ಡಾ. ಸಿದ್ದಲಿಂಗಯ್ಯನವರ ಮೂವತ್ತೂರು ಲೇಖನಗಳು ’ಆ ಮೂಲೆ ಈ ಮೂಲೆ' ಪುಸ್ತಕದಲ್ಲಿವೆ. ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಪೆರಿಯಾರ್, ಓಶೋ, ಕುವೆಂಪುರವರ ಬದುಕು, ಚಿಂತನೆ, ಸಿದ್ದಾಂತಗಳನ್ನು ಪ್ರೀತಿಯಿಂದ ಗಮನಿಸಿದ ಮತ್ತು ಸ್ವೀಕರಿಸಿದ, ಪ್ರಗತಿಶೀಲತೆಯ ಜೊತೆಗೆ ಬಂಡಾಯ ಮನೋಧರ್ಮ ಬೆರೆತ ವ್ಯಕ್ತಿತ್ವದ ಅಭಿವ್ಯಕ್ತಿಯ ಮಾದರಿ ಈ ಬರಹಗಳಲ್ಲಿದೆ.
ಹಿರಿಯ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರು ಈ ಕೃತಿಯ ಬಗ್ಗೆ ಹೀಗೆ ಬರೆದಿದ್ದಾರೆ-
ಸಾಂಸ್ಕೃತಿಕ ಜಾಥಾಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಅಂಬೇಡ್ಕರ್ ದಿನಾಚರಣೆ-ಸಂಸ್ಕರಣೆಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಸಿದ್ದಲಿಂಗಯ್ಯನವರು ಮಾಡಿದ ಭಾಷಣ ಮತ್ತು ಉಪನ್ಯಾಸಗಳು ಇಲ್ಲಿ ಲೇಖನರೂಪಕ್ಕಿಳಿದಿವೆ. ಜೊತೆಗೆ ಅವರು ಬೇರೆಬೇರೆ ಕಾರಣಗಳಿಗಾಗಿ ಇಷ್ಟಪಡುವ ಸಾಹಿತಿಗಳ, ರಾಜಕಾರಣಿಗಳ, ಹೋರಾಟಗಾರರ ಅಪರೂಪದ ವಿವರಗಳಿಂದ ಕೂಡಿದ ಆಪ್ತಧಾಟಿಯ ವ್ಯಕ್ತಿಚಿತ್ರಗಳಿವೆ. ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಸಿದ್ದಲಿಂಗಯ್ಯನವರು ಚರ್ಚಾಪಟುವಾಗಿ ಪ್ರಸಿದ್ದಿಗೆ ಬಂದವರು. ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾತನಾಡಲು ಅಗತ್ಯವಾದ ವಿಷಯಗಳನ್ನು ನಾನಾ ಮೂಲಗಳಿಂದ ಸಂಗ್ರಹಿಸಿ ಅದನ್ನು ತೀವ್ರವಾಗಿ, ಪರಿಣಾಮಕಾರಿಯಾಗಿ ಮಂಡಿಸುತ್ತಿದ್ದವರು. ಅಂಥದ್ದೇ ಪ್ರಖರತೆ, ಸಮೃದ್ಧತೆ, ವಿಚಾರಪೂರ್ಣತೆ ಈ ಗದ್ಯಬರಹಗಳನ್ನು, ಆವರಿಸಿಕೊಂಡಿದೆ. ವಿಷಯಮಂಡನೆಯಲ್ಲಿರಬೇಕಾದ ಸಮತೂಕವನ್ನು ಕಾಯ್ದುಕೊಳ್ಳುವುದರ ಜೊತೆಗೆ, ವಿಮರ್ಶಾ ವಿವೇಕದ ಎಚ್ಚರದಲ್ಲೂ ಮುನ್ನಡೆಯುವುದರಿಂದಾಗಿ ಅವರ ವಾದವನ್ನು ಪಕ್ಕಕ್ಕಿರಿಸುವುದಾಗಲೀ, ನಿರಾಕರಿಸುವುದಾಗಲೀ ಅಷ್ಟು ಸುಲಭವಲ್ಲ. ಇದು ಸಿದ್ದಲಿಂಗಯ್ಯನವರ ಗದ್ಯಬರಹದ ವೈಶಿಷ್ಟ್ಯ.
-
©2024 Book Brahma Private Limited.