ಕನ್ನಡ ಸಾಹಿತ್ಯ ಕೋಶದಂತಹ ಪ್ರಮುಖ ಕೆಲಸ ಮಾಡಿದ ಚಿ.ಸಿ. ನಿಂಗಣ್ಣ ಅವರ ವೈಚಾರಿಕ ಬರಹಗಳ ಕೃತಿಯಿದು. ಈ ಪುಸ್ತಕದಲ್ಲಿ ವೈಚಾರಿಕ ಸಂಗತಿಗಳಿಗೆ ಸಂಬಂಧಿಸಿದ ಆರು ಲೇಖನಗಳಿವೆ. ವೈಚಾರಿಕತೆ ಮತ್ತು ಸಾಹಿತ್ಯದ ನಡುವಿನ ಸಂಬಂಧವನ್ನು ವಿವರಿಸಲು ಪ್ರಯತ್ನಿಸುತ್ತವೆ. ವೈಚಾರಿಕತೆಯ ಚಾರಿತ್ರಿಕ ಬೆಳವಣಿಗೆಯ ಹಿನ್ನೋಟ ಬೀರುವ ನಿಂಗಣ್ಣ ಅವರ ಬರಹಗಳು ವಸ್ತುವಿನ ದೃಷ್ಟಿಯಿಂದ ಗಮನ ಸೆಳೆದರೂ ಆಳಕ್ಕೆ ಇಳಿಯದೇ ಮೇಲುಸ್ತರದ ರಚನೆಗಳಾಗಿಯೇ ಉಳಿದು ಬಿಡುತ್ತವೆ. ವೈಚಾರಿಕತೆ ಮತ್ತು ಸಾಹಿತ್ಯದಂತಹ ಗಂಭೀರ ವಿಷಯದಲ್ಲಿ ಅಧ್ಯಯನ ನಡೆಸಲು ಅಗತ್ಯವಿರುವ ಪೂರ್ವಸಿದ್ಧತೆಯ ಕೊರತೆ ಎದ್ದು ಕಾಣಿಸುತ್ತದೆ. ತೆಳುವಾದ ಆಲೋಚನಾ ಕ್ರಮವನ್ನು ವಸ್ತುವಿಗೆ ದೊರಕಿಸಬೇಕಾದ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ವಸ್ತುವಿನ ಜೊತೆಗೆ ನಿರ್ದಿಷ್ಟವಾದ ಅಂತರ ಇಟ್ಟು ನೋಡುವುದು ಸಾಧ್ಯವಾಗದೇ ಇರುವುದು ’ಮಿತಿ’ಯಾಗಿಯೇ ಕಾಣಿಸುತ್ತದೆ. ಮೇಲುಸ್ತರದ ಆಲೋಚನಾ ಕ್ರಮ ಮತ್ತು ಭಾಷೆಯಲ್ಲಿ ಅದನ್ನು ಕಟ್ಟಿಕೊಡಲು ಸಾಧ್ಯವಾಗದೇ ಇರುವುದು ಢಾಳಾಗಿ ಎದ್ದು ಕಾಣುತ್ತದೆ. ತೆಳುವಾದ ನಿರೂಪಣೆ-ಜನಪ್ರಿಯ ಯೋಚನಾ ಲಹರಿಯಿಂದ ದೂರ ಸಾಗುವುದು ಲೇಖಕರಿಗೆ ಸಾಧ್ಯವಾಗಿಲ್ಲ. ಬಸವಣ್ಣನವರ ಬಗ್ಗೆ ತೋರುವ ಅದಮ್ಯ ಪ್ರೀತಿ-ಗೌರವ ಉಳಿದ ಚಿಂತಕರ ಬಗ್ಗೆ ಸಾಧ್ಯವಾಗದೇ ಇರುವುದು ಮಿತಿಯನ್ನು ಮೀರಲು ಸಾಧ್ಯವಾಗದೇ ಇರುವುದರ ದ್ಯೋತಕವೇ ಸರಿ.
ಅಶ್ವಘೋಷನಿಂದ ಆರಂಭಿಸಿ ಸಿದ್ಧಲಿಂಗಯ್ಯನವರ ’ಏಕಲವ್ಯ’ದ ವರೆಗೂ ವೈಚಾರಿಕತೆಯ ಚಾಚು ಬೆಳೆದಿರುವ ಬಗೆಯನ್ನು ವಿವರಿಸುವ ನಿಂಗಣ್ಣ ಅವರು ’ಒಳನೋಟ’ ನೀಡುವುದು ಸಾಧ್ಯವಾಗಿಲ್ಲ. ಬರವಣಿಗೆಯ ಬಗೆಗಿರುವ ಧೋರಣೆಯು ಅವರನ್ನು ವಿಸ್ತರಿಸದಂತೆ ತಡೆದು ನಿಲ್ಲಿಸಿದೆ. ಕ್ಲೇಷೆ ಎನ್ನಿಸುವ ಪದಗಳು, ವಾಕ್ಯಗಳು, ವಿಚಾರಗಳು ಹೊಸದೇನನ್ನೂ ಹೇಳಲು ಸಾಧ್ಯವಾಗದಂತೆ ಮಾಡಿವೆ. ರೂಢಿಗತ ವಿಚಾರ ಸರಣಿಯನ್ನೇ ಮುಂದುವರೆಸುವ ಕೃತಿಯಿದು. ಓದಿಸಿಕೊಂಡು ಹೋಗುವ ಗುಣ ಇದ್ದರೂ ಅದಕ್ಕಿಂತ ಹೆಚ್ಚಿನದನ್ನು ನೀಡುವುದು ಸಾಧ್ಯವಾಗಿಲ್ಲ.
©2024 Book Brahma Private Limited.