`ಪ್ರಕೃತಿ ಮತ್ತು ಪ್ರೀತಿ’ ಕೃತಿಯು ಅನಸೂಯಾದೇವಿ ಅವರ ವೈಚಾರಿಕ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ವೈಚಾರಿಕಾಂಶಗಳುಳ್ಳ 65 ಬಿಡಿಲೇಖನಗಳು ಹಾಗೂ ಆಧ್ಯಾತ್ಮಿಕ ಚಿಂತನೆ, ಭಕ್ತಿ-ಭಾವ, ವಿಚಾರಗಳುಳ್ಳ 17 ಮಹತ್ವದ ಬಿಡಿಲೇಖನಗಳಿವೆ. ಇಲ್ಲಿನ ಅನೇಕ ಲೇಖನಗಳು ಈಗಾಗಲೇ ವಿಜಯ ಕರ್ನಾಟಕ ಪತ್ರಿಕೆ ಸೇರಿದಂತೆ ನಾಡಿನ ಇತರೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಿಕಪತ್ರಿಕೆಗಳಲ್ಲಿ ಪ್ರಕಟಗೊಂಡಿರುವಂಥವು ಆಗಿದ್ದು, ಅವೆಲ್ಲವನ್ನೂ ಈ ಕೃತಿಯಲ್ಲಿ ಓದುಗರಿಗೆ ಒಟ್ಟಾಗಿ ನೀಡುವ ಪ್ರಯತ್ನವನ್ನು ಮಾಡಿರುವುದು ಕೃತಿಯ ಒಟ್ಟಂದವನ್ನು ಹೆಚ್ಚಿಸಿದೆ. ಲೇಖಕಿಯ ಕಾಲಕ್ಕೆ ತಕ್ಕಂತೆ ಬದಲಾದ ಚಿಂತನಾ ಕ್ರಮ, ಗ್ರಹಿಕೆಯ ದೃಷ್ಟಿಕೋನವನ್ನು ಓದುಗರಿಗೆ ತಿಳಿಸಿಕೊಡುತ್ತದೆ; ಅಷ್ಟೆ ಅಲ್ಲದೆ, ಲೇಖಕಿಯ ಬಾಲ್ಯಜೀವನ, ಆಟೋಟ, ಆದ ಅನುಭವ, ಕಂಡುಂಡ ನೋವು-ನಲಿವು, ಯೌವನದಲ್ಲಾದ ಅನುಭವ, ತಮ್ಮ ಶಿಕ್ಷಣದ ಸಂದರ್ಭದಲ್ಲಾದ ಅರಿವು, ಬದಲಾವಣೆಯ ಜೀವನಕ್ರಮವನ್ನು ತಿಳಿಸಿಕೊಡುವಲ್ಲಿ ಸಫಲವಾಗುತ್ತವೆ. ಮಹಿಳಾಪರವಾದ ದನಿ, ಸಾಮಾಜಿಕ ಬದಲಾವಣೆಯ ತಹತಹಿಕೆ, ತಮ್ಮವರೆಂದೆನಿಸಿಕೊಂಡವರ ನಿಜಬಣ್ಣ, ಖ್ಯಾತನಾಮರ ಗೋಸುಂಬೆತನ, ಒಳ್ಳೆಯತನವೆಂಬ ಸೋಗಲಾಡಿ ಬುದ್ಧಿ, ಮಹಿಳೆಗೂ ಕಾವ್ಯದ ಅಭಿವ್ಯಕ್ತಿಗೂ ಇರುವ ನಂಟು, ಜೀವನವೆಂಬುದು ಅರಿವು ಮತ್ತು ಹೊಂದಿಕೆಯೆಂಬ ಸಮಭಾಜಕ ನೆಲೆ ಎಂಬ ವಿಚಾರಗಳು, ಈ ವಿಚಾರದಲ್ಲಿ ಲೇಖಕಿಯ ಮನೋಭಾವ ಎಂಬಿತ್ಯಾದಿ ಅಂಶಗಳು ಈ ಕೃತಿಯಲ್ಲಿ ಮೇಳೈಸಿರುವುದನ್ನು ಕಾಣಬಹುದು.
©2024 Book Brahma Private Limited.