ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಅವರ ವೈಚಾರಿಕ ಲೇಖನಗಳ ಕೃತಿ-ಜಾಗತೀಕರಣದ ತಿರುವಿನಲ್ಲಿ ಭಾರತ. ಜಾಗತೀಕರಣವು ದೇಶಗಳ ಸಮಸ್ಯೆಗಳನ್ನು ಪರಿಹರಿಸಿಲ್ಲ. ಬದಲು ಪರೋಕ್ಷವಾಗಿ ಅದು ಬಂಡವಾಳಶಾಹಿಗಳನ್ನು ಬೆಳೆಸಿತು ಮತ್ತು ಅವರು ಬೆಳೆಯಲು ಬೇಕಾದ ವಾತಾವರಣವನ್ನು ನಿರ್ಮಿಸಿತು. ಈ ಹಂತದಲ್ಲಿ ಕಾಣಿಸಿಕೊಂಡ ಇನ್ನೊಂದು ರೋಗವೆಂದರೆ ಭ್ರಷ್ಟಾಚಾರ. ಈ ಬಗ್ಗೆ, ಲೇಖಕರು ಅಸಹನೆಯನ್ನು ಇಲ್ಲಿಯ ಬರಹಗಳಲ್ಲಿ ಸಹಜವಾಗಿಯೇ ಪ್ರಕಟಿಸಿದ್ದಾರೆ. ‘ದೇಶದ ಅಭಿವೃದ್ಧಿಯ ಶತ್ರು ಭ್ರಷ್ಟಾಚಾರ’ ‘ಭ್ರಷ್ಟಾಚಾರ ಎಂಬ ಕಪ್ಪು ಕಲೆ ಇಂದಲ್ಲ ನಾಳೆ ಮಾಯಾವಾಗುತ್ತವೆ ಎಂದು ಮುಕ್ಕಾಲು ಶತಮಾನದಿಂದ ಸಮಸ್ತ ಭಾರತೀಯರೆಲ್ಲರೂ ಕಾಯುವುದೇ ಆಯಿತು ಮೂಢನಂಬಿಕೆ, ಅಸಮಾನತೆ, ಸ್ವಜನಪಕ್ಷಪಾತ, ನಿರುದ್ಯೋಗ, ಲಿಂಗತಾರತಮ್ಯ, ಅಸ್ಪøಶ್ಯತೆ, ಜಾತೀಯತೆ, ಧರ್ಮಾಂದತೆ, ಅತ್ಯಾಚಾರಗಳನ್ನು ಭ್ರಷ್ಟಾಚಾರದ ಜೊತೆಗಿರಿಸಿ, ಇವೆಲ್ಲ ಭಾರತದ ಅಭಿವೃದ್ಧಿಗೆ ಹೇಗೆ ತೊಡಕಾಗಿ ಪರಿಣಮಿಸಿವೆ ಎಂಬುದನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಬರಹಗಳು ಒಳಗೊಂಡಿವೆ. ಚುನಾವಣಾ ವಿಷಯವಾದದ್ದೂ ಉಂಟು. ಈ ಸಮಸ್ಯೆಯ ಸಂಕೀರ್ಣತೆಯ ಕುರಿತು ಲೇಖಕರು ಸಮರ್ಥವಾಗಿ ಬೆಳಕು ಚೆಲ್ಲಿದ್ದಾರೆ. ಭಾರತದ ಅಂತರ್ಯವನ್ನು ಕಲಕಿದ ಮತ್ತು ಪ್ರಭಾವಿಸಿದ ಕೆಲವು ಮಹಾನುಭಾವರ ಬಗ್ಗೆ ಉಪಯುಕ್ತ ಲೇಖನಗಳಿವೆ. ‘ನಮ್ಮ ಪಾಪಪ್ರಜ್ಞೆಯನ್ನು ಎಚ್ಚರಿಸುವ ಗಾಂಧೀಜಿ’ ಲೇಖನ’ದಲ್ಲಿ ತಮ್ಮ ಸಾತ್ವಿಕ ಆಕ್ರೋಶವನ್ನು ಪ್ರಕಟಿಸುತ್ತಾರೆ.
ಕರ್ನಾಟಕದ ಅನೇಕ ಬರಹಗಾರರನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿಗಳಲ್ಲಿ ರಾಮ ಮನೋಹರ ಲೋಹಿಯಾ ಕೂಡಾ ಒಬ್ಬರು. ಅವರನ್ನು ‘ಪ್ರತಿನಾಯಕ ಪ್ರಜ್ಞೆಯ ರಾಮ ಮನೋಹರ ಲೋಹಿಯಾ’ ಎಂದು ಕರೆಯುವ ಲೇಖಕರು, ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಅವರ ಅಗತ್ಯ ಏನೆಂಬುದನ್ನು ಮನಗಾಣಿಸಲು ಯತ್ನಿಸಿದ್ದಾರೆ. ಇಂದಿನ ಭಾರತೀಯ ಸಮಾಜ ಮತ್ತು ರಾಜಕೀಯವನ್ನು ಪ್ರಭಾವಿಸುತ್ತಿರುವ ಇನ್ನೊಬ್ಬ ವ್ಯಕ್ತಿಯೆಂದರೆ ಅಂಬೇಡ್ಕರ್ ಅವರು. ‘ಸಾಮಾಜಿಕ ಕಾರ್ಯದಕ್ಷತೆ ಇಲ್ಲದಿದ್ದರೆ ಸರ್ವರ ಅಭಿವೃದ್ಧಿಯಾಗದು’ ಎಂಬ ಡಾ. ಅಂಬೇಡ್ಕರ್ ಅವರ ಮಾತುಗಳು ಲೇಖನದ ಗಟ್ಟಿತನದ ಅಂಗಳಾಗಿವೆ. ‘ಸ್ವಾತಂತ್ರ್ಯ ಪ್ರಾಪ್ತಿಯ ಆರೂವರೆ ದಶಕಗಳ ಬಳಿಕವೂ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಹಲವರು ದೇಶಭಕ್ತರು ತೆರೆಯ ಮರೆಯಲ್ಲಿದ್ದಾರೆ’ ಎಂಬ ಪರಿಪ್ರೇಕ್ಷ್ಯದಲ್ಲಿ ಹುತಾತ್ಮ ಭಗತ್‍ಸಿಂಗ್ ಅವರನ್ನೂ ಇಲ್ಲಿ ಪರಿಚಯಿಸಲಾಗಿದೆ. ‘ಸಿದ್ಧಿಪುರುಷ ನಿಜನಾಯಕ ಎಸ್.ನಿಜಲಿಂಗಪ್ಪ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರನ್ನೂಸಾಧನೆಗಳ ಪರಿಚಯದ ಬರಹಗಳು ಇವೆ.
©2024 Book Brahma Private Limited.