‘ಜಿನ್ನಾ ಕೋಮುವಾದಿಯೆ?’ ಹಿರಿಯ ಪತ್ರಕರ್ತ, ಲೇಖಕ ಬಿ.ಎಂ. ಹನೀಫ್ ಅವರ ನೂತನ ಕೃತಿ. ಸರೋಜಿನಿ ನಾಯ್ಡು ಅವರಿಂದ ‘ಹಿಂದೂ ಮುಸ್ಲಿಂ ರಾಯಭಾರಿ’ ಎಂದು ಕರೆಸಿಕೊಂಡ. ಎಲ್.ಕೆ. ಅಡ್ವಾಣಿ ಅವರಿಂದ ‘ನಿಜವಾದ ಸೆಕ್ಯುಲರ್’ ಎಂದು ಹೊಗಳಿಸಿಕೊಂಡ ಮೊಹಮ್ಮದ್ ಅಲಿ ಜಿನ್ನಾ, ಕೋಮುವಾದಿ ಎಂದು ಬ್ರ್ಯಾಂಡ್ ಆದದ್ದು ಹೇಗೆ?. ಒಂದು ಕಾಲದಲ್ಲಿ ಭಾರತದಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯನ್ನು ಕಟುವಾಗಿ ವಿರೋಧಿಸಿದ ಜಿನ್ನಾ, ಬಳಿಕ ಅದೇ ಮುಸ್ಲಿಂ ಲೀಗ್ ನ ಅಧ್ಯಕ್ಷರಾದದ್ದು ಹೇಗೆ?. ಮನೆಯಲ್ಲಿ 200 ಕೋಟುಗಳನ್ನು ಹೊಂದಿದ್ದ ಸೂಟು ಬೂಟುಧಾರಿ, ಪ್ರಾರ್ಥನೆಗೆಂದು ಮಸೀದಿಯತ್ತ ತಲೆ ಹಾಕದ ಪಾನ ಪ್ರಿಯ, ಮನೆಮಾತು ಉರ್ದು ಸರಾಗವಾಗಿ ಬರದ ಇಂಗ್ಲಿಷ್ ವ್ಯಾಮೋಹಿ ಜಿನ್ನಾ, ಅವಿಭಜಿತ ಭಾರತದಲ್ಲಿ ಅನಭಿಷಿಕ್ತ ಮುಸ್ಲಿಂ ನಾಯಕ ಎಂಬಂತೆ ಬೆಳೆದು ಬಂದದ್ದು ಹೇಗೆ? ಪಟ್ಟು ಹಿಡಿದು ಪ್ರತ್ಯೇಕ ದೇಶ ಪಾಕಿಸ್ತಾನವನ್ನು ಪಡೆದು ಆ ದೇಶದ ಮೊದಲ ಗವರ್ನರ್ ಜನರಲ್ ಆದ ಬಳಿಕ ‘ಪಾಕಿಸ್ತಾನ ಒಂದು ಸೆಕ್ಯುಲರ್ ದೇಶವಾಗಬೇಕು’ ಎಂದು ಅಲ್ಲಿನ ಸಂಸತ್ತಿನಲ್ಲಿ ಭಾಷಣ ಮಾಡಿದ ಜಿನ್ನಾಗೆ ಆ ದೇಶ ಮಾಡಿದ್ದೇನು? ಜಿನ್ನಾ ನಿಜಕ್ಕೂ ಕೋಮುವಾದಿಯೇ ಈ ಎಲ್ಲಾ ಪ್ರಶ್ನೆಗಳೊಂದಿಗೆ ಜಿನ್ನಾ ಬದುಕನ್ನು ಲೇಖಕ ಬಿ.ಎಂ. ಹನೀಫ್ ಅವರು ಹೊಸ ಒಳನೋಟದೊಂದಿಗೆ ವಿಶ್ಲೇಷಿಸಿದ ಕೃತಿಯಿದು.
‘ಜಿನ್ನಾ ಕೋಮುವಾದಿಯೆ?’ ಕೃತಿಯ ಕುರಿತು ಲೇಖಕ ಬಿ.ಎಂ. ಹನೀಫ್ ಅವರ ಮಾತುಗಳು.
ಜಿನ್ನಾ ಕೋಮುವಾದಿಯೇ ಕೃತಿಯ ವಿಮರ್ಶೆ
ಜಿನ್ನಾ ಕೋಮುವಾದಿಯೆ ? ಎಂಬ 100 ಪುಟಗಳ ಪುಸ್ತಕವನ್ನು ಬಿ. ಎಂ. ಹನೀಫ್ ರಚಿಸಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಇಂತಹ ವಿಷಯಗಳ ಬಗ್ಗೆ ಪುಸ್ತಕ ಬರೆಯುವುದು ಎರಡಂಚಿನ ಕತ್ತಿಯ ಮೇಲೆ ನಡೆದಂತೆ. ಇಂತಹ ವಿಷಯಗಳನ್ನು ಪ್ರಸ್ತುತ ಎರಡು ರೀತಿಯಲ್ಲಿ ನೋಡಲಾಗುತ್ತದೆ. ಒಂದು, ತೀವ್ರಗಾಮಿ ಹಿತಾಶಕ್ತಿಗಳು ತಮ್ಮದೇ ರೀತಿಯಲ್ಲಿ ನಕಾರಾತ್ಮಕ ವಿಷಯಗಳನ್ನು ಪ್ರಚಾರ ಮಾಡುವುದು. ಎರಡು, 'ಮೆಳ್ಳೆಗಣ್ಣಿನಲ್ಲಿ ಓದು' ನಡೆಸುವುದು. ಆದರೆ ಹನೀಫ್ ಈ ಸಣ್ಣ ಪುಸ್ತಕದ ಮೂಲಕ ಎರಡು ಮಿಥ್‌ಗಳನ್ನು ಹೊಡೆದುಹಾಕಿದ್ದಾರೆ ಎನ್ನಬಹುದು.
ಜಿನ್ನಾ ಸೆಕ್ಯೂಲರಿಸಂ ಮತ್ತು ಕೋಮುವಾದ; ಜಿನ್ನಾ ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಗಾಂಧಿ; ಜಿನ್ನಾ ಮತ್ತು ಗಾಂಧಿ: ಸಾಮ್ಮ ಮತ್ತು ಸಂಘರ್ಷ; ಅಂಬೇಡ್ಕರ್ ಕಣ್ಣಲ್ಲಿ ಜಿನ್ನಾ, ಗಾಂಧಿ ಮತ್ತು ಸಾವರ್ಕರ್; ಜಿನ್ನಾ ಸೋತಿದ್ದೆಲ್ಲಿ? ಎಂ. ಎನ್. ರಾಯ್ ವಿಶ್ಲೇಷಣೆ ಇತ್ಯಾದಿ ಲೇಖನಗಳಿವೆ. ಅಂಬೇಡ್ಕರ್ ಅವರು ಬಹಳ ಹಿಂದೆಯೇ 'ರಾಜಕಾರಣಿಗಳ ಮುಂದೆ ತಮಟೆ ಬಾರಿಸುವ ಹುಡುಗರು ಪತ್ರಿಕೆಗಳಲ್ಲಿ ಬರೆಯುತ್ತಾರೆ. ಇದರಿಂದ ರಾಜಕಾರಣಿಗಳು ತಮ್ಮ ಅನುಯಾಯಿಗಳನ್ನು ಮೂರ್ಖರಾಗಿಸುತ್ತಾರೆ ಇಲ್ಲ ಕಪಟಿಗಳಾಗಿಸುತ್ತಾರೆ, ಹಣವಂತರು-ಬೃಹತ್ ಉದ್ಯಮಿಗಳಿಂದ ಹಣ ಪಡೆದುಕೊಳ್ಳುತ್ತಾರೆ' ಎಂದು ಹೇಳಿದ್ದರು. ಅದು ಈಗ ಅಕ್ಷರಶಃ ಸತ್ಯವಾಗಿದೆ. ಹನೀಫ್ ಯಾವ ಉತ್ತೇಕ್ಷೆಯೂ ಇಲ್ಲದೆ ಜಿನ್ನಾ ಅವರ ವೈರುಧ್ಯಗಳನ್ನು ತಣ್ಣಗೆ ಹೇಳುತ್ತಾ ಹೋಗುತ್ತಾರೆ. ಜಿನ್ನಾ ಕಾಲಕಾಲಕ್ಕೆ ತನ್ನ ಧೋರಣೆಗಳನ್ನು ಬದಲಾಯಿಸಿ ಕೊಳ್ಳುವುದು ಕುತೂಹಲಕರವಾಗಿದೆ. ಜಿನ್ನಾ ಕೋಮುವಾದಿಯೆ? ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ಕಾಣಿಸುತ್ತದೆ. ನಾವೀಗ ಹಿಂದೂ-ಮುಸ್ಲಿಮ್ ಲೇಖಕರನ್ನು ಕೋಮುವಾದದ ಹಿನ್ನೆಲೆಯಲ್ಲೇ ನೋಡುತ್ತೇವೆ. ಆದರೆ ಹನೀಫ್ ಅವರು ಈ ಸಣ್ಣ ಕೃತಿಯ ಮೂಲಕ ಯಾವ ಪೂರ್ವಾಗ್ರಹ ಇಲ್ಲದೆ ಒಬ್ಬ ಪತ್ರಕರ್ತನಾಗಿ ಕಾಣಿಸುತ್ತಾರೆ. ಎರಡೂ ಗುಂಪುಗಳು ಈ ಸಣ್ಣ ಕೃತಿಯನ್ನು ಓದಬೇಕಾಗಿದೆ.
(ಕೃಪೆ; ಹೊಸತು ಏಪ್ರಿಲ್ 2021, ಬರಹ- ಡಾ| ಎಂ. ವೆಂಕಟಸ್ವಾಮಿ ಬೆಂಗಳೂರು)
©2024 Book Brahma Private Limited.