ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರ ಕೃತಿ-ವಾಸ್ತು ಎಂಬ ವ್ಯಾಧಿ. ವಾಸ್ತು-ಎಂಜಿನಿಯರಿಂಗ್ ವಿಭಾಗದ ಶಾಖೆಯೇ ಆಗಿದ್ದರೂ ಇದರ ದುರುಪಯೋಗ ಪಡೆಯುವ ಜನರು ಹೆಚ್ಚುತ್ತಿದ್ದರಿಂದ, ವಾಸ್ತು ಎಂಬ ಪರಿಕಲ್ಪನೆಗೆ ‘ಅಜ್ಞಾನ’ದ ಕಳಂಕ ತಟ್ಟಿದೆ. ಉತ್ತಮ ಕೆಲಸಗಳಿಗೆ ಶುಭ ಸಂದರ್ಭಗಳನ್ನು ನೋಡುತ್ತಾ ಕೂಡುವುದು ಸರಿಯಲ್ಲ ಎಂಬ ಅರ್ಥದಲ್ಲಿ ಶರಣ ಬಸವಣ್ಣನವರು ‘ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ’ ಎಂದು ಹೇಳುತ್ತಾರೆ. ಆದರೆ, ಕೆಲವು ಜನರು ಉತ್ತಮ ಮನೆಯನ್ನೇ ವಾಸ್ತು ನೆಪದಲ್ಲಿ ಕೆಡವುತ್ತಾರೆ. ಆರ್ಥಿಕ ಅಡಚಣೆ ಮಧ್ಯೆಯೂ ಮನೆಯ ಮೂಲೆಗಳನ್ನು ಕಿತ್ತಿಸಿ-ಮತ್ತೊಂದೆಡೆ ಕೂಡಿಸಿ, ಬೇಸರ ಉಂಟು ಮಾಡುತ್ತಾರೆ. ಮುಂದೆ, ಮನೆಗೆ ಕೆಟ್ಟದ್ದಾದರೆ ವಾಸ್ತು ಹೇಳುವವರು ಅಲ್ಲಿರುವುದಿಲ್ಲ. ಹೊಟ್ಟೆಪಾಡಿಗಾಗಿ ಇಂತಹ ವಂಚನೆಯನ್ನು ಬದುಕಿನ ಚಟುವಟಿಕೆಯನ್ನಾಗಿಸಿಕೊಂಡವರ ಬಗ್ಗೆ ಲೇಖಕರು ಕ್ಷಕಿರಣ ಬೀರಿದ್ದು ಈ ಕೃತಿಯ ವಿಶೇಷ.
(ಹೊಸತು, ಡಿಸೆಂಬರ್ 2012, ಪುಸ್ತಕದ ಪರಿಚಯ)
ಸಮಾಜವನ್ನು ಸುಲಭವಾಗಿ ನಿಯಂತ್ರಿಸಬಹುದು. ಎಲ್ಲಾ ವೈಜ್ಞಾನಿಕ ವಿಚಾರಧಾರೆಗಳನ್ನು ಹಾಳುಗೆಡಹಬಹುದು, ಸಮಾಜದಲ್ಲಿ ಭಯೋತ್ಪಾದನೆಯನ್ನುಂಟು ಮಾಡಿ ಹಣ- ಅಧಿಕಾರಗಳನ್ನೂ ಸಹ ಗಳಿಸಬಹುದು ಎಂಬುದಾದರೆ, ಅದು ಸಾಧ್ಯವಾಗುವುದು 'ವಾಸ್ತು ಎಂಬ ವ್ಯಾಧಿ' ಯಿಂದ ಎಂಬ ತಿಳುವಳಿಕೆಯನ್ನು ನೀಡುವ ಮಹತ್ವದ ವೈಚಾರಿಕ ಕೃತಿಯಿದು. ಕಾಲದಿಂದ ಕಾಲಕ್ಕೆ ಅನೇಕ ತತ್ವಜ್ಞಾನಿಗಳು, ಸಂತರು, ಶರಣರು, ಸಿದ್ಧಪುರುಷರು, ಚಿಂತಕರು ವಾಸ್ತು ಎಂಬ ವ್ಯಾಧಿಗೆ ಎಷ್ಟೇ ಚಿಕಿತ್ಸೆ ಕೊಟ್ಟರೂ ಅದು ಹೇಗೆ ಕ್ಯಾನ್ಸರ್‌ನಂತೆ ನಮ್ಮನ್ನು ಆವರಿಸಿ ನುಂಗುತ್ತಿದೆ, ಸಮಾಜದ ವೈಜ್ಞಾನಿಕ ಸ್ವಾಸ್ಥ್ಯವನ್ನು ನಾಶ ಮಾಡುತ್ತಿದೆ ಎಂಬ ಅರಿವನ್ನು ನೀಡುವ ಮೂಲಕ ಈ ವ್ಯಾಧಿಯ ಹುನ್ನಾರಗಳು ಹಾಗೂ ಅಪಾಯಗಳನ್ನು ಪ್ರಸ್ತುತ ಕೃತಿ ಬಯಲಿಗೆಳೆಯುತ್ತದೆ. ವಾಸ್ತುಜ್ಯೋತಿಶ್ಯಾಸ್ತ್ರವನ್ನು ವಿಜ್ಞಾನವೆಂದು ನಂಬಿಸುತ್ತಿರುವ ಕೆಟ್ಟಕಾಲದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ವಾಸ್ತು ಜ್ಯೋತಿಷ್ಯಗಳು ಅವಾಸ್ತವ ಕಲ್ಪನೆಗಳ ಮೂಲಕ ಮನುಷ್ಯನಿಗೆ ಸಂಬಂಧಿಸಿದ ಎಲ್ಲಾ ವಲಯಗಳನ್ನು ಹೇಗೆಲ್ಲಾ ನಿಯಂತ್ರಿಸುತ್ತಿವೆ ಎಂಬುದನ್ನು ಇಲ್ಲಿನ ಬರಹಗಳು ವಿವರಿಸುತ್ತವೆ. ಎಲ್ಲರೂ ಎಲ್ಲ ಸಂದರ್ಭಗಳಲ್ಲಿಯೂ ಯಾವುದಕ್ಕಾಗಿ ಪರಿತಪಿಸುತ್ತಾರೆಯೋ ಅದನ್ನು ಲೇಖಕರು ಒಂದು 'ವ್ಯಾಧಿ' (ಕಾಯಿಲೆ) ಎಂದೇ ಕರೆಯುತ್ತಾರೆ. ವಾಸ್ತು ಎಂಬ ಪರಿಕಲ್ಪನೆ ಬೇರೆ ಬೇರೆ ಹಂತಗಳಲ್ಲಿ ಐತಿಹಾಸಿಕವಾಗಿ ಬೆಳೆದುಬಂದ ಬಗೆಯನ್ನು ಈ ಕೃತಿಯಲ್ಲಿ ನಿರೂಪಿಸಿರುವ ಲೇಖಕರು 'ವಾಸ್ತು'ವನ್ನು ಮನುಷ್ಯಕಲ್ಪಿತ ಭ್ರಾಂತಿ ಎಂದೇ ದೂರುತ್ತಾರೆ. 'ವಾಸ್ತು'ವನ್ನು ಕಟುವಿಮರ್ಶೆಗೆ ಒಳಪಡಿಸಿರುವ ಉತ್ತಮ ವೈಚಾರಿಕ ಕೃತಿಯಿದು.
©2024 Book Brahma Private Limited.