ಹದಿನೈದು ಬಗೆಬಗೆಯ ಲೇಖನಗಳನ್ನು ಹೊಂದಿರುವ ಸಂಗ್ರಹ ’ಇಬ್ಬನಿಯ ಕಾವು’. ಲೇಖಕಿ ಬಾನು ಮುಷ್ತಾಕ್ ತನ್ನನ್ನು ಕಾಡಿದ ಅಂಶಗಳನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಲೇಖನಗಳಿಗೆ ಗೇಯಗುಣವೂ ಇರುವುದರಿಂದ ಕವಿತೆಯಂತೆಯೂ ಭಾಸವಾದರೆ ಅಚ್ಚರಿಯಿಲ್ಲ.
ಸುರಯ್ಯ ಕುರಿತ ಲೇಖನ, ಎಸ್.ಎಲ್. ಭೈರಪ್ಪನವರ ’ಆವರಣ’ದ ಬಗೆಗಿನ ಬರಹ ಹಾಗೂ ಅಧ್ಯಕ್ಷ ಭಾಷಣ ಇಲ್ಲಿನ ಪ್ರಮುಖ ಲೇಖನಗಳು.
ಕೃತಿ ಹೀಗೆ ಮಾತನಾಡುತ್ತದೆ: 'ನಾಗರಿಕ ಸಮಾಜದ ಅಸೀಮ ಸಾಧ್ಯತೆಗಳ ನಡುವೆಯೂ ವಾಸ್ತವ ತನ್ನ ಎಲ್ಲಾ ಕರಾಳಮುಖಗಳೊಂದಿಗೆ ವಿಜೃಂಭಿಸುತ್ತದೆ. ಅಭಿವ್ಯಕ್ತಿ ಕ್ರಿಯೆಯು ನಮ್ಮ ವ್ಯಕ್ತಿತ್ವದ ಅವಿನಾ ಭಾಗ, ನಮ್ಮ ಸಾಮಾಜಿಕ ವ್ಯಕ್ತಿತ್ವದ ಅಭಿವ್ಯಕ್ತಿಯು ನಾವು ನಂಬಿದ ಸತ್ಯಗಳ ಆಧಾರದ ಮೇಲೆ ಪ್ರೇರಿತವಾಗಿರುತ್ತದೆ. ನಾವು ಕಂಡುಕೊಂಡ ವೈಯುಕ್ತಿಕ ಸತ್ಯ ಮತ್ತು ಇತರೆಯವರ ಸ್ಥಾಪಿತ ಸತ್ಯದ ನಡುವಿನ ತಾಕಲಾಟ ಮತ್ತು ಮೇಲುಕೀಳಾಟವು ಪಟ್ಟಭದ್ರಹಿತಾಸಕ್ತಿಗಳು ಹಾಗೂ ಪ್ರಭುತ್ವಕ್ಕೆ ಎಂದಿನಿಂದಲೂ ಸವಾಲನ್ನು ಒಡ್ಡುತ್ತಲೇ ಬರುತ್ತಿದೆ ಹಾಗೂ ನಿರ್ದಯವಾಗಿ ದಮನಕ್ಕೆ ಒಳಗಾಗುತ್ತಲೇ ಇದೆ.
ವರ್ತಮಾನದ ಬದುಕಿನಲ್ಲಿ ಮೌನವೆಂಬುದು ಶರಣಾಗತಿಯ ಇನ್ನೊಂದು ರೂಪವಾಗುತ್ತಿದೆ. ಯಾರ ಪರ ವಹಿಸದೇ ಮೌನವಾಗಿರುವುದೂ ಕೂಡ ಪರ ವಹಿಸಿದಂತೆಯೇ ಎಂಬ ಸತ್ಯವನ್ನು ನಾವು ಬೇಕೆಂತಲೇ ಕಡೆಗಣಿಸಿದ್ದೇವೆ. ಕಂಡೂ ಕಾಣದಂತೆ ಮೌನ ವಹಿಸಿ ಜಾಣ ಕುರುಡು ಮತ್ತು ಜಾಣ ಕಿವುಡನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ನಾಜೂಕಾಗಿ ಬದುಕುವುದನ್ನು ಕಲಿಯುತ್ತಿದ್ದೇವೆ. ಹೀಗಾಗಿ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಬದಲಾಗಿ ಮುಂದೊಂದು ದಿನ ಯಾವಾಗಲಾದರೂ ಉಪಯೋಗಕ್ಕೆ ಬಂದೀತೆಂದು ಅವುಗಳನ್ನು ಶೈತ್ಯೀಕರಿಸುವ, ಮಂಜುಗಡ್ಡೆಯನ್ನಾಗಿಸುವ ಕ್ರಿಯೆಯಲ್ಲಿ ತೊಡಗಿದ್ದೇವೇನೋ ಎಂದೆನಿಸುತ್ತಿದೆ.'
©2024 Book Brahma Private Limited.