71 ಆಯ್ದ ವಚನಗಳ ನಿರ್ವಚನವಾದ ಈ ಕೃತಿಯನ್ನು ಲೇಖಕ ಕಾಶೀನಾಥ ಅಂಬಲಗೆ ಅವರು ಪ್ರಕಟಿಸಿದ್ದಾರೆ. ನಮ್ಮ ದೇಶದ ಅಕ್ಷರಲೋಕದ ಇತಿಹಾಸದಲ್ಲಿ, ಕನ್ನಡದ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ತನ್ನ ಹಲವು ಅಂದದ ಜನಪರ ಜೀವಪರ ಕಾಳಜಿಗಳಿಂದಾಗಿ ಅತ್ಯಂತ ಪ್ರಮುಖ ಕಾಲಘಟ್ಟವಾಗಿದೆ. ಎಲ್ಲ ಕೆಳಜಾತಿ ಕೆಳವರ್ಗದ ಕಾಯಕ ಜೀವಿಗಳು ಇಲ್ಲಿ ಕಾವ್ಯ ಕಟ್ಟಲು ಸಾಧ್ಯವಾಗುತ್ತದೆ. ಈ ಜೀವಿಗಳು ಇಲ್ಲಿ ಮೊದಲ ಸಲ ಮಾತಾಡುತ್ತಾರೆ. ಇವರ ಮಾತು ಮಾಣಿಕ್ಯವಾಗುತ್ತದೆ, ಜ್ಯೋತಿರ್ಲಿಂಗವಾಗುತ್ತದೆ. ಲಿಂಗ ಮೆಚ್ಚಿ ಅಹುದಹುದೆನ್ನುತ್ತದೆ. ಆ ಮಾತು ಬುದ್ದಿಜೀವಿಯು ಸಾಮಾಜಿಕ ಬದ್ಧತೆಯಿಂದ ತನ್ನ ಜನರಿಗೆ ಕೊಟ್ಟ ವಚನ ಆಗಿದೆ. ಆ ವಚನವೇ ವಚನ ಸಾಹಿತ್ಯವಾಗಿದೆ. ವ್ಯಕ್ತಿಯ ಹಾಗೂ ಸಮಾಜದ ಅಂತರಂಗ ಬಹಿರಂಗ ಏಕ ಕಾಲಕ್ಕೆ ಬೆಳಗಿದೆ. ಸೂಳೆ ಸಂಕವ್ವಯಂತಹ ಮಹಿಳೆ ಇಲ್ಲಿ ಕಾವ್ಯ ಕಟ್ಟುತ್ತಾಳೆ. ದನಗಾಹಿ ರಾಮಣ್ಣ ವಚನ ರಚನೆ ಹಾಗೂ ಆಧ್ಯಾತ್ಮ ಚಿಂತನೆಯ ಶ್ರೇಷ್ಠಶರಣನಾಗಿದ್ದಾನೆ. ದುಡಿಯುವ ಜನ ಆಡುಮಾತು ಕನ್ನಡಕ್ಕೆ ಮಂತ್ರ ಶಕ್ತಿ ತಂದು ಕೊಡುತ್ತಾರೆ. ಲಿಂಗ ಸಮಾನತೆ, ವರ್ಗ, ವರ್ಣ ರಹಿತ ಸರ್ವ ಸಮಾನತೆಗಳಿಂದ ಕೂಡಿದ ಸಮಾಜ ಇವರ ಕನಸು. 'ಸರ್ವರಿಗೆ ಸಮಬಾಳು' ಇವರ ವಚನ ಸಾಹಿತ್ಯದ ವಚನ. ಇಡೀ ವಿಶ್ವ ಮಲಗಿದ್ದಾಗ ಇವರು ಸರ್ವಾಂಗ ಸುಂದರ ಸಮಾಜದ ಕನಸು ಕಾಣುತ್ತಿದ್ದ. ಅಸಮಾನತೆಯೇ ಸಂಸ್ಕೃತಿಯ ಒಂದು ಅಂಗವಾದ ವೈದಿಕಕ್ಕೆ ಪರ್ಯಾಯವಾದ ಕಾಯಕ ಜೀವಿಗಳೇ ಕಟ್ಟಿಕೊಂಡ ಬೆಳಕಿಗೆ ಬೆಳಕೆ ಸಿಂಹಾಸನವಾದ ಸಮಾಜ ಅದು. ಅಂಥಹ ವಚನ ಚಳುವಳಿಯ ಸತ್ವಯುತವಾದ 71 ಆಯ್ದ ವಚನಗಳ ನಿರ್ವಚನವನ್ನು ಈ ಕೃತಿ ಮಾಡಿದೆ.
©2024 Book Brahma Private Limited.