ಕನ್ನಡ ಸಾಹಿತ್ಯಲೋಕಕ್ಕೆ ಹೊಸದಾಗಿರುವ ಕೊಲೆಗಡುಕತನವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲಾಗಿದೆ. ಆನುಭಾವಿಕ ಸಾಧನೆಯ ವಿಶಿಷ್ಟಾನುಭವವನ್ನು ದೈವಿಕದ ಭಾಷೆಯೊಳಗೆ ಒಡೆಯುವ ಕಷ್ಟವನ್ನು ಅಥವಾ ನಡೆಯಲಾಗದ ನುಡಿಯನಾಡುವ ಕಷ್ಟವನ್ನು ಶರಣರು ’ನುಡಿಸೂತಕ’ದ ರೂಪಕದಲ್ಲಿ ಹೇಳಿದರು. ಅದಕ್ಕೆ ಹೋಲಿಸಿದರೆ ನಮ್ಮದು ಬೆತ್ತಲೆ ಸೂತಕದ ಕಾಲ; ಸಹಜವಾಗಿ ಸ್ವತಂತ್ರವಾಗಿ ಆಡಿದ ಮಾತು-ಬರೆದ ಬರೆಹ, ಮೃತ್ಯುರೂಪ ತಾಳಿ ಎರಗುವ ಕಾಲ; ಇಷ್ಟಕ್ಕೇ ಮುಗಿಯಲಿಕ್ಕಿಲ್ಲ ಎಂಬಷ್ಟು ಆತಂಕ ಹುಟ್ಟಿಸಿರುವ ಕಾಲ ಕೂಡ. ಈ ಹಿನ್ನೆಲೆಯಲ್ಲಿ ಸೈದ್ದಾಂತಿಕ ಅತ್ಯಂತ ಪರಿಣಾಮಗಳನ್ನು ಎದುರಿಸಲು ನಾಡು ಸಜ್ಜುಗೊಳಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾಗಿ ಕೊಲೆಗೊಂಡವರು ತಮ್ಮ ಚಿಂತನೆಯ ಮೂಲಕ ಬಿಕ್ಕಟ್ಟನ್ನು ದಿಟ್ಟವಾಗಿ ಎದುರಿಸುದ ಹಾದಿಯನ್ನೂ ಬಿಟ್ಟು ತೆರಳಿದ್ದಾರೆ. ಅದರಲ್ಲಿ ನಡೆಯುತ್ತ, ಅದರ ಪರಿಮಿತಿಗಳನ್ನು ವಿಮರ್ಶಿಸುತ್ತ, ಅವರ ವಾರಸುದಾರಿಕೆ ಪಡೆದುಕೊಳ್ಳುವ ವಿಧಾನವನ್ನು ಒಂದು ಪ್ರಜ್ಞಾವಂತ ಸಮುದಾಯವಾಗಿ ಕಂಡುಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಾಹಿತ್ಯ ಸಂಸ್ಕೃತಿ ಚಳುವಳಿಗಳ ವಿದ್ಯಾರ್ಥಿಯೊಬ್ಬನ ಸ್ಪಂದನೆಗಳಾಗಿ ಇಲ್ಲಿನ ಲೇಖನಗಳಿವೆ, ’ಪ್ರತಿಸಂಸ್ಕೃತಿ','ಕತ್ತಿಯಂಚಿನ ದಾರಿ' 'ಧರ್ಮ ಪರೀಕ್ಷೆ’, ’ಚಿಂತನೆಯ ಹಾಡು', 'ನೇತುಬಿದ್ದ ನವಿಲು'ಗಳ ಬಳಿಕ ಪ್ರಕಟವಾಗುತ್ತಿರುವ ಸಂಕಲನವಿದು.
ನೆತ್ತರ ಸೂತಕ ಕೃತಿಯ ಕುರಿತು ಲೇಖಕರಾದ ರಹಮತ್ ತರೀಕೆರೆ ಅವರ ಮಾತುಗಳು.
©2024 Book Brahma Private Limited.