ಸ್ತ್ರೀವಾದ ಇಪ್ಪತ್ತನೇ ಶತಮಾನದ ಒಂದು ಮಹತ್ವದ ಬೆಳವಣಿಗೆ, ಜಗತ್ತಿನ ಆಸಕ್ತಿಯನ್ನು ತನ್ನೆಡೆ ಸೆಳೆದುಕೊಂಡಿರುವ ವಿಷಯ. ಸ್ಥಾಪಿತ ಸಂಸ್ಕೃತಿಗೆ ಪ್ರತಿಯಾಗಿ ಪರ್ಯಾಯ ಸಂಸ್ಕೃತಿಯನ್ನು ರೂಪಿಸುವ ಸಾಧ್ಯತೆಯನ್ನು ಒಳಗೊಂಡಿರುವುದು ಇದರ ವಿಶೇಷತೆ. ಹಾಗಾಗಿಯೇ ಬುದ್ದಿಜೀವಿಗಳ, ಸಮಾಜ ಸುಧಾರಕರ, ರಾಜಕಾರಣಿಗಳ, ಜನಸಾಮಾನ್ಯರ ಕುತೂಹಲವನ್ನು ಸ್ತ್ರೀವಾದ ಕೆರಳಿಸಿದೆ.
ಯಾವುದೇ ಹೊಸ ವಿಚಾರಧಾರೆ ಸ್ವೀಕಾರಾರ್ಹವಾಗಬೇಕಾಗಿದ್ದಲ್ಲಿ ಅದಕ್ಕೆ ಒಂದು ತಾತ್ವಿಕ ನೆಲೆಗಟ್ಟು ಬೇಕಾಗುತ್ತದೆ, ಅದು ತರ್ಕಬದ್ಧವಾಗಿರಬೇಕಾಗುತ್ತದೆ. ಸ್ತ್ರೀವಾದ ಆ ದಿಸೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂಬುದು ಸಂತಸದ ವಿಷಯ. ಅದರೊಂದಿಗೆ ಪ್ರಾದೇಶಿಕ, ತಾತ್ವಿಕ ಭಿನ್ನತೆಯ ಕಾರಣದಿಂದಾಗಿ ಸ್ತ್ರೀವಾದದ ಅನೇಕ ಪ್ರಭೇದಗಳು ರೂಪುಗೊಂಡಿವೆ. ಬೆಳವಣಿಗೆಯ ಈ ಹಂತದಲ್ಲಿ ಅದು ಅನಿವಾರ್ಯ ಹಾಗೂ ಸಹಜ ಕೂಡಾ. ಕಾರಣ, ಸ್ತ್ರೀವಾದ ಕೇವಲ ಒಂದು ಒಣ ತತ್ವವಲ್ಲ, ಜೀವನದೊಂದಿಗೆ, ಜೀವನದ ಪ್ರತಿ ವಿವರದೊಂದಿಗೆ ನೇರ ಸಂಬಂಧ ಹೊಂದಿರುವ ಒಂದು ಶಕ್ತಿಯುತ ಪರಿಕಲ್ಪನೆ. ಇಂಗ್ಲೀಷಿನಲ್ಲಿ ಸ್ತ್ರೀವಾದದ ಬಗ್ಗೆ ಹಲವಾರು ಕೃತಿಗಳು ಪ್ರಕಟವಾಗಿವೆ.
ಆದರೆ ಕನ್ನಡದಲ್ಲಿ ಕೆಲವೊಂದು ಪುಸ್ತಕಗಳು ಬಂದಿದ್ದರೂ ಕನ್ನಡದ ಓದುಗರಿಗೆ ಇನ್ನೂ ಚಿರಪರಿಚಿತವಾಗದ ವಿಷಯವಾಗಿ ಉಳಿದಿದೆ. ಸ್ತ್ರೀವಾದದ ನೆಲೆ, ಅದರ ಬೆಳವಣಿಗೆ, ಪ್ರಭೇದಗಳು ಮುಂತಾದ ತಾತ್ವಿಕ ವಿಷಯಗಳ ಬಗ್ಗೆ ಕೆಲವೊಂದು ಮೂಲಭೂತ ಮಾಹಿತಿ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಲೇಖಕಿಯರ ಸಂಘವು 'ಸ್ತ್ರೀವಾದ ಪ್ರವೇಶಿಕೆ'ಯ ಯೋಜನೆಯನ್ನು ಹಮ್ಮಿಕೊಂಡಿತು ಹಾಗೂ ಪುಸ್ತಕವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಸಂಘದ ಉಪಾಧ್ಯಕ್ಷೆ ಡಾ. ಬಿ. ಎನ್. ಸುಮಿತ್ರಾಬಾಯಿ ಮತ್ತು ಕಾರ್ಯದರ್ಶಿ ಶ್ರೀಮತಿ ಎನ್, ಗಾಯತ್ರಿಯವರಿಗೆ ವಹಿಸಿತು. ಅವರು ಅತ್ಯಂತ ಶ್ರದ್ದೆಯಿಂದ, ಶ್ರಮವಹಿಸಿ ಈ ಪುಸ್ತಕದ ಸಂಪಾದನಾ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರೊಂದಿಗೆ, ಡಾ. ವಿಜಯಾ ದಬ್ಬೆ ಹಾಗೂ ಶ್ರೀಮತಿ ನೇಮಿಚಂದ್ರರವರು ಉಪಯುಕ್ತ ಲೇಖನಗಳನ್ನು ಬರೆದುಕೊಟ್ಟು ಈ ಪುಸ್ತಕ ಹೊರಬರಲು ನೆರವಾಗಿದ್ದಾರೆ.
©2024 Book Brahma Private Limited.