ರಾಮ ಮಂದಿರ ಏಕೆ ಬೇಡ?

Author : ಕೆ.ಎಸ್. ಭಗವಾನ್

Pages 168

₹ 160.00




Year of Publication: 2019
Published by: ಅಭಿಶೃತಿ ಪ್ರಕಾಶನ
Address: #10, ಉದಯರವಿ ರಸ್ತೆ, ಕುವೆಂಪುನಗರ, ಮೈಸೂರು
Phone: 9731153048

Synopsys

ರಾಮಾಯಣ ಪುರಾಣದಲ್ಲಿ ಗೊಂದಲಗಳು, ಮಿಥ್ಯ ಅರ್ಥಗಳು ಇವೆ. ವಾಲ್ಮೀಕಿ ವಿರಚಿತ ರಾಮಾಯಣ ಕೇವಲ ಅಸಮಾನತೆ ಮತ್ತು ಭೇ ಭಾವನೆಯ ಮೇಲು ಕೀಳಿನ ಜಾತಿ/ವರ್ಣ ವ್ಯವಸ್ಥೆಯನ್ನು ಚಿತ್ರಿಸುತ್ತದೆ ಎಂಬುದು ಈ ಕೃತಿಯ ತಿರುಳು. ಮಾನವರಿಗೆ ಮಂದಿರವೇಕೆ ಬೇಕು ಎಂಬುದು ಈ ಕೃತಿಯ ಲೇಖಕರಾದ ಕೆ.ಎಸ್. ಭಗವಾನ್‌ ಅವರ ವಾದ. ಈ ಕೃತಿಯೂ ಒಂದೇ ವರ್ಷದಲ್ಲಿ ಎರಡು ಬಾರಿ ಮುದ್ರಣವಾಗಿದ್ದು, ಒಂದನೇ ಮುದ್ರಣವನ್ನು 2018ರಲ್ಲಿ ಲಡಾಯಿ ಪ್ರಕಾಶನವು ಪ್ರಕಟಿಸಿತ್ತು. 

About the Author

ಕೆ.ಎಸ್. ಭಗವಾನ್
(14 July 1945)

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...

READ MORE

Reviews

ಪುರಾಣ ರೂಪಕಗಳನ್ನು ಮುರಿಯುವ ರಾಮ ಮಂದಿರ ಯಾಕೆ ಬೇಡ?: ವಾರ್ತಾಭಾರತಿಯಲ್ಲಿ

ಬಹು ರೂಪಿ ರಾಮನನ್ನು ಮರೆತ ರಾಮ ಜಿಜ್ಞಾಸೆ

ಪ್ರಕಟವಾದ ಒಂದು ವರ್ಷದೊಳಗೆ ಮೂರನೇ ಮುದ್ರಣ ಕಾಣುತ್ತಿರುವ ಈ ಕೃತಿಯು ರಾಮ ಮಂದಿ ಶಿವನೊಂದಿಗೆ ರಾಮನನ್ನು ಹೋಲಿಸುತ್ತಾ ವಾಲ್ಮೀಕಿ ರಚಿಸಿದ ಈ ರಾಮ ಶಿವನ ಎತ್ತರಕ್ಕೆ ಏರುವುದಿಲ್ಲ ಎನ್ನುತ ರಾಮನನ್ನು ಅಂತ್ಯಂತ ನಿಷ್ಠುರ ನುಡಿಗಳಿಂದಲೇ ವಿಮರ್ಶಿಸುತ್ತಾರೆ.

ರಾಮನ ಆಸ್ತಿತ್ವ ಚಿತ್ರಣಗಳಲ್ಲಿ ಚಾತುರ್ವಣ್ರ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದೆ. ಪುರೋಹಿತಶಾಹಿ ಬಲಗೊಂಡು ಅನೇಕ ವಧೆ, ಸಂಹಾರ ನಡೆಸುವ ರಾಮನ ಚಿತ್ರವನ್ನು ಕುಬ್ಜಗೊಳಿಸಿವೆ. ಭಗವಾನರು ತಾಟಕಿ, ಮಾರೀಚ, ಸುಬಾಹು, ಖರ-ದೂಷಣ, ಶಂಬೂಕ, ವಾಲಿ, ಮಾಯಮೃಗ- ಹೀಗೆ ವಧೆಗಳ ಪಟ್ಟಿ ಬೆಳೆಸುತ್ತಾರೆ. ದೈವತ್ವದ ಮೂಲ ನೆಲೆಯ ಸಂಪರ್ಕವಿರದ ಬೇರೆಯೇ ಆದ ರಾಮ ಇಲ್ಲಿ ಕಾಣಿಸುತ್ತಾನೆ. ಲೇಖಕರು ರಾಮನ ಮಾನವೀಯ ಸಂಬಂಧದ ಘಟನೆಗಳು ಕಾವ್ಯದಲ್ಲಿ ಅಪಾರವಾಗಿದ್ದರೂ ಇಲ್ಲಿನ ಉದ್ದೇಶಕ್ಕಾಗಿ ಅವನ್ನು ಯಾಕೆ ಸೇರಿಸಿಲ್ಲವೊ ತಿಳಿಯದು.

ಇಲ್ಲಿ ರಾಮ ಮಂದಿರ ನಿರ್ಮಾಣದ ರಾಜಕಾರಣದ ತಂಟೆಗೆ ಹೋಗದೆಯೇ ರಾಮನನ್ನಷ್ಟೇ ಕೇಂದ್ರೀಕರಿಸಿದ್ದರೂ ಧ್ವಂಸಮಯೀ ರಾಮನನ್ನಷ್ಟೆ ಚಿತ್ರಿಸಿದ್ದಾರೆ. ರಾಮನನ್ನು ಮನುಷ್ಯನಾಗಿಯಷ್ಟೇ ನೋಡಿರುವುದರಿಂದಾಗಿ ಲೇಖಕರು ವಿವಾದಗಳನ್ನು ಸಭೆ ಸಮಾರಂಭಗಳಲ್ಲಿ ಮೈಮೇಲೆ ಎಳೆದುಕೊಂಡಂತೆ ಇಲ್ಲಿಯೂ ಎಳೆದುಕೊಂಡಿದ್ದಾರೆ. ಭಾರತೀಯ ಮನಸಿನೊಳಗೆ ಭಾರತೀಯ ಬಹುಭಾಷೆಗಳಲ್ಲಿ ಚಿತ್ರಿತವಾಗಿರುವ ಬಹುರೂಪಿ ರಾಮನಿರುವಾಗ ಇವರು ವಾಲ್ಮೀಕಿಯ ಆಚೆ ಈಚೆ ಹೋಗುವುದಿಲ್ಲವೇಕೆ?

ಶಂಬೂಕ ವಧೆ, ಸೀತಾ ಪರಿತ್ಯಾಗ ಇವರೆಡೂ ಪ್ರಸಂಗಗಳು ರಾಮನ ವ್ಯಕ್ತಿತ್ವವನ್ನು ಕಳೆಗುಂದಿಸಿರುವುದಷ್ಟೇ ಅಲ್ಲ ದೈವದ ನೆಲೆಯಲ್ಲಿ ರಾಮನನ್ನು ನೋಡುವ ಮನಸ್ಸುಗಳಿಗೆ ಇಷ್ಟವಾಗುವುದಿಲ್ಲ. ಈ ಬಗ್ಗೆ ಕೃತಿಕಾರರು ವಿಷಾದ ಹೊಂದಿರದೆ ದಲಿತತ್ವ ಮತ್ತು ಸ್ತ್ರೀ ನಿರ್ಬಲೀಕರಣಗಳೆರಡೂ ರಾಮನ ವಿರುದ್ದದ ಬಹುದೊಡ್ಡ ದೌರ್ಬಲ್ಯಗಳೋ ಎಂಬಂತೆ ಚಿತ್ರಿಸಿದ್ದಾರೆ. ರಾಮರಾಜ್ಯ ಇಲ್ಲಿ ನಿರಾಕರಿಸಲಾಗುತ್ತದೆ. ರಾಮ ಮತ್ತು ಕೃಷ್ಣ ಇಬ್ಬರೂ ಯುದ್ಧವನ್ನು ಬೆಂಬಲಿಸಿದವರಾದ್ದರಿಂದ ದೈವತ್ವದ ವ್ಯಕ್ತಿ ಯುದ್ಧಪಿಪಾಸಿಯೆ? ಎಂಬ ಪ್ರಶ್ನೆ ನಮ್ಮೆದರು ನಿಲ್ಲುತ್ತದೆ. ಹಾಗಾದರೆ ಗಾಂಧಿ, ಲೋಹಿಯಾ, ವಿವೇಕಾನಂದರೂ ಕಂಡ ರಾಮ ಯಾವ ಬಗೆಯವನಾಗಿದ್ದ ಎಂಬ ಹೊಸ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಲೇಖಕರಿಗೆ ಆ ರಾಮ ಬೇಕಿಲ್ಲ.

ರಾವಣನಾದರೋ ಶಿವ ಭಕ್ತ, ರಾಮನಾದರೋ ದುಷ್ಟ ಶಿಕ್ಷಣದ ಪ್ರತಿಪಾದಕ. ಹಾಗಾದರೆ ಭಕ್ತಿ ಯಾರನ್ನು ಹೇಗೆ ಪ್ರಚೋದಿಸುತ್ತದೆ? ಹೇಗೆ ಆವಿರ್ಭಸುತ್ತದೆ? ಹೀಗಾಗಿ ಜನಪದರಲ್ಲಿ ಉಳಿದಿರುವ ರಾಮ ಭಗವಾನರ ರಾಮ ಇಬ್ಬರೂ ಉತ್ತರ-ದಕ್ಷಿಣ ಆಗುತ್ತಾರೆ. ಈ ವೈರುಧ್ಯದಲ್ಲಿ ಮತ್ತೆ ಮತ್ತೆ ಸೀತೆಯ ವ್ಯಕ್ತಿತ್ವ, ಚಾರಿತ್ಯ ಮಸುಕಾಗಿ ಬಿಡುತ್ತದೆ. ಭಗವಾನರು ಆ ದಿಸೆಯಲ್ಲಿ ಯೋಚಿಸದೆ ಹೆಚ್ಚಿನ ಪಾಲು ರಾಮನ ಯುದ್ಧೋನ್ಮಾದದ ವಿವರಗಳಿಗೆ ಮೀಸಲಿಟ್ಟು ಬಿಟ್ಟಿದ್ದಾರೆ ಎನಿಸುತ್ತದೆ.

168 ಪುಟಗಳ ಈ ಕೃತಿ ರಾಮ ಮಂದಿರ ಏಕೆ ಬೇಡವೆಂದು ಹೇಳುವಾಗ ಇವರ ನಿರೂಪಣೆ ಮತೀಯ ಮೂಲಭೂತವಾದಿಗಳ ವಿರುದ್ಧ ತಿರುಗುತ್ತದೆ. ಆದರೆ, ಆದರೆ ಇದೇ ವೇಳೆಯಲ್ಲಿ ರಾಮನನ್ನು ಭಾರತೀಯ ಬಹು ಸಂಸ್ಕೃತಿಯು ಮಾನವೀಯ ನೆಲೆಗಲ್ಲಿ ಗ್ರಹಿಸುವುದರ ಕಡೆಗೆ ಲೇಖಕರು ಕಣ್ಣೆತ್ತಿಯೂ ನೋಡಿಲ್ಲ. ಹಾಗಾಗಿ ಈ ಸೌಹಾರ್ದ ನೆಲೆಯ ಭಾರತೀಯ ರಾಮ, ಧಾರ್ಮಿಕ ರಾಮ, ಜಾನಕಿ ವಲ್ಲಭ ರಾಮ ಇಲ್ಲಿ ಅದೃಶ್ಯವಾಗಿದ್ದಾರೆ. ಭಗವಾನರ ರಾಮ ಮೇಲ್ಮುಖ ಚಲನೆಯ ಬದಲು ನಿರಾಕರಣೆಯೆಡೆಗೆ ಹೆಚ್ಚು ವಾಲಿದ್ದಾನೆ. ಹೀಗಾಗಿಯೆ ಗ್ರಹಿಕೆಗಳಿಗೆ ಇಲ್ಲಿ ಗ್ರಗಣ ಹಿಡಿದಂತಾಗಿದೆ. ಕಾಲಕಾಲಕ್ಕೆ ರಾಮ ಕಾವ್ಯದ ಪ್ರಕ್ಷಿಪ್ತಗಳಲ್ಲಿ ವೈಭವೀಕರಣಕ್ಕೆ ಗುರಿಯಾದರೆ, ಈ ಇನ್ನೊಂದು ತುದಿಯಲ್ಲಿ ಸಂಹಾರಕನಾಗಿಯಷ್ಟೇ ಉಳಿದದ್ದರಿಂದ ಅವನ ಬಹುಮುಖಿ ಗುಣಕ್ಕೆ ಇಲ್ಲಿ ಕತ್ತಲೆ ಆವರಿಸಿದೆ.

-ಎಂ. ಚಂದ್ರಶೇಖರಯ್ಯ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಸೆಪ್ಟಂಬರ್‌ 2019)

Related Books