ಬಂಡಾಯ ಸಾಹಿತ್ಯ ಚಳವಳಿಯಿಂದ ಹುಟ್ಟಿಬಂದವರು ಕವಿ, ಪತ್ರಕರ್ತ ರಂಜಾನ್ ದರ್ಗಾ. ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ ಬಸವ ವಿಚಾರಧಾರೆ ಮತ್ತು ವಚನ ಚಳವಳಿ. ಅವರ ಚಿಂತನೆಗಳ ಮುಂದುವರಿದ ಭಾಗದಂತೆ 'ಬಸವಣ್ಣ ಏಕೆ ಬೇಕು?' ಕೃತಿ ಹೊರಬಂದಿದೆ. ಶರಣ ಸಾಹಿತ್ಯ, ಸಮತಾವಾದ ಮತ್ತು ಸೂಫಿ ವಿಚಾರಗಳ ನೆಲೆಯಲ್ಲಿ ಬಸವಣ್ಣನ ಪ್ರಸ್ತುತತೆಯನ್ನು ಅರ್ಥ ಮಾಡಿಕೊಳ್ಳುವ ಯತ್ನ ನಡೆದಿದೆ.
ಕೃತಿ ಮೂರು ಅಧ್ಯಾಯಗಳನ್ನು ಒಳಗೊಂಡಿದೆ. ಮೊದಲನೆಯದು ಬಸವಣ್ಣ ಯಾಕೆ ಬೇಕು ಎನ್ನುವುದನ್ನು ಚರ್ಚಿಸಿದರೆ, ಎರಡನೆಯದು, ಬಸವ ಶಾಸನದ ಕುರಿತಂತೆ ವಿವರಿಸುತ್ತದೆ. ಮೂರನೆಯ ಅಧ್ಯಾಯದ ಹೆಸರು ಪ್ರತಿಜ್ಞೆ. ಈ ಅಧ್ಯಾಯದಲ್ಲಿ ಶರಣರು ಸ್ವೀಕರಿಸುವ ಪ್ರತಿಜ್ಞೆಗಳನ್ನು ಹೇಳಲಾಗಿದೆ. ಲಿಂಗಾಯತ ಧರ್ಮವನ್ನು ಗೊಂದಲಗಳಿಲ್ಲದೆ ಅರ್ಥ ಮಾಡುಕೊಳ್ಳಲು ಯತ್ನಿಸುವವರಿಗೆ ಉಪಯುಕ್ತವಾಗುವ ಅನೇಕ ಅಂಶಗಳು ಇಲ್ಲಿವೆ.
ಕೃತಿಯಲ್ಲಿ ’ಸುಲಿಗೆಕೋರರು ನಂಬಿಸುವ ಪ್ರಜಾಪ್ರಭುತ್ವದ ಜಾಗದಲ್ಲಿ ಜನರ ಪ್ರಜಾಪ್ರಭುತ್ವ ತರಬೇಕಿದೆ. ಅದಕ್ಕಾಗಿ ಮೊದಲಿಗೆ ಬಸವಣ್ಣನವರು ಆರಂಭಿಸಿದ ಜಾತಿ ವಿನಾಶ ಹೋರಾಟವನ್ನು ಮುಂದುವರಿಸಬೇಕಾಗಿದೆ’ ಎಂದು ದರ್ಗಾ ಅವರು ಅಭಿಪ್ರಾಯಪಡುತ್ತಾರೆ.
©2024 Book Brahma Private Limited.