ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ತಮ್ಮ ಕೊನೆಯ ದಿನಗಳನ್ನು ಬುದ್ಧತ್ವದ ಶೋಧನೆಯಲ್ಲಿ ಕಳೆದರು. ಬುದ್ಧನ ಬೋಧನೆಗಳು ಶಾಶ್ವತವೇ ಹೌದಾದರು, ಅದರ ಶಾಶ್ವತತೆಯ ಬಗ್ಗೆ ಬುದ್ಧ ಎಲ್ಲೂ ಹೇಳಿಕೊಂಡಿರಲಿಲ್ಲ. ಬೌದ್ಧ ಸಿದ್ಧಾಂತವು ಸಮಯದ ಅವಶ್ಯಕತೆಗೆ ತಕ್ಕಂತೆ ಬದಲಾಗುವ ಅರ್ಹತೆ ಹೊಂದಿದ್ದು, ಅದು ಸಾರ್ವಕಾಲಿಕ ಸತ್ಯವಾಗಿದೆ. 1954 ರಲ್ಲಿ ನಡೆದ ಬೌದ್ಧ ಸಮ್ಮೇಳನದಲ್ಲಿ ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು.
ಹಿಂದೂ ಧರ್ಮದೊಳಗಿನ ಸಾಮಾಜಿಕ ಅಸಮಾನತೆಯ ಅವಮಾನದಿಂದ ಹೊರಬರಲು ಅಂಬೇಡ್ಕರ್ ಕೈಗೊಂಡ ದಿಟ್ಟ ಕ್ರಮಗಳಲ್ಲಿ ‘ಬೌದ್ಧ ಧರ್ಮ ಸ್ವೀಕಾರ’ವೂ ಒಂದು. ಧರ್ಮವು ಸಮಾಜಕ್ಕೆ ಅಗತ್ಯ ಎಂದೇ ಪ್ರತಿಪಾದಿಸಿದ್ದ ಅಂಬೇಡ್ಕರ್ ತಮ್ಮ ಆದರ್ಶದ ಧರ್ಮವನ್ನು ಬುದ್ಧತತ್ವ ಹಾಗೂ ಬುದ್ಧ ಧರ್ಮದಲ್ಲಿ ಕಂಡುಕೊಂಡರು. ನಿರ್ದಿಷ್ಟ ಸಮುದಾಯಗಳನ್ನು ಹೊರಗಿಟ್ಟು ಹಿಂದೂ ಧರ್ಮಕ್ಕೆ ವಿಷಾದ ಪೂರ್ವಕ ಪ್ರತಿರೋಧವಾಗಿ ಬುದ್ಧ ಧರ್ಮವನ್ನು ಸ್ವೀಕರಿಸಿದರು.
ಬುದ್ಧ ಗುರು ಬದುಕಿದ ಪ್ರಜಾಸತ್ತಾತ್ಮಕ, ಸಮಾನತೆ ಮತ್ತು ಸಹೋದರತೆಗಳೇ ನಿಜವಾದ ಧರ್ಮ ಎಂದು ನಂಬಿ ನಡೆದರು. ದೇವರ ಬಗ್ಗೆ ಮೌನ ತಾಳಿದ, ವೇದ ಪ್ರಾಮಾಣ್ಯ ಮತ್ತು ಚಾತುವರ್ಣ್ಯವನ್ನು ವಿರೋಧಿಸಿದ ಬುದ್ಧ ಒಬ್ಬ ‘ವಿಚಾರವಾದಿ’ ಎಂದು ಕರೆದರು. ಇವುಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಬರೆದ ಕೆಲವು ಲೇಖನಗಳ ಸಂಗ್ರಹವನ್ನು ’ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ ’ ಕೃತಿಯಲ್ಲಿ ಡಾ. ಎಚ್. ಎಸ್. ಅನುಪಮಾ ಅವರು ಸಂಪಾದಿಸಿದ್ದಾರೆ.
©2024 Book Brahma Private Limited.