ಈರಪ್ಪ ಎಂ. ಕಂಬಳಿ ಅವರು ಬರೆದ ಲಲಿತ ಪ್ರಬಂಧ-ಹೀಗೊಂದು ಟಾಪ್ ಪ್ರಯಾಣ. ಉತ್ತರ ಕರ್ನಾಟಕದ ಹಳ್ಳಿಗಾಡಿನ ಪ್ರದೇಶದಲ್ಲಿ ಸಾರಿಗೆ ಸೌಲಭ್ಯ ಕಡಿಮೆ ಸಿಕ್ಕ ಸಾರಿಗೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಪ್ರಯಾಣಿಸುವುದು ಅನಿವಾರ್ಯ. ಈ ಅನಿವಾರ್ಯತೆಯನ್ನೇ ಲೇಖಕರು ಉತ್ತಮ ಲಲಿತ ಪ್ರಬಂಧವಾಗಿಸಿದ್ದಾರೆ. ವಾಹನದ ಮೇಲೆ ಕುಳಿತು ಹೋಗುವಾಗ ಎಡ-ಬಲದ ಪ್ರಕೃತಿಯ ಸೌಂದರ್ಯ ಸವಿಯುವುದೂ ಸೇರಿದಂತೆ ಅಲ್ಲಿಯ ಅನುಭವವೇ ವಿಶಿಷ್ಟ ಎಂದು ತಮ್ಮದೇ ಶೈಲಿಯಲ್ಲಿ ಓದುಗರ ಗಮನ ಸೆಳೆಯುತ್ತಾರೆ. ನಗರದ ಜನತೆಗೆ ಇದು ಅಪರಾಧ ಹಾಗೂ ಅಪಘಾತಕ್ಕೆ ಎಡೆ ಮಾಡಿಕೊಡುತ್ತದೆ ಎಂದೆನಿಸಿದರೂ ಜನತೆಯ ಅನಿವಾರ್ಯತೆ ಅಪರಾಧವಾಗಿಸುವುದಿಲ್ಲ ಹಾಗೂ ಅಪಘಾತವಿಲ್ಲದೇ ಪ್ರಯಾಣಿಸುತ್ತಲೇ ಬಂದ ಪರಿಯನ್ನು ಹೃದಯಂಗಮವಾಗಿ ಮತ್ತು ವ್ಯಂಗವಾಗಿ ಚಿತ್ರಿಸಿದ್ದಾರೆ. 10ನೇ ತರಗತಿಗೆ ಈ ಕೃತಿಯು ಪಠ್ಯವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2003ರ ಪುಸ್ತಕ ಬಹುಮಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ 2003ರ ಕುಂಬಾಸ ದತ್ತಿ ಪ್ರಶಸ್ತಿ ಲಭಿಸಿದೆ.
(ಹೊಸತು, ಜೂನ್, 2015, ಪುಸ್ತಕದ ಪರಿಚಯ)
ಹುಟ್ಟಿ-ಬೆಳೆದು-ತೊರೆದು ಬಂದ ಹಳ್ಳಿಗಾಡಿನ ಪರಿಸರ, ನಗರ ಜೀವನದ ಸಹಿಸಲೇ ಬೇಕಾಗಿರುವ ಅನಿವಾರ್ಯ ಪ್ರಸಂಗ – ಎರಡನ್ನೂ ಬಿಟ್ಟು ಕೊಡಲಾರದ ಇಕ್ಕಟ್ಟಿನ ಪರಿಸ್ಥಿತಿ ಲೇಖಕ ಶ್ರೀ ಈರಪ್ಪ ಕಂಬಳಿ ಅವರದ್ದು. ಎರಡೂ ಕಡೆ ಜೋಕಾಲಿ ತೂಗಿ ಸಮತೋಲನ ಕಾಪಾಡಿ ಇಲ್ಲಿನ ಬರಹಗಳನ್ನು ರೂಪಿಸಿದ್ದಾರೆ. ಹಲವು ವಿಸ್ಮಯಗಳು, ಘಟನೆಗಳು ಲೇಖಕರ ಮನದಲ್ಲಿ ಅಷ್ಟೊತ್ತಿ ನಿಂತು ವಿಚಲಿತರನ್ನಾಗಿಸಿವೆ. ಅವು ಇಂದಿನ ಬದಲಾದ ಪರಿಸರ, ಆಚರಣೆಗಳು, ಮನುಷ್ಯನ ಸ್ವಭಾವಗಳು ಮುಂತಾಗಿ ಹಲವು ದಿಕ್ಕುಗಳಲ್ಲಿ ಹರಿದು ಹಂಚಿಹೋಗಿ ಪ್ರಬಂಧಗಳ ಮೂಲಕ ಒಂದಾಗಿ ಮೂಡಿಬಂದಿವೆ. ಕಣ್ಣ ಮುಂದಿನ ಅಥವಾ ಅನುಭವದ ಯಾವ ವಿಷಯವಾದರೂ ಸರಿಯೆ, ಅದಕ್ಕೊಂದು ತನ್ನದೇ ಶೈಲಿಯ ವಿಮರ್ಶಾತ್ಮಕ ರೂಪ ಕೊಡುತ್ತಾರೆ. ಇಂದು ನಗರಗಳ ಜೀವನ ಸಹಿಸಲಸಾಧ್ಯವಾಗಿ ಜಿಗುಪ್ಪೆ ತರಿಸಿದ್ದು ನಿಜವಾದರೂ ಹಳ್ಳಿಗಳೇನೂ ಉದ್ಧಾರವಾಗಿಲ್ಲ. ಅವು ಸುಖದ ಸುಪ್ಪತ್ತಿಗೆಗಳೇನೂ ಅಲ್ಲ. ಇಲ್ಲಿದ್ದಾಗ ಅಲ್ಲಿ ಅಲ್ಲಿದ್ದಾಗ ಇಲ್ಲಿ ಮನಸ್ಸು ತುಡಿಯುವುದು ಸಹಜ. ಆದರೆ ಒಂದು ಮಾತು ನಿಜ ಅದೇನೆಂದರೆ ಈರಪ್ಪ ಕಂಬಳಿಯವರಂತೆ ಅನೇಕ ಮಂದಿಗೆ ಹಳ್ಳಿಯ ಪರಿಸರ ಸುಂದರ ಬಾಲ್ಯವನ್ನು ನೀಡಿ ನೆನಪಿಸಿಕೊಳ್ಳುವಂಥ ಸಹ್ಯ ವಾತಾವರಣ ನೀಡಿದೆ. ಪುಸ್ತಕದುದ್ದಕ್ಕೂ ತಿಳಿಹಾಸ್ಯ ಮಿಂಚಿದೆ. ವಿಸ್ತಾರವಾದ ವಿಷಯ ಮಂಡನೆ ಓದುಗನ ತಾಳ್ಮೆ ಪರೀಕ್ಷಿಸುತ್ತದೆ. ಮನಸ್ಸನ್ನು ಖುಷಿಗೊಳಿಸುವ ಶೈಲಿಯೂ ಆತ್ಮೀಯತೆಯದೇ.
©2024 Book Brahma Private Limited.