ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನ ವಸ್ತು- ನಿರೂಪಣೆ ಹಾಗೂ ವಿಶಿಷ್ಟ ಭಾಷಿಕ ರಚನೆಗಳ ಮೂಲಕ ವಚನಗಳು ನಾಡಿನ ಗಮನ ಸೆಳೆದಿವೆ. ಹನ್ನೆರಡನೆಯ ಶತಮಾನದಲ್ಲಿ ನಡೆದ ಸಾಮಾಜಿಕ-ಸಾಂಸ್ಕೃತಿಕ- ಧಾರ್ಮಿಕ ಚಳುವಳಿಯ ಭಾಷಿಕ ದಾಖಲೆಗಳು ಹಾಗೂ ಸಾಹಿತ್ಯಕ ಸಾಕ್ಷಿಗಳು ಆಗಿರುವ ವಚನಗಳ ಬಗೆಗಿನ ಅಧ್ಯಯನ ಹಲವು ನೆಲೆಗಳಲ್ಲಿ ನಡೆದಿರುವುದು- ನಡೆಯುತ್ತಿರುವುದು ಗಮನಾರ್ಹ ಸಂಗತಿ. ವಚನಗಳನ್ನು ಕೇವಲ ಒಂದು ಸಾಹಿತ್ಯಕ ಪ್ರಕಾರ ಎಂಬಂತೆ ನೋಡುವುದು ಅವುಗಳ ಕುರಿತ ಸ್ಪಷ್ಟಕಲ್ಪನೆ ಇಲ್ಲದೇ ಇರುವುದನ್ನು ಸೂಚಿಸಿ, ಅವಜ್ಞೆಗೆ ದಾರಿ ಮಾಡಿಕೊಡುತ್ತದೆ. ವಚನಗಳು ಏಕಕಾಲಕ್ಕೆ ಸಾಹಿತ್ಯದ ತುಣುಕುಗಳಾಗಿರುವ ಹಾಗೆಯೇ ಅವು ಸಾಮಾಜಿಕ ನೆಲೆಯ ಅಪೂರ್ವ ಚಿಂತನೆಗಳನ್ನೂ ಒಳಗೊಂಡಿವೆ. ಅವುಗಳನ್ನು ಎದುರಾಗುವುದಕ್ಕೆ ಕೇವಲ ಸಾಹಿತ್ಯ ಮತ್ತು ಭಾಷಿಕ ನೆಲೆಯ ಸಿದ್ಧತೆಗಳು ಮಾತ್ರ ಸಾಕಾಗುವುದಿಲ್ಲ. ಹಾಗೆಯೇ ಅವುಗಳ ಬಗೆಗಿನ ಅಭಿಮಾನ ಕೂಡ ಲೇಖಕ-ಓದುಗನನ್ನು ಹೆಚ್ಚು ದೂರಕ್ಕೆ ಕರೆದೊಯ್ಯಲಾರವು. ಪ್ರೀತಿ-ಅಭಿಮಾನ-ಗೌರವಗಳ ಮುಸುಕು ಸಾಹಿತ್ಯಕ ಪಠ್ಯಗಳನ್ನು ವಸ್ತುನಿಷ್ಠವಾಗಿ ನೋಡುವುದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದಿಲ್ಲ. ಮಾತ್ರವಲ್ಲ, ಹಾಗೆ ಹುಟ್ಟಿಕೊಂಡ ಆವರಣವು ವಸ್ತುವನ್ನು ಖಚಿತವಾಗಿ ಅಳೆಯಲು ಅಗತ್ಯವಿರುವ ಅಡ್ಡಿಯನ್ನುಂಟು ಮಾಡುತ್ತವೆ. ವಸ್ತುವಿನ ಜೊತೆಗೆ ಅಂತರ ಇಟ್ಟುಕೊಳ್ಳದೇ ನೋಡುವ ಬರಹಗಳು ’ಅಭಿಮಾನ’ ಸೂಚಿಸುತ್ತವೆಯೇ ಹೊರತು ವೈಚಾರಿಕ ಸ್ಪಷ್ಟತೆಯನಲ್ಲ. ಈ ಸಂಕಲನದಲ್ಲಿ ಇರುವ ಹತ್ತು ಬರಹಗಳ ವಚನಗಳ ಮೇಲಿನ ಮತ್ತು ಹನ್ನರಡೆನಯ ಶತಾಮಾನ ಚಳುವಳಿಯ ಮೇಲಿನ ಅಭಿಮಾನದಿಂದ ರಚಿತವಾದವುಗಳಾಗಿವೆ. ಪ್ರಾಥಮಿಕ ಹಂತದ ಮಾಹಿತಿ ನೀಡುವುದಕ್ಕೆ ಸೀಮಿತವಾಗುವುದರ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ಸಂಗತಿ-ವಿಷಯಗಳನ್ನೇ ಮತ್ತೆ ಹೇಳಿರುವುದು ಅಭಿವ್ಯಕ್ತಿ- ಬರವಣಿಗೆ- ಭಾಷಿಕ ರಚನೆಗಳಾಗಿಯೂ ಗಮನ ಸೆಳೆಯುವುದಿಲ್ಲ. ಕ್ಲೀಷೆಯ ಹೆಜ್ಜೆ ಜಾಡಿನಲ್ಲಿ ನಡೆಯುವ ಈ ಬರಹಗಳು ಅನಗತ್ಯವಾಗಿ ತಮ್ಮ ಮೇಲೆ ತಾವೇ ಮಿತಿಯನ್ನು ಹೇರಿಕೊಂಡಿವೆ.
©2024 Book Brahma Private Limited.