ಸಮಾಜವಾದಿ ರಾಜಕಾರಣಿ ಬಾಪೂ ಹೆದ್ದೂರಿಶೆಟ್ಟಿಯವರ ಲೇಖನ ಸಂಕಲನ ‘ಸಮಾಜವಾದ ವಾದ-ವಿವಾದ’. ಸಮಾಜವಾದ ಎಂದರೇನು ಎಂಬ ಬಗ್ಗೆ ಇಡೀ ಜಗತ್ತಿನಲ್ಲೇ ಜಿಜ್ಞಾಸೆ ಇದೆ. ಈ ಬಗ್ಗೆ ಚರ್ಚೆಗಳಾಗಿವೆ. ಈಗಲೂ ಆಗುತ್ತಿವೆ. ಇದಕ್ಕೆ ಕಾರಣ ಸಮಾಜವಾದ ಎನ್ನುವುದೊಂದು ಅತ್ಯಂತ ಜನಪ್ರಿಯ ಸಿದ್ದಾಂತ ಎನಿಸಿದಾಗ ಎಲ್ಲರೂ ತಮ್ಮನ್ನು ಸಮಾಜವಾದಿಗಳು ಎಂದು ಕರೆದುಕೊಳ್ಳಲು ಪ್ರಾರಂಭಿಸಿದ್ದು. ಹೀಗಾಗಿ ಸಮಾಜವಾದ ಎನ್ನುವ ಸಿದ್ದಾಂತ ಹಲವು ಗೊಂದಲಮಯ ವಿವರಣೆಗಳಿಗೆ ಗುರಿಯಾಗಿದೆ. ಮಾರ್ಕ್ಸ್ ತನ್ನನ್ನು ವೈಜ್ಞಾನಿಕ ಸಮಾಜವಾದಿ' (Scientific Socialist) ಎಂದು ಕರೆದುಕೊಂಡರೆ, ಅರಾಜಕವಾದಿಗಳು ತಮ್ಮನ್ನು ಸ್ವಾತಂತ್ರ ಪರ ಸಮಾಜವಾದಿಗಳು (Libertarian Socialists) ಎಂದು ಕರೆದುಕೊಂಡರು.
ಮೊದಲ ಹಾಗೂ ಎರಡನೆಯ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಗಳಲ್ಲಿ ಮಾರ್ಕವಾದಿಗಳು ಹಾಗೂ ಅರಾಜಕವಾದಿಗಳು ಹಾಗೂ ಸಮಾಜವಾದಿಗಳು ಬೇರ್ಪಟ್ಟು, ಸಮಾಜವಾದಿಗಳು ತಮ್ಮನ್ನು “ಜನತಾಂತ್ರಿಕ ಸಮಾಜವಾದಿ'ಗಳು ಎಂದೂ, ಮಾರ್ಕ್ಸ್ ವಾದಿಗಳು ತಮ್ಮನ್ನು `ಕಮ್ಯುನಿಸ್ಟರೆಂದೂ ಕರೆದುಕೊಳ್ಳಲು ಪ್ರಾರಂಭಿಸಿದರೂ ಈ ಗೊಂದಲಗಳು ಉದ್ದೇಶಪೂರ್ವಕವಾಗಿಯೋ ಅಥವಾ ಅಜ್ಞಾನಪೂರ್ವಕವಾಗಿಯೋ ಇನ್ನೂ ಮುಂದುವರಿಯುತ್ತಿವೆ. “ಸ್ಪಡೀಸ್ ಇನ್ ಸೋಷಲಿಜಂ” ಎಂಬ ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಅಶೋಕ ಮೆಹತಾ : “ಭಾರತದಲ್ಲಿಂದು ಎಲ್ಲರೂ ತಮ್ಮನ್ನು ಸಮಾಜವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ... ಆದರೆ ಸಮಾಜವಾದದ ಬಗ್ಗೆ ಸ್ಪಷ್ಟತೆ ಹಾಗೂ ನಿಖರತೆ ಇಲ್ಲದಿರುವುದೇ ಈ ಬಗೆಗಿನ ಸರಿಸುಮಾರು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ” ಎನ್ನುತ್ತಾರೆ.
ಇದರಿಂದಾಗಿ ವೈಜ್ಞಾನಿಕ' ಹಾಗೂ 'ಸ್ವಾತಂತ್ರ ಪರ' ಸಮಾಜವಾದಿಗಳು ನಿರ್ಮಿಸಿರುವ ಗೊಂದಲಗಳ ಜೊತೆಗೆ ಇನ್ನೂ ಎರಡು ಥರದ ಗೊಂದಲಗಳು ಸಮಾಜವಾದಿ ಚಿಂತನೆ ಹಾಗೂ ಅದರ ವಾದ-ವಿವಾದಗಳ ಬಗ್ಗೆ ಬಾಪೂ ಹೆದ್ದೂರಶೆಟ್ಟಿ ಅವರು ಈ ಸಂಕಲನದಲ್ಲಿ ವಿವರಿಸಿದ್ದಾರೆ.
©2024 Book Brahma Private Limited.