‘ಕಾರಂತರ ಕಾದಂಬರಿಗಳಲ್ಲಿ ದುಡಿಮೆ’ ಲೇಖಕ ಕೆ. ಸತ್ಯನಾರಾಯಣ ಅವರ ಕೃತಿ. ಶಿವರಾಮ ಕಾರಂತರ ಕಾದಂಬರಿಗಳಿಂದ ಕೆಲವು ಸನ್ನಿವೇಶ-ಸಂದರ್ಭಗಳನ್ನು ಆಯ್ದುಕೊಂಡ ಲೇಖಕರು, ಅವುಗಳನ್ನು ಪ್ರಸ್ತುತವಾಗಿ ಎದುರಿಸುತ್ತಿರುವ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದರ ಚಿತ್ರಣ ನೀಡಿದ್ದಾರೆ. ಈ ವಿವರಣೆಗಳು ಸಂಕ್ಷಿಪ್ತವಾದರೂ ಸೂಕ್ತ ಹಾಗೂ ಸಮಂಜಸವಾಗಿವೆ.
ಯಾರೂ ಮುಂಗಾಣದಿದ್ದ ಪ್ರಸಕ್ತ ಸನ್ನಿವೇಶದ ಸಂಕಷ್ಟದ ದಿನಗಳು ಕಾರಂತರ ಕೃತಿಗಳಲ್ಲಿ ಕಂಡುಬರುತ್ತವೆ. ಈ ಸಮಕಾಲೀನತೆಯ ಬಗ್ಗೆ ಲೇಖಕರು ದೀರ್ಘವಾಗಿ ವಿವರಿಸಿದ್ದಾರೆ ಎನ್ನುತ್ತಾರೆ -ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಮಾಳವಿಕಾ ಕಪೂರ್. ಕಾರಂತರ ಪ್ರತಿ ಕಾದಂಬರಿಯ ಸಂಕ್ಷಿಪ್ತ ಐತಿಹಾಸಿಕ ಹಿನ್ನೆಲೆ ಹಾಗೂ ಕಾರಂತರು ಆ ಕೃತಿಗಾಗಿ ಕೈಗೊಂಡ ಸಿದ್ಧತೆಗಳ ಕುರಿತು ಲೇಖಕರು ವಿವರಗಳನ್ನು ನೀಡುತ್ತಾರೆ. ಸಾಮಾಜಿಕ ಅಸಮಾನತೆಗಳು, ಬದುಕಿಗಾಗಿ ಎದುರಿಸಿದ ಸಂಘರ್ಷಗಳು, ಕಾಯಿಲೆಗಳು, ವಲಸೆ ಹೀಗೆ ಕಾದಂಬರಿಗಳಲ್ಲಿ ಕಾಣ ಸಿಗುವ ಸನ್ನಿವೇಶಗಳನ್ನು ಆಯ್ದು ಚರ್ಚಿಸುತ್ತಾರೆ. ಆ ಮೂಲಕ ಲೇಖಕರು, ಕಾರಂತರ ದೂರದೃಷ್ಟಿ, ಸೂಕ್ಷ್ಮ ಮನೋಭಾವದ ದರ್ಶನ ಮಾಡಿಸುತ್ತಾರೆ.
ಕಾರಂತರ ಕಾದಂಬರಿಗಳಲ್ಲಿ ʼದುಡಿʼಮೆ ಕೃತಿಯ ವಿಮರ್ಶೆ
ಸಣ್ಣ ಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಅಂಕಣ ಬರಹ, ಪ್ರವಾಸ ಕಥನ - ಮುಂತಾಗಿ ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಬರಹಗಳನ್ನು ರಚಿಸಿರುವ ಪ್ರಸಿದ್ದ ಲೇಖಕ ಶ್ರೀ ಕೆ. ಸತ್ಯನಾರಾಯಣ ಅವರ ಶಿವರಾಮ ಕಾರಂತರ ಆಯ್ದ ಕಾದಂಬರಿಗಳ ವಿಮರ್ಶಾತ್ಮಕ ಬರಹ ಈ ಪುಸ್ತಕ. ದುಡಿಮೆಯನ್ನೇ ಜೀವನದ ಮೌಲ್ಯವನ್ನಾಗಿ ಪರಿಗಣಿಸುವ ಕಾರಂತರು ಅದನ್ನು ತಮ್ಮ ಕಾದಂಬರಿಗಳು ಅಭಿವ್ಯಕ್ತಿಸಿರುವ ರೀತಿ ಅನನ್ಯವಾದದ್ದು. ಕಾರಂತರ ಆಯ್ದ ಆರು ಕಾದಂಬರಿಗಳಲ್ಲಿ ಶ್ರಮ ಪ್ರಪಂಚದ ಸಂಕೀರ್ಣ ವಿವರಗಳ ಲಯವನ್ನು ಅತ್ಯಂತ ತನ್ಮಯತೆಯಿಂದ ಲೇಖಕರು ಬಿಚ್ಚಿಡುತ್ತಾರೆ. ಈ ವಿಮರ್ಶೆಯ ಪುಸ್ತಕ ರಚಿತವಾದ ಸಂದರ್ಭವೇ ವಿಶಿಷ್ಟವಾದುದು. ಇಡೀ ದೇಶ ಕೋವಿಡ್-19 ವಿಶ್ವವ್ಯಾಪಿ ಪಿಡುಗಿನಿಂದ ತತ್ತರಿಸುತ್ತಿರುವಾಗ ದುಡಿಮೆಗಾರರ ವಲಸೆ ಸೃಷ್ಟಿಸಿದ ಭೀಕರ ಪರಿಣಾಮದ ಹಿನ್ನೆಲೆಯಲ್ಲಿ ಕಾರಂತರ ಕಾದಂಬರಿ ಜಗತ್ತಿನ ಅನುಭವವನ್ನು ಶೋಧಿಸುವ ಪ್ರಯತ್ನ ಮಾಡಲಾಗಿದೆ. ಕರ್ನಾಟಕದ ನಿರ್ದಿಷ್ಟ ಪ್ರದೇಶದಲ್ಲಿ ವಿವಿಧ ವಿನ್ಯಾಸದ ದುಡಿಮೆಗಾರರ ವಲಸೆಯನ್ನು, ಅದಕ್ಕೆ ಕಾರಣವಾಗುವ ಸಾಮಾಜಿಕ, ಆರ್ಥಿಕ ಒತ್ತಡಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
ವಸಾಹತೀಕರಣದ ಪ್ರಭಾವದಿಂದಾಗಿ ಕರಾವಳಿಯ ಕೆಲವೆಡೆ ಪ್ಲಾಂಟೇಶನ್ ವ್ಯವಸ್ಥೆ ಜಾರಿಗೆ ಬಂದುದರ ಪರಿಣಾಮವಾಗಿ ಕೆಳ ಜಾತಿ, ವರ್ಗಗಳ ಶ್ರಮಿಕರು ಗುಂಪು ಗುಂಪುಗಳಾಗಿ ಪಶು-ಪ್ರಾಣಿಗಳಂತೆ ವಲಸೆ ಹೋಗುವ ಅವಸ್ಥೆ ಬಂದೊದಗಿದೆ. ಮತ್ತೊಂದು ಕಡೆ ಇಂಗ್ಲಿಷ್ ಕಲಿತ ಮೇಲ್ಜಾತಿಯ ಹುಡುಗರು ನಗರ ಜೀವನಕ್ಕೆ ಹಾತೊರೆಯುವುದು ಮತ್ತು ಕೆಲವೊಮ್ಮೆ ಅದನ್ನು ಬಿಟ್ಟು ಗ್ರಾಮ ಜೀವನಕ್ಕೆ ಹಿಂತಿರುಗುವುದು , ಈ ವಿನ್ಯಾಸವನ್ನು ಕಾರಂತರ ಬರಹದಲ್ಲಿ ಗುರುತಿಸಲಾಗಿದೆ. ಹೊಟ್ಟೆಯ ಪಾಡಿಗಾಗಿ, ದುಡಿಯುವ ಅಗತ್ಯಕ್ಕಾಗಿ ನಡೆಸುವ ವಲಸೆ ಒಂದು ರೀತಿಯದಾದರೆ, ಚಾಲ್ತಿಯಲ್ಲಿರುವ ದುಡಿಮೆಯಲ್ಲಿ ಆಸಕ್ತ ಕಳೆದುಕೊಂಡು ಹೊಸ ರೀತಿಯ ದುಡಿಮೆ ಮತ್ತು ಆದಾಯದ ಮೂಲಗಳನ್ನು ಹುಡುಕಿಕೊಂಡು ನಗರ ಪ್ರದೇಶಕ್ಕೆ ವಲಸೆ ಹೋಗುವ ಗುಂಪು ಇನ್ನೊಂದು. ಈ ಎರಡೂ ಗುಂಪುಗಳ ಸಾಂಸ್ಕೃತಿಕ ವೈಲಕ್ಷಣ್ಯಗಳನ್ನು ಕಾರಂತರ ಚೋಮನ ದುಡಿ, ಕುಡಿಯರ ಕೂಸು, ಮರಳಿ ಮಣಿಗೆ, ಬೆಟ್ಟದ ಜೀವ, ಚಿಗುರಿದ ಕನಸು ಜಾರುವ ದಾರಿಯಲ್ಲಿ ಕಾದಂಬರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಿಸಲಾಗಿದೆ. "ಚೊಮನ ದುಡಿ'ಯ ಬೆಳ್ಳಿಯಂತಹ ಕೂಲಿ ಹೆಣ್ಣಾಗಲೀ, ಇಲ್ಲವೇ 'ಮರಳಿ ಮಣ್ಣಿಗೆ'ಯ ಸರಸೋತಿ, ಪಾರೋತಿ, ನಾಗವೇಣಿಯರಾಗಲೀ ಎರಡು ಪಾಳಿಯ ಕೆಲಸದಿಂದ ಮುಕ್ತರಲ್ಲ ಎಂಬ ಸೂಕ್ಷ್ಮ ವಿಚಾರಗಳನ್ನು ಗಮನಿಸುವ ಕಾರಂತರ ಬರಹದ ರೀತಿ ಅವರಿಗೇ ವಿಶಿಷ್ಟವಾದದ್ದು. ಸತ್ಯನಾರಾಯಣ ಅವರ ವಿಮರ್ಶೆ ಕಾರಂತರ ಕಾದಂಬರಿಯಂತೆಯೇ ಆಕರ್ಷಕವಾಗಿ ಓದಿಸಿಕೊಳ್ಳುವುದು ಈ ಪುಸ್ತಕದ ಹಿರಿಮೆಯಾಗಿದೆ.
(ಕೃಪೆ: ಹೊಸತು ಎಪ್ರಿಲ್ 2021, ಬರಹ: ಆಶಾ ಎನ್., ಬೆಂಗಳೂರು)
©2024 Book Brahma Private Limited.