ಖ್ಯಾತ ವಿಮರ್ಶಕ, ಚಿಂತಕ ಡಾ. ಜಿ.ಕೆ. ಗೋವಿಂದರಾವ್ ಅವರ ಕೃತಿ-‘ಗಾಂಧೀಜಿಯವರ ಉಪವಾಸಗಳು ಮತ್ತು....’ ದೈನಂದಿನ ಜೀವನದಲ್ಲಿ ಉಪವಾಸ ಹಗೂ ಸತ್ಯಾಗ್ರಹ ಪರಿಕಲ್ಪನೆಗಳಿಗೆ ಗಾಂಧೀಜಿ ಅವರ ಚಿಂತನೆಗಳು ಇತರರಿಗೆ ಪ್ರೇರಣೆ ನೀಡಿವೆ. ಉಪವಾಸ ಮಾಡುವುದು ಗಾಂಧೀಜಿಯವರು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದರು. ಆದರೆ, ಬ್ರಿಟಿಷರ ವಿರುದ್ಧವೂ ಅಸ್ತ್ರವಾಗಿ ಬಳಸುತ್ತಿದ್ದರು. ಇಂತಹ ಗಾಂಧೀಜಿಯವರ ವರ್ತನೆ-ನಿಲುವುಗಳು ವಿಚಿತ್ರ ವರ್ತನೆ ಎಂಬಂತೆಯೂ ಕಾಣಿಸುತ್ತಿದ್ದವು.
ಚಿಂತಕ ಆರ್. ಸಂತೋಷ ನಾಯಕ್ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಗಾಂಧೀಜಿಯವರ ಬದುಕು-ಹೋರಾಟದ ಮಾರ್ಗದಲ್ಲಿ ಪ್ರಾರ್ಥನೆ, ಪಾಪ-ಪ್ರಾಯಶ್ಚಿತ, ಭಜನೆ, ಉಪವಾಸ, ಸತ್ಯಾಗ್ರಹ ಆತ್ಮ ಶುದ್ಧೀಕರಣ, ಬ್ರಹ್ಮಚರ್ಯ, ಅಹಿಂಸೆ ಇತ್ಯಾದಿ ಧಾರ್ಮಿಕ ಅಥವಾ ಅಧ್ಯಾತ್ಮಿಕ ಅಂಶಗಳು ಇಡೀ ವ್ಯಕ್ತಿತ್ವದ ಆಲೋಚನೆಗಳು, ಕ್ರಿಯೆಗಳ ಮತ್ತು ರಾಜಕೀಯ ನಿಲುವುಗಳ ಹಿನ್ನೆಲೆಯಲ್ಲಿ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸಿದ್ದವು. ಅವರು ಪ್ರಾರಂಭಿಸಿದ ಉಪವಾಸ ಸತ್ಯಾಗ್ರಹಗಳು ಇಂದಿಗೂ ಅಹಿಂಸಾ ಹೋರಾಟದ ಯಶಸ್ವಿ ಜನಪ್ರಿಯ ಮಾದರಿಯಾಗಿ ಪ್ರಚಲಿತದಲ್ಲಿದ್ದರೂ ಡಾ. ಅಂಬೇಡ್ಕರ ಅವರೊಂದಿಗಿನ ಐತಿಹಾಸಿಕ ಪೂನಾ ಒಪ್ಪಂದದ ಸಂದರ್ಭದಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಒತ್ತಡ ಹೇರಲು, ತಮ್ಮ ಅಭಿಪ್ರಾಯವನ್ನೇ ಎಲ್ಲರೂ ಒಪ್ಪುವಂತೆ ಮಾಡಲು, ಬಲವಂತದ ತಂತ್ರವಾಗಿ ಬಳಸಲು ಮುಂದಾದರು. ಆ ಮೂಲಕ ತಮ್ಮದೇ ಸತ್ಯಾಗ್ರಹ ಸಿದ್ಧಾಂತಗಳಿಗೆ ವಿರುದ್ಧವಾಗಿ ಉಪವಾಸವನ್ನೇ ಹಿಂಸೆಯಾಗಿ ಬಳಸಿಕೊಂಡರು ಎಂಬುದು ಗಾಂಧೀಜಿ ಮೇಲಿರುವ ಬಹುದೊಡ್ಡ ಆರೋಪ. ಗಾಂಧೀಜಿಯವರಿಗೆ ಬೇರೆ ಮಾರ್ಗಗಳಿರಲಿಲ್ಲವೆ? ಬಹುಸಂಖ್ಯಾತ ದಲಿತರ ವಿಮೋಚನೆಯನ್ನು ಏಕೆ ತಡೆದರು? ಹಿಂದೂ ಧರ್ಮ ಒಡೆದು ಹೋಳಾಗುವ ಭಯವೇಕೆ ಕಾಡಿತು? ಹಿಂದೂ ಧರ್ಮಕ್ಕಂಟಿದ ಜಾತಿ ಕಳಂಕವನ್ನು ಅಧ್ಯಾತ್ಮಿಕ ಹಾಗೂ ನೈತಿಕ ಮಾರ್ಗದಿಂದಲೇ ನಿವಾರಿಸಬಹುದು ಎಂದು ಅವರಿಗೆ ಅನ್ನಿಸಿತ್ತಾ?’ ಎಂಬ ಚಿಂತನೆಯನ್ನು ವ್ಯಕ್ತಮಾಡಿದ್ದಾರೆ. ಗಾಂಧೀಜಿಯ ಬದುಕಿನ ಇಂತಹ ವೈಚಾರಿಕ ವೈರುಧ್ಯಗಳನ್ನು ವಿಶ್ಲೇಷಿಸಿದ ವಿಶಿಷ್ಟ ಕೃತಿ ಇದು.
https://avadhimag.in/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa-%e0%b2%86%e0%b2%b0%e0%b3%8d-%e0%b2%8e%e0%b2%a8%e0%b3%8d-%e0%b2%93%e0%b2%a6%e0%b2%bf%e0%b2%a6-%ca%bc%e0%b2%97%e0%b2%be%e0%b2%82%e0%b2%a7%e0%b3%80/
©2024 Book Brahma Private Limited.