ಭಾರತೀಯ ಆಲೋಚನಾ ಕ್ರಮ ಮತ್ತು ಅದು ನಡೆಯಬೇಕಾದ ದಾರಿಗೆ ದಿಕ್ಕು-ದೆಸೆಗಳನ್ನು ತೋರಿದ ಮಹಾನ್ ಚಿಂತಕ-ಚೇತನ ಬಾಬಾ ಸಾಹೇಬ್ ಅಂಬೇಡ್ಕರ್. ಬಾಬಾ ಸಾಹೇಬರ ವಿಚಾರಗಳು- ಚಿಂತನೆಗಳು ಅವು ರಚಿತವಾದ ಏಳೆಂಟು ದಶಕಗಳ ನಂತರವೂ ಬೆರಗುಗೊಳಿಸುತ್ತವೆ. ಅವುಗಳಲ್ಲಿ ವ್ಯಕ್ತವಾಗಿರುವ ವಿಷಯ ಮತ್ತು ಅದಕ್ಕೆ ನೀಡಿರುವ ಒಳನೋಟವು ತೀವ್ರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಸರಳವಾದ ಭಾಷೆಯಲ್ಲಿ ಗಂಭೀರ ಸಂಗತಿಗಳನ್ನು ಓದುಗನಿಗೆ ತಲುಪಿಸುವ ಅಂಬೇಡ್ಕರ್ ಅವರ ಅಭಿವ್ಯಕ್ತಿಯ ಕ್ರಮ ಅವರು ಏಕಕಾಲಕ್ಕೆ ನೆಲ-ನಭಗಳೆರಡರಲ್ಲಿಯೂ ಸಲ್ಲುವಂತೆ ಮಾಡುತ್ತದೆ. ಅವರ ಬರಹಗಳು ಚಿಂತಕನೊಬ್ಬನ ಶುಷ್ಕ ಪಠ್ಯಗಳಾಗದೇ ಜೀವಪರ-ಜನಪರ ನಿಲುವಿನ ದ್ರವ್ಯ ಒಳಗೊಂಡಿರುವ ಅಪೂರ್ವ ನೋಟಕ್ರಮದಿಂದ ಕೂಡಿರುತ್ತವೆ.
ರಘೋತ್ತಮ ಅವರು ಈ ಗ್ರಂಥದಲ್ಲಿ ಅಂಬೇಡ್ಕರ್ ಅವರ ಬರೆಹಗಳ ’ದರ್ಶನ’ ಮಾಡಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದೊಂದು ’ದರ್ಶನಂ’ ಆಗಿ ತೋರಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ಮತ್ತು ಆ ನಿಟ್ಟಿನಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಅಂಬೇಡ್ಕರ್ ಕೇಂದ್ರಿತವಾಗಿರುವ ಈ ಸಂಕಲನದ ೪೬ ಬರಹಗಳು ಅಂಬೇಡ್ಕರ್ ಅವರಿಗಿದ್ದ ಕಾಳಜಿ, ಶೋಷಿತರ, ನಿರ್ಗತಿಕರ ಕುರಿತಾದ ನಿಲುವು-ಅಭಿಪ್ರಾಯಗಳ ಜೊತೆಯಲ್ಲಿಯೇ ಅದಕ್ಕಿದ್ದ ಬದ್ಧತೆ ಮತ್ತು ಪ್ರಾಮಾಣಿಕತೆಗಳನ್ನೂ ಬಿಂಬಿಸುತ್ತವೆ. ಅಂಬೇಡ್ಕರ್ ಎಂಬ ಬೆಳಕು ಹರಡಿರುವ ರೀತಿ ಅದು ಹೊಮ್ಮುವ ಕ್ರಮಗಳನ್ನು ಹಿಡಿದಿಡುವಲ್ಲಿ ಸಫಲವಾಗಿರುವ ಈ ಕೃತಿಯೂ ಅಲ್ಲಲ್ಲಿ ಪಾರ್ಶ್ವನೋಟಕ್ಕೆ ಸೀಮಿತವಾಗಿ ಬಿಡುವ ಅಪಾಯದಿಂದ ಪಾರಾಗಿಲ್ಲ. ಪಾರಾಗುವ ಪ್ರಯತ್ನ ಕಾಣುತ್ತದೆಯಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗದಿರುವುದೇ ಈ ಕೃತಿಯನ್ನು ಕ್ಲಾಸಿಕ್ ಆಗದಂತೆ ತಡೆಯುತ್ತದೆ. ಅಂಬೇಡ್ಕರ್ ಅವರ ಚಿಂತನೆ-ಸಿದ್ಧಾಂತಗಳನ್ನು ಕುರಿತ ಅಪೂರ್ವ ಒಳನೋಟಗಳಿರುವ ಗ್ರಂಥವಿದು ಎಂಬುದರಲ್ಲಿ ಎರಡು ಮಾತಿಲ್ಲ.
ಜನರು ಅಂಬೇಡ್ಕರ್ ಕುರಿತಂತೆ ಹೆಚ್ಚು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಅವರ ಬಗೆಗಿನ ಬರಹಗಳು ಹೆಚ್ಚಾಗತೊಡಗಿವೆ. ಆ ಸಾಲಿನಲ್ಲಿ ರಘೋತ್ತಮ ಹೊ. ಬ. ಅವರ 'ಅಂಬೇಡ್ಕರ್ ದರ್ಶನಂ' ಒಂದು.ಈ ಹಿಂದೆಯೂ ದಲಿತರ ಬದುಕಿನ ಕುರಿತಂತೆ, ಅಂಬೇಡ್ಕರ್ ವಿಚಾರಗಳ ಕುರಿತಂತೆ ಬರೆದಿರುವ ಹೊ.ಬ. ಮತ್ತೊಮ್ಮೆ ಅಂಬೇಡ್ಕರ್ ದರ್ಶನದತ್ತ ಹೊರಳಿದ್ದಾರೆ. ಟಿಪ್ಪಣಿ ರೂಪದ ಲೇಖನಗಳ ಸಂಗ್ರಹವನ್ನು ಒಳಗೊಂಡ ಕೃತಿ ಇದಾಗಿದ್ದು ,ಇಲ್ಲಿ ಸುದೀರ್ಘ ಸ್ವತಂತ್ರ ಲೇಖನಕ್ಕಿಂತಲೂ ಅಂಬೇಡ್ಕರ್ ಅವರ ಬೇರೆ ಬೇರೆ ಚಿಂತನೆಗಳನ್ನು ಯಥಾವತ್ ನೀಡಲಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ, ರಾಜಕೀಯ, ಸಾಮಾಜಿಕ ಸನ್ನಿವೇಶಗಳಲ್ಲಿ ಅಂಬೇಡ್ಕರ್ ತಳೆದ ನಿಲುವುಗಳನ್ನು ಅವರದೇ ಕೃತಿಗಳಿಂದ, ಭಾಷಣಗಳಿಂದ ಎತ್ತಿಕೊಡಲಾಗಿದೆ. ಭಾರತದ ಬಲಹೀನತೆಯ ಹಿಂದೆ ವರ್ಣವ್ಯವಸ್ಥೆಯ ಪರಿಣಾಮ, ಅಸಮಾನತೆ ತುಂಬಿದ ಸಮಾಜದಲ್ಲಿ ವಾಸ್ತವವನ್ನು ಆದರ್ಶಗೊಳಿಸುವ ಅಪಾಯಗಳು, ವರ್ಣವ್ಯವಸ್ಥೆ ಹೇಗೆ ಜಾತಿವ್ಯವಸ್ಥೆಯಾಯಿತು, ಜಾತಿ ಕುರಿತಂತೆ ಅಂಬೇಡ್ಕರ್ ನೀಡಿರುವ ಸಮಾಜಶಾಸ್ತ್ರೀಯ ವಿವರಣೆ, ಅಂತರ್ಜಾತಿ ವಿವಾಹದ ಕುರಿತಂತೆ ಅಂಬೇಡ್ಕರ್ ನಿಲುವು, ಪಂಕ್ತಿಭೇದ, ಅಂತರ್ಜಾತಿ ಸಹಭೋಜನ ನಿರಾಕರಣೆ ಕುರಿತಂತೆ ಅವರ ನಿಲುವುಗಳನ್ನು ಇಲ್ಲಿ ಅಂಬೇಡ್ಕರ್ ಮಾತುಗಳ ಮೂಲಕವೇ ಕಟ್ಟಿಕೊಡಲಾಗಿದೆ.
©2024 Book Brahma Private Limited.