ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ಕೃತಿ ‘ಪ್ರತಿ ಸಂಸ್ಕೃತಿ’.
ಹಂಪಿಯ ಕನ್ನಡ ವಿ.ವಿ.ಯ ‘ಪುಸ್ತಕ ಮಾಹಿತಿ’ ಮತ್ತು ‘ಕನ್ನಡ ಅಧ್ಯಯನ’ ನಿಯತಕಾಲಿಕಗಳ ಸಂಪಾದಕರಾಗಿದ್ದ ಅವರು ಕನ್ನಡದ ಪ್ರಮುಖ ದಿನ ಪತ್ರಿಕೆಗಳಲ್ಲಿ ಅಂಕಣ ಬರೆದಿದ್ದಾರೆ. ಸಂಶೋಧನೆ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸ ಮಾಡಿದ್ದಾರೆ. ’ಕತ್ತಿಯಂಚಿನ ದಾರಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ರಹಮತ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಯನ್ನು ಮರಳಿಸಿದ್ದರು. ಪ್ರವಾಸ ಮಾಡುವ ಹವ್ಯಾಸ ಉಳ್ಳವ ಅವರು ತಮ್ಮ ಪ್ರವಾಸದ ಅನುಭವಗಳನ್ನು ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಪುಸ್ತಕಗಳಲ್ಲಿ ಪ್ರಕಟಿಸಿದ್ದಾರೆ. ಕರ್ನಾಟಕದ ಸೂಫಿಗಳು, ಕರ್ನಾಟಕದ ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -2002