್ಣಕತೆಯೊಂದನ್ನು ಬರೆದಿದ್ದಾನೆ. ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅತ್ಯುತ್ತಮ ಕೃತಿಗಳ ಜೊತೆಗಿಟ್ಟು ಚರ್ಚಿಸಿದ್ದು, ಈ ಚರ್ಚೆ ಒಂದು ತುದಿಯಾದರೆ, ಇದು ಕತೆಯೇ ಅಲ್ಲ ಎಂಬುದು ಇನ್ನೊಂದು ತುದಿ. ಮೊಂತೆರ್ರೋಸೊ ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಪ್ರಸ್ತಾಪಿಸುತ್ತ 'ನಿಜ, ಇದು ಸಣ್ಣಕತೆ ಅಲ್ಲ, ನಿಜಕ್ಕೂ ಒಂದು ಕಾದಂಬರಿ' ಎನ್ನುತ್ತಾನೆ.
ದಿವಾಕರ್ ಅವರ ಪ್ರಬಂಧಗಳನ್ನು ಓದುವಾಗ ಅವರೇ ಉಲ್ಲೇಖಿಸಿರುವ ಈ ಪ್ರಸಂಗ ನೆನಪಾಗುತ್ತದೆ. ಇವು ಪ್ರಬಂಧ ಮಾತ್ರವಲ್ಲ, ನಿಜಕ್ಕೂ ಇವು ಕತೆ, ಕವಿತೆ, ವ್ಯಕ್ತಿಚಿತ್ರ, ಪ್ರಬಂಧ, ಲೇಖನ ಎಲ್ಲವೂ ಹೌದು. ಆಧುನಿಕ ಸಾಹಿತ್ಯದ ಮುಖ್ಯ ಬೆಳವಣಿಗೆಯೆಂದರೆ ಪ್ರಕಾರಗಳ ಹಂಗು ಮೀರಿದ್ದು. ದಿವಾಕರರ ಪ್ರಬಂಧಗಳನ್ನು ಓದುವಾಗ ಕೆಲವೊಮ್ಮೆ ಕವಿತೆ ಓದಿದ ಅನುಭವವಾಗುತ್ತದೆ; ಕೆಲವು ಕಡೆ ಕತೆ ಓದಿದ ಉಲ್ಲಾಸವಿರುತ್ತದೆ. ಮಗದೊಮ್ಮೆ ಪ್ರಬಂಧದ ಲಹರಿಯಿದೆ. ಇನ್ನು ಕೆಲವೊಮ್ಮೆ ಅತ್ಯುತ್ತಮ ಲೇಖನದಂತೆ ಅರಿವಿಗೆ ಹಾದಿ ಮಾಡಿಕೊಡುತ್ತದೆ.
©2024 Book Brahma Private Limited.