’ಚಿತ್ರದ ಕುದುರೆ’ ಮೂಲಕ ವಿನಯ- ವಿಸ್ಮಯ- ವೈಖರಿ ಎಂಬ ಮೂರು ಕಲ್ಪನೆಗಳ ಚುಂಗು ಹಿಡಿದು ತಮ್ಮ ವಿಶಿಷ್ಟ ಚಿಂತನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ ರಂಗಕರ್ಮಿ, ಚಿಂತಕ ಕೆ. ವಿ. ಅಕ್ಷರ.
ಕಥನಗಳು, ಸಂಗತಿಗಳು ಹಾಗೂ ಚಿತ್ರಗಳು ಎಂಬ ಮೂರು ವಿಭಾಗಗಳಲ್ಲಿ ಈ ಚಿಂತನೆಗಳು ಹರಡಿಕೊಂಡಿವೆ. ಸಾಹಿತ್ಯದ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವವರು, ಹೊಸ ತಲೆಮಾರಿನ ಸಾಹಿತ್ಯದ ಕುರಿತು ಅಧ್ಯಯನ ಮಾಡುವವರಿಗೆ ಉಪಯುಕ್ತ ಗ್ರಂಥ.
ಜಿಜ್ಞಾಸೆಗೆ ಒತ್ತಾಯಿಸುವ ಬರಹಗಳು
ಖ್ಯಾತ ರಂಗಕರ್ಮಿ ಮತ್ತು ಲೇಖಕ ಕೆ.ವಿ ಅಕ್ಷರ ಕುದುರೆ_ಅವರ ಇತ್ತೀಚಿನ ಲೇಖನಗಳ ಈ ಸಂಗ್ರಹ ಅದರ ಜಿಜ್ಞಾಸು ಸ್ವರೂಪಿ ಆಯಾಮದಿಂದ ನಮ್ಮ ಗಮನ ಸೆಳೆಯುತ್ತದೆ. ’ಚಿತ್ರದ ಕುದುರೆ’ ಎಂಬ ಶೀರ್ಷಿಕೆಯ ಹಲವು ಬಗೆಯ ಕಾಣ್ಕೆಗಳನ್ನು ನಮ್ಮೆದುರಿಗಿಡುತ್ತದೆ. ಮೂರು ಭಾಗಗಳಲ್ಲಿ ಕಥನಗಳು, ಸಂಗತಿಗಳು, ಮತ್ತು ಚಿತ್ರಗಳು ಎಂಬ ಶೀರ್ಷಿಕೆಗಳಲ್ಲಿ ಹರಡಿಕೊಂಡಿರುವ ಇಲ್ಲಿನ ಲೇಖನಗಳು ಲೇಖಕರ ತಾತ್ವ್ತಿಕ ಮತ್ತು ನೈತಿಕ ನೆಲಗಟ್ಟನ್ನು ನಮಗೆ ಪರಿಚಯಿಸಲು ಸಫಲವಾಗಿದೆ. ಆಧುನಿಕತೆಗಿರುವ ಏಕಸ್ವರೂಪಿ ನಿರೂಪಣೆಗಳನ್ನು ಇಲ್ಲಿನ ಬರಹಗಳು ತೀವ್ರವಾಗಿ ಪ್ರಶ್ನಿಸುತ್ತವೆ. ಯಾವುದೇ ಒಂದು ವಿಚಾರ ಅಥವಾ ಘಟನೆಯನ್ನು ಅದರ ವಿಭಿನ್ನ ಆಯಾಮಗಳ ಮೂಲಕ ಪ್ರವೇಶಿಸುವುದು ಮತ್ತು ವ್ಯಾಖ್ಯಾನಿಸುವುದು ಇಲ್ಲಿನ ಬಹುತೇಕ ಬರಹಗಳಲ್ಲಿ ಕಾಣಿಸಿಕೊಳ್ಳುವ ಮುಖ್ಯ ಗುಣಲಕ್ಷಣವಾಗಿದೆ.
ಯಾವುದೇ ಒಂದು ಬಗೆಯ ವಾದ ಅಥವಾ ಸಿದ್ದಾಂತವನ್ನು ಒಪ್ಪಿಕೊಳ್ಳದ ಲೇಖಕರು ಸಮಕಾಲೀನ ಸಮಾಜದ ಅನೇಕ ವಿದ್ಯಮಾನಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ದಾಖಲಿಸಿದ್ದಾರೆ. ಹೀಗೆ ಪ್ರತಿಕ್ರಿಯಿಸುವಾಗ ಅವರಿಗೆ ತತ್ತ್ವಶಾಸ್ತ್ರದ ಕುರಿತಾಗಿ ಇರುವ ಆಕರ್ಷಣೆಯನ್ನು ಸಹ ನಾವು ಗಮನಿಸಿಬಹುದು. ಅವರು ಕಟ್ಟಿಕೊಡುವ ವ್ಯಕ್ತಿಚಿತ್ರಗಳೂ ಕೂಡ ಕೇವಲ ವ್ಯಕ್ತಿಗಳ ಜೀವನವನ್ನು ಮಾತ್ರ ಕುರಿತಾಗಿರದೆ ಅವರು ಪ್ರತಿನಿಧಿಸುವ ಯೋಚನಾ ಕ್ರಮದ ರೀತಿಯನ್ನು ವಿಶ್ಲೇಷಿಸುತ್ತದೆ. ಉದಾಹರಣೆಗೆ ಸಾಗರದ ನೀ. ನಾ ಮಧ್ಯಸ್ಥರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾ ಲೇಖಕರು ಮಧ್ಯಸ್ಥರಿಗಿರುವ ವಿದ್ವತ್ತು ತಮಗೆ ಹೊಸಬಗೆಯ ಓದುವ ಕ್ರಮವನ್ನು ಪರಿಚಯಿಸಿತು ಎನ್ನುತ್ತಾರೆ. ಜೊತೆಗೆ ಆಧುನಿಕ ಮನಸ್ಸುಗಳ ಅವಸರದ ಓದನ್ನು ಟೀಕಿಸುತ್ತಾ ಸಂಯಮದ ಓದನ್ನು ಪುರಸ್ಕರಿಸುತ್ತಾರೆ, ಅವರ 'ಸಾಹಿತ್ಯವೆಂದರೆ ಅದು ಮಾರುವೇಷದಲ್ಲಿ ಅಡಗಿ ಕುಳಿತಿರುವ ಸಿದ್ದಾಂತವೆಂದೂ ಮತ್ತು ಸಾಹಿತ್ಯವನ್ನು ಅದರ ಪರ್ಯಾವರಣದಿಂದ ಬೇಧಿಸಿದಾಗ ಮಾತ್ರವೇ ಅದೊರಳಗಿನ ಅರ್ಥಗಳು ನಿರಚನಗೊಳ್ಳುತ್ತವೆಂದೂ ನಾವು ಭಾವಿಸಲು ತೊಡಗಿದ್ದ ಆಧುನಿಕೋತ್ತರ ಹವಾಮಾನದಲ್ಲಿ ಮಧ್ಯಸ್ಥರ ಓದುವ ವಿಧಾನವು ನಮಗೆಲ್ಲ ಚಿಕಿತ್ಸೆಯಾಗಿ ಕೆಲಸ ಮಾಡಿತು' ಎಂಬ ಮಾತುಗಳು ಚಿಂತನಾರ್ಹವೇ ಹೌದು. ಸ್ವತಃ ರಂಗಕರ್ಮಿಗಳಾದ ಕೆ.ವಿ ಅಕ್ಷರ ಅವರು ಇಂಗ್ಲೆಂಡಿನ ನಾಟಕಕಾರ ಶೇಕ್ಸ್‌ಪಿಯರ್ ಕನ್ನಡಕ್ಕೆ ಬಂದ ರೀತಿಯನ್ನು ಸುದೀರ್ಘವಾದ ಲೇಖನವೊಂದರಲ್ಲಿ ಚರ್ಚಿಸಿದ್ದಾರೆ. ಶೇಕ್ಸ್‌ಪಿಯರನ ನಾಟಕಗಳನ್ನು ಕನ್ನಡ ಜಗತ್ತು ಒಂದೇ ಬಾಗಿಲಿನಿಂದ ಅಥವಾ ಅವು ಇರುವಂತೆಯೇ ಹಾಗೆಯೇ ಬರ ಮಾಡಿಕೊಂಡಿಲ್ಲ. ಬದಲಾಗಿ ಕಾಲಕ್ರಮದ ಒತ್ತಡಗಳಿಗಳಿಗನುಗುಣವಾಗಿ ಮರುರೂಪಿಸಿವೆ ಎಂದು ತಿಳಿಸುತ್ತಾ ಪೂರ್ವದ ಜಗತ್ತು ಯಾವ ಬಗೆಯಲ್ಲಿ ಶೇಕ್ಸ್‌ಪಿಯರ್‌ನನ್ನು ಅನುಸಂಧಾನ ಮಾಡಿವೆ ಎಂಬುದು ಮುಖ್ಯ ಎಂದು ಅಭಿಪ್ರಾಯ ಪಡುತ್ತಾರೆ. ಅನುವಾದ ಅಥವಾ ಪ್ರಯೋಗಗಳ ಯಶಸ್ಸಿಗಿಂತ ಹೆಚ್ಚಾಗಿ ಹೊಸ ಹುಡುಕಾಟ ಮತ್ತು ಹೊಸ ಸವಾಲುಗಳನ್ನು ಎದುರಿಸುವುದು ರಂಗಕರ್ಮಿಗಳಿಗೆ ಬಹಳ ಮುಖ್ಯ ಎಂಬ ಮಾತು ಗಮನಾರ್ಹವಾಗಿದೆ.
ಈ ಜಿಜ್ಞಾಸು ಸ್ವರೂಪಿ ಲೇಖನಗಳನ್ನು ಗಮನಿಸಿದಾಗ ನವ್ಯೋತ್ತರ ಕಾಲಘಟ್ಟದಲ್ಲಿ ಯಾವುದೂ ವಾದವಾಗಿ ಬರಬೇಕಿಲ್ಲ. ಕನ್ನಡ ಸಾಹಿತ್ಯ ಜಗತ್ತು ಆಧುನಿಕೋತ್ತರ ಕಾಲಘಟ್ಟದ ಸಂಕೀರ್ಣತೆಗೆ ಪ್ರತಿಕ್ರಿಯಿಸುತ್ತವೆಯೇನೋ ಎಂಬ ಅನುಮಾನ ಉದ್ಭವಿಸುತ್ತದೆ. ಕನ್ನಡದ ಯಾವ ಲೇಖಕರೂ ತಮ್ಮನ್ನು ಆಧುನಿಕೋತ್ತರವಾದಿಗಳು ಎಂದು ಕರೆದುಕೊಂಡಿಲ್ಲ. ಆದರೆ ನಟರಾಜ ಹುಳಿಯಾರ್, ಕೆ.ವೈ ನಾರಾಯಣ ಸ್ವಾಮಿಯವರ ಬರೆಹಗಳು, ಗಿರೀಶ ಕಾರ್ನಾಡರ 'ಒಡಕಲು ಬಿಂಬ'ದಂತಹ ರಚನೆಗಳು ಅಥವಾ ಕೆ.ವಿ ಅಕ್ಷರ ಅವರ ಬರಹಗಳ ತಾತ್ವಿಕ ನೆಲಗಟ್ಟನ್ನು ಗಮನಿಸಿದರೆ ಆಧುನಿಕೋತ್ತರವಾದವಿಲ್ಲ ಎಂಬ ಮಾತನ್ನು ಸಹ ಒಪ್ಪಲಾಗುವುದಿಲ್ಲ. ಇದರ ಅರ್ಥ ಕನ್ನಡದ ಲೇಖಕರನ್ನು ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಲೇಬಲ್ ಮಾಡುವುದಲ್ಲ. ಬದಲಾಗಿ ಸಮಕಾಲೀನ ವಿದ್ಯಮಾನವು ಇವರ ಪದ್ಯಗಳಲ್ಲಿ ಹೇಗೆ ಪ್ರತಿಫಲನಗೊಳ್ಳುತ್ತಿದೆ ಎಂಬುದನ್ನು ಅರಿಯುವುದಷ್ಟೇ ಆಗಿದೆ.
-ಟಿ. ಅವಿನಾಶ್
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದಿ ಮಾಸಿಕ ಪತ್ರಿಕೆ (ಮೇ 2019)
©2024 Book Brahma Private Limited.