’ಅಂಕುಶವಿಲ್ಲದ ನಡೆ’ ಲೇಖಕ ಚಿನ್ನಸ್ವಾಮಿ ಡಿ ಅವರ ವಿಮರ್ಶೆ ಮತ್ತು ವೈಚಾರಿಕ ಲೇಖನಗಳನ್ನು ಒಳಗೊಂಡ ಕೃತಿಯಾಗಿದೆ. ಒಟ್ಟು 14 ಲೇಖನಗಳಿವೆ. ಬಸವಣ್ಣ. ಮರುಳಸಿದ್ಧ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಮುಳ್ಳೂರು ನಾಗರಾಜು, ಡಾ.ಸಿದ್ಧಲಿಂಗಯ್ಯ ಹಾಗೂ ತುಕಾರಾಂ ಅವರ ಬದುಕು-ಬರಹಗಳನ್ನೊಳಗೊಂಡಿವೆ. ಅಲ್ಲದೆ, ದುಡಿಮೆಯಲ್ಲಿಯ ಮಹಿಳೆಯರ ಸ್ಥಿತಿ-ಗತಿಗಳು ಹಾಗೂ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರಚಿತ್ರಣಕ್ಕೆ ಸಂಬಂಧಪಟ್ಟ ವಿಶೇಷ ಲೇಖನಗಳು ಸೇರ್ಪಡೆಯಾಗಿವೆ.
ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ರಾಜಶೇಖರ ಜಮದಂಡಿ ‘ಇಲ್ಲಿಯ ಲೇಖನಗಳನ್ನು ನಾನು ಗಮನಿಸಿದಂತೆಯೆ ಚಿನ್ನಸ್ವಾಮಿ ಅವರಲ್ಲಿ ನಿರಂತರ ಅಧ್ಯಯನ ಮತ್ತು ಬರವಣಿಗೆ ಕಂಡುಬರುತ್ತದೆ. ಪ್ರತಿ ಲೇಖನ ಸಿದ್ಧಪಡಿಸುವಲ್ಲಿ ಪೂರಕ ಮಾಹಿತಿಗಳು ಸಂಗ್ರಹಣೆ, ವಿಶ್ಲೇಷಣೆ. ವಿವರಣೆಗಳು ಅಗತ್ಯಕ್ಕನುಗುಣವಾಗಿ ಒದಗಿಸಿದ್ದಾರೆ. ಆಯಾ ಲೇಖನಗಳ ಕೊನೆಯಲ್ಲಿ ನೀಡಿರುವ ಕೃತಿಗಳ ಪಟ್ಟಿ ಅವರ ಗಂಭೀರ ಓದಿಗೆ ಸಾಕ್ಷಿಯಾಗಿವೆ. ಬಸವಣ್ಣನವರ ಬಗೆಗಿರುವ ಅವರ ಆರಂಭದ ಲೇಖನವು 12ನೇ ಶತಮಾನದ ವಾಸ್ತವ ಚಿತ್ರಣದೊಂದಿಗೆ ಅನಾವರಣಗೊಂಡಿದೆ. ಪ್ರಸ್ತುತ, ವಚನಗಳ ಅಧ್ಯಯನವೆಂದರೆ, ಮುಂದಾಲೋಚನೆಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಎಂದರ್ಥ. ಶರಣರ ಶಿಸ್ತುಬದ್ಧ ಕಾಯಕ-ದಾಸೋಹಗಳು ಇಂದಿಗೂ ದಾರಿದೀಪವಾಗಿವೆ. ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ. ಸಮೂಹದ ಶಕ್ತಿ, ಸಮಾಜೋ ಧಾರ್ಮಿಕಾಭಿವೃದ್ಧಿಗೆ ಅವರು ಸದಾ ಚಿಂತನಶೀಲರಾಗಿದ್ದರು. “ಬರೆದಂತೆಯೇ ಬದುಕು – ಬದುಕಿದಂತೆಯೆ ಬರಹ" ಎಂಬ ಅವರ ಧೋರಣೆ ಸಾರ್ವಕಾಲಿಕ ನಾಯಕತ್ವದ ಗುಣಕ್ಕೆ ಸಾಕ್ಷಿ ಎಂಬುದನ್ನು ಚಿನ್ನಸ್ವಾಮಿಯವರು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ. “ಮಾನವ ಕುಲಂ ತಾನೊಂದೇ ವಲಂ” ಎಂಬ ಪಂಪನ ವಾಣಿಯನ್ನು ಮರು ರಚನೆಗೈದ ಅಂಬೇಡ್ಕರರಲ್ಲಿಯ ಸಾಮಾಜಿಕ ಪ್ರಜ್ಞೆ ಬೌದ್ಧಿಕ ಚಿಂತನೆಗಳು ಹೇಗಿದ್ದವು ಎಂಬುದನ್ನು ಚಿನ್ನಸ್ವಾಮಿ ಅವರು ಎಳೆಎಳೆಯಾಗಿ ಇಲ್ಲಿ ಚಿತ್ರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.