ಯಶವಂತ ಚಿತ್ತಾಲರ ಮೂರನೆಯ ಪ್ರಬಂಧ ಸಂಕಲನ ’ಅಂತಃಕರಣ’. ಈ ಸಂಕಲನದಲ್ಲಿ ಮೂರು ಭಾಗಗಳಿವೆ. 'ಸಭಾಂಗಣದಲ್ಲಿ’, 'ಓದುವ ಕೋಣೆಯಲ್ಲಿ' ಮತ್ತು 'ಅಂತರಂಗದ ಆಳದಲ್ಲಿ' ಎಂಬ ಭಾಗಗಳಲ್ಲಿ ಒಟ್ಟು ೧೮ ಲೇಖನಗಳಿವೆ.
ಮನುಷ್ಯ ಕಟ್ಟಿಕೊಂಡ ಬದುಕು ಹಾಗೂ ಅದನ್ನು ಅರಿಯುವುದಕ್ಕೆ ಸಾಹಿತ್ಯ ಸಹಕಾರಿ ಆಗುವ ಬಗೆಗೆ ಇಲ್ಲಿನ ಲೇಖನಗಳು ಚರ್ಚಿಸುತ್ತವೆ. ಚಿತ್ತಾಲರ ಹಿಂದಿನ ಪ್ರಬಂಧ ಸಂಕಲನಗಳಾದ 'ಸಾಹಿತ್ಯ, ಸೃಜನಶೀಲತೆ ಮತ್ತು ನಾನು' (1981) ಹಾಗೂ 'ಸಾಹಿತ್ಯದ ಸಪ್ತಧಾತುಗಳು' (2000) ಕೃತಿಗಳಲ್ಲಿನ ಚರ್ಚೆಯನ್ನು ಮುಂದುವರೆಸುತ್ತವೆ. ಹಾಗೂ ಕೆಲವು ಮುಖ್ಯ ವಾದಗಳನ್ನು ಸಮರ್ಥವಾಗಿ ಮಂಡಿಸುತ್ತವೆ.
ಕೃತಿಯ ಕುರಿತು ವಿಮರ್ಶಕ ಪುರುಷೋತ್ತಮ ಬಿಳಿಮಲೆ ಅವರು ’ಕಲಾಕೃತಿಯೊಂದರ ಅನನ್ಯತೆಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡದ ಚಿತ್ತಾಲರು ಇಲ್ಲಿನ ಎಲ್ಲ ಲೇಖನಗಳಲ್ಲಿ ಮತ್ತೆ ಮತ್ತೆ ಅದರ ಬಗ್ಗೆ ಬರೆಯುತ್ತಾರೆ. ಒಂದು ಮಾಧ್ಯಮ ಇನ್ನೊಂದು ಮಾಧ್ಯಮಕ್ಕೆ ಸೇರಿದ ಕಾರ್ಯವನ್ನು ಕಸಿದುಕೊಳ್ಳುವುದಿಲ್ಲ. ಕಣ್ಣಿಗೆ ಸಾಧ್ಯವಿದ್ದದ್ದು ಮೂಗಿಗೂ ಹೇಗೆ ಸಾಧ್ಯವಾದೀತು, ಸಾಧ್ಯವಿದ್ದಿದ್ದರೆ ನಮಗೇಕೆ ಕಣ್ಣು ಇರುತ್ತಿತ್ತು? (ಪು. 15) ಎಂದು ಪ್ರಶ್ನಿಸುವ ಅವರು, ಭಾಷೆಯ ಮೂಲಕ ಸಾಹಿತ್ಯ ಕೃತಿಗಳಲ್ಲಿ ಈ ಅನನ್ಯತೆ. ಪ್ರತೀತಗೊಳ್ಳುವ ಪರಿಯನ್ನು ತಾಳ್ಮೆಯಿಂದ ವಿವರಿಸುತ್ತಾರೆ. ಹಾಗೆ ವಿವರಿಸುವಾಗ ಸಂಭವಿಸುವ ಈ ಚೋದ್ಯಕ್ಕೆ ತನಗೇ ತಾನೇ ಚಕಿತಗೊಳ್ಳುತ್ತಾರೆ, ಸಂಭ್ರಮಿಸುತ್ತಾರೆ ಮತ್ತು ಕುತೂಹಲಿಯಾಗುತ್ತಾರೆ’ ಎಂದು ವಿಶ್ಲೇಷಿಸಿದ್ದಾರೆ.
©2024 Book Brahma Private Limited.