ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ಕೇಂದ್ರವಾಗಿಟ್ಟುಕೊಂಡು, ನಡೆಸಿದ ತನಿಖೆ ಮತ್ತು ಅದರ ವರದಿಯನ್ನು ಒಳಗೊಂಡ ಪ್ರಮುಖ ಕೃತಿ ಇದು. ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ದಾಳಿಯನ್ನೂ ಈ ತನಿಖೆ ಒಳಗೊಂಡಿದೆ. ನ್ಯಾ. ಮೈಕಲ್ ಎಫ್ ಸಲ್ದಾನ ಅವರ ನೇತೃತ್ವದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಮತ್ತು ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಶನಲ್ ಇವುಗಳ ವತಿಯಿಂದ ವಿಚಾರಣೆ ನಡೆದಿದ್ದು, ಅದರಿಂದ ಹೊರಬಿದ್ದಿರುವ ವರದಿಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಇದರ ಒಂದು ಲಕ್ಷ ಪ್ರತಿಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದು ಪ್ರಕಾಶಕರು ಹೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ದಾಳಿಗಳು ನಡೆದವು. ಮತ್ತು ಈ ದಾಳಿಯ ಹಿಂದೆ ಸಂಘಪರಿವಾರದ ದುಷ್ಕರ್ಮಿಗಳಲ್ಲದೆ, ಸರಕಾರವೂ ಪರೋಕ್ಷವಾಗಿ ಭಾಗಿಯಾಗಿದೆ ಎನ್ನುವುದನ್ನು ಕೃತಿ ಮುಕ್ತವಾಗಿ ವಿವರಿಸುತ್ತದೆ. ದುಷ್ಕರ್ಮಿಗಳು ಸರಕಾರಿ ವ್ಯವಸ್ಥೆಯನ್ನು ಈ ದಾಳಿಗೆ ಬಳಸಿರುವುದು ವಿಚಾರಣೆಯ ಸಂದರ್ಭದಲ್ಲಿ ಬಹಿರಂಗವಾಗಿದೆ ಎನ್ನುವುದನ್ನು ನಿವೃತ್ತ ನ್ಯಾಯಮೂರ್ತಿ ಎಂ. ಎಫ್. ಸಲ್ದಾನ ಹೇಳುತ್ತಾರೆ. ಈ ವಿಚಾರಣೆ ದೇಶದಲ್ಲೇ ಪ್ರಥಮ ಬಾರಿಯಾಗಿ ನಡೆದಿರುವ ಪ್ರಯೋಗ ಎಂದು ಅವರು ಅಭಿಪ್ರಾಯಪಡುತ್ತಾರೆ. ಹಲವು ಪ್ರಕರಣಗಳನ್ನು ಅತ್ಯಂತ ಶಿಸ್ತಿನಿಂದ ವಿಚಾರಣೆ ನಡೆಸಿದ ಅದರ ವರದಿಯನ್ನು ಯಾವುದೇ ಪಕ್ಷಪಾತ, ಪೂರ್ವಾಗ್ರಹ, ಭಯವಿಲ್ಲದೆ ಈ ಕೃತಿ ತೆರೆದಿಟ್ಟಿದೆ. ವರದಿಯ ಕೊನೆಯಲ್ಲಿ, ಈ ಘಟನೆಗಳು ಮುಂದೆಯೂ ಮರುಕಳಿಸಬಹುದೆಂಬ ಎಚ್ಚರಿಕೆಯನ್ನುಈ ಕೃತಿ ನಮಗೆ ನೀಡುತ್ತದೆ.
©2024 Book Brahma Private Limited.