“ಆಧ್ಯಾತ್ಮ” ಮತ್ತು “ನಂಬಿಕೆ” ಇವು ಒಂದೇ ಅಲ್ಲ, ಎಲ್ಲವೂ ನನಗೆ ಗೊತ್ತಿದೆ ಎನ್ನುವುದು ನಂಬಿಕೆ. ಎಲ್ಲವೂ ನನಗೆ ಗೊತ್ತಿಲ್ಲ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ ಎನ್ನುವುದು ಆಧ್ಯಾತ್ಮ. ಇಂತಹ ವಿಷಯಗಳ ಜಿಜ್ಞಾಸೆಯೇ ‘ಸತ್ಯ ಎಲ್ಲಿದೆ? ಕೃತಿ. ಸಿದ್ಧಾರ್ಥ ವಾಡೆನ್ನವರ್ ಅವರು ಜಿಜ್ಞಸೆಯ ಈ ಕೃತಿಯನ್ನು ರಚಿಸಿದ್ದಾರೆ.
ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ಕ್ರಿಯಾಯೋಗ ಇವು ಜಗದೊಡೆಯನ ಸನ್ನಿಧಿಗೆ ಹೋಗಲು ಇರುವ ಮಾರ್ಗಗಳು. ಇವುಗಳ ಬಗ್ಗೆ ಅಧ್ಯಯನ ಮಾಡಿ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿದರೆ ಯಾರ ಉಪದೇಶ ನಮಗೆ ಬೇಕಾಗುವುದಿಲ್ಲ. ಯಾವ ಯೋಗದಲ್ಲಿ ಯಾವ ಸಂದೇಶವಿದೆ ಎನ್ನುವುದನ್ನು ತಿಳಿದುಕೊಂಡು ಸೂಕ್ತ ದಾರಿಯಲ್ಲಿ ಸಾಗಿದರೆ ನಮಗೆ ಸತ್ಯದ ದರ್ಶನವಾಗುತ್ತದೆ. ನಾನು ಏನಾದರೂ ಸಾಧಿಸಿಯೇ ತೀರುತ್ತೇನೆ ಎನ್ನುವವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಬ್ಬ ಕೂಲಿ ಮಾಡುವ ಹೆಣ್ಣುಮಗಳು ಜಗತ್ತಿನ ಶ್ರೀಮಂತ ದೇಶಕ್ಕೆ ಹೋಗಿ ಅಲ್ಲಿ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾಳೆ. ಅವಳು ಯುವ ಜನತೆಗೆ ಹೀಗೆ ಸಲಹೆ ನೀಡುತ್ತಾಳೆ, “ಅದೃಷ್ಟವನ್ನು ನಂಬಿ ನೀವು ಕೆಲಸವನ್ನು ಮಾಡಬೇಡಿ. ಸಾಧನೆ ಎನ್ನುವುದು ಅದೃಷ್ಟದಿಂದ ಬರುವುದಲ್ಲ ಅದು ಧೈರ್ಯ, ಜ್ಞಾನ, ಸತತ ಪರಿಶ್ರಮ, ಬಿಡದ ಛಲ ಮತ್ತು ಗಟ್ಟಿ ನಿರ್ಧಾರಗಳಿಂದ ಬರುತ್ತದೆ” ಎಂದು.
ನಮ್ಮನ್ನಾಳುವವರು ಭ್ರಷ್ಟರು, ದುಷ್ಟರು, ಸ್ವಾರ್ಥಿಗಳು, ಸ್ವಜಾತಿ ಪ್ರೇಮಿಗಳು ಆಗಿದ್ದಾರೆ. ನಮ್ಮನ್ನು ನಾವೇ ಆಳುವಂತಾಗಬೇಕು ಎಂಬ ಅಧ್ಯಾತ್ಮದ ನೆಲೆಯಲ್ಲಿ ಜಿಜ್ಞಾಸೆಯನ್ನು ಹುಟ್ಟುಹಾಕುವ, ಪ್ರೇರಣಾತ್ಮಕ ಚಿಂತನ ಕೃತಿ ಇದು.
©2024 Book Brahma Private Limited.