ಜಾತಿ ಜನಗಣತಿ ಹಾಗೂ ಮೀಸಲಾತಿಯನ್ನು ವಿಶ್ಲೇಷಿಸುವ ಕೃತಿ ’ಅಸಮಾನ ಭಾರತ’. ಕೃತಿಯ ಸಂಪಾದಕರು ಡಾ. ಎಚ್.ಎಸ್. ಅನುಪಮಾ, ಡಾ. ಜಿ. ಕೃಷ್ಣ ಹಾಗೂ ಕೆ. ಎಲ್. ಚಂದ್ರಶೇಖರ್ ಐಜೂರ್. ಲಡಾಯಿ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ.
ಕೃತಿ ಕುರಿತು ಪ್ರಸ್ತಾಪಿಸುತ್ತಾ ಹಿರಿಯ ಲೇಖಕ, ಚಿಂತಕ ದೇವನೂರ ಮಹಾದೇವ “ಒಂದೇ ಥರ ಇದ್ದರೂ, ಒಂದೇ ಸ್ಥಿತಿಯಲ್ಲಿ ಇದ್ದರೂ, ಬೇರೆ ಬೇರೆ ಖಾತ್ರಿಯಾಗಿದ್ದರೆ ಆ ಇಬ್ಬರ ನಡುವೆ ಉಂಟಾಗುವ ದೂರ ಅಳತೆಗೂ ಸಿಗದಷ್ಟು ದೂರವಾಗಿರುತ್ತದೆ. ಭಾರತದ ಮನೋಭೂಪಟದಲ್ಲಿ ಜಾತಿ ಎಂದಾಕ್ಷಣ ಶ್ರೇಣೀಕೃತ ವ್ಯವಸ್ಥೆಯೇ ನಿಲ್ಲುವುದು. ಅದಕ್ಕಾಗಿ ಜಾತಿ ಎಂಬ ಪದ| ಬಳಸುವುದನ್ನೇ ಬಿಟ್ಟು ನಾವು ನೋಡಬಹುದೇ?" ಎಂದು ಪ್ರಶ್ನಿಸುತ್ತಾರೆ.
'ಜಾತಿ ಎಂದರೆ ಏನೆಂದು ತೋರಿಸುವುದು? ಅದಕ್ಕೆ ಬಣ್ಣವಿಲ್ಲ, ವಾಸನೆಯಿಲ್ಲ, ರೂಪವಿಲ್ಲ. ಆದರೆ ಅದರಷ್ಟು ಕಟ್ಟುನಿಟ್ಟಾಗಿ, ನಿಖರವಾಗಿ ನಡೆಯುವುದು ಈ ದೇಶದಲ್ಲಿ ಇನ್ಯಾವುದೂ ಇಲ್ಲ, ನಮಗೆ ಆತ್ಮಾವಲೋಕನ ಇಲ್ಲದಿದ್ದರೆ ಯಾವತ್ತೂ ಈ ಜಾತಿ ವಿಷವೃತ್ತದಿಂದ ಹೊರಬರಲು ಆಗುವುದಿಲ್ಲ. ದಲಿತರನ್ನು ದಲಿತರನ್ನಾಗಿ ಮಾಡಲು ನಾವೇ ಕಾರಣ ಅಲ್ಲವೆ ಎನ್ನುವ ಆತ್ಮಪರೀಕ್ಷೆ ಬೇಕು, ಅದನ್ನು ದಲಿತರು ಅಥವಾ ಅಲೆಮಾರಿ ಸಮುದಾಯ ನಮಗೆ ಹೇಳಬೇಕಾಗಿಲ್ಲ.' ಎಂಬುದು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಅಭಿಪ್ರಾಯ.
ಪತ್ರಕರ್ತ ದಿನೇಶ್ ಅಮೀನ್ ಮಟ್ಟು “ಜಾತಿ ನಾಶ ಆಗುವುದು ಜಾತಿ ಕುರುಡಿನಿಂದಲ್ಲ, ಅದಕ್ಕೆ ಮುಖಾಮುಖಿಯಾಗುವ ಮೂಲಕ ಜಾತಿಯನ್ನು ಎದುರಿಸಬೇಕು, ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು' ಎನ್ನುತ್ತಾರೆ.
"ಜಾತಿವ್ಯವಸ್ಥೆಯನ್ನು ಬಾಯಿ ಮಾತಿನ ಹೊರತಾಗಿ, ತಮ್ಮ ಮಿಕ್ಕೆಲ್ಲ ಚಟುವಟಿಕೆಗಳ ನೆಲೆಯಲ್ಲಿ ಒಪ್ಪಿಕೊಂಡಿರುವ (ಇದು ಎಲ್ಲಾ ಜಾತಿಗಳಿಗೂ ಅನ್ವಯಿಸುತ್ತದೆ) ದೊಡ್ಡ ಜನವರ್ಗವನ್ನು ಒಳಗೊಂಡಿರುವ ಭಾರತೀಯ ಸಮಾಜದಲ್ಲಿ ಅಸಮಾನತೆ ಅಂತರ್ಗತವಾಗಿದೆ." ಎಂಬುದು ಚಿಂತಕ ಡಿ. ಎಸ್. ನಾಗಭೂಷಣ ಅವರ ಮಾತು.
'ಮೀಸಲಾತಿಯು ಜಾರಿಗೊಂಡು ಅರ್ಧ ಶತಮಾನವೇ ಕಳೆದುಹೋಗಿದೆ. ಆದರೂ ಜಾತಿಗಳು ಸುಧಾರಣೆಗೊಂಡಿಲ್ಲ. ಅಂಬೇಡ್ಕರ್ ಕನಸು ನನಸಾಗಿಲ್ಲ. ದಲಿತರ ವಿಮುಕ್ತಿಯ ಹಾದಿಯು ದಶಕದಿಂದ ದಶಕಕ್ಕೆ ಸಂಕೀರ್ಣವಾಗುತ್ತಿದ್ದು ಇಡೀ ದೇಶದ ಎಲ್ಲ ಕೆಳ ಸಮುದಾಯಗಳು ಭಗ್ನ ಸ್ಥಿತಿಯಲ್ಲಿ ಭ್ರಷ್ಟ ರಾಶಿಯ ಕಾರಣದ ಹಿಡಿತದಲ್ಲಿ ಸಾಗುತ್ತಿವೆ.' ಎಂದಿದ್ದಾರೆ ಡಾ. ಮೊಗಳ್ಳಿ ಗಣೇಶ್.
©2024 Book Brahma Private Limited.