ಉರಿವ ಬತ್ತಿಯ ಬೆಳಕಿನ ಧ್ಯಾನ ವೆಂಕಟೇಶ ಬೇವಿನಬೆಂಚಿ ಅವರ ಕೃತಿಯಾಗಿದೆ. ಯಾವುದನ್ನೂ ಪರೀಕ್ಷಿಸದೇ, ಪ್ರಶ್ನಿಸದೇ ನಂಬಬಾರದು ಎನ್ನುವುದೇ ಮೂಲಸೂತ್ರ, ಜಡಗೊಂಡ ವೈಚಾರಿಕತೆಯ ಯಾವ ಸಮಾಜಕ್ಕೆ ಚಲನಶೀಲತೆಯನ್ನು ತುಂಬಬೇಕಾದರೆ ಇಂತಹದ್ದೊಂದು ವಿಚಾರಕ್ರಾಂತಿಯ ಅಗತ್ಯವಿದೆ. ಕ್ರಾಂತಿಯೂ ಹೆಗಲಿಗೇರಿಸಿದ ತುಪಾಕಿಯಿಂದ ಸಾಗುವುದೂ ಇಲ್ಲ, ಮುಗಿಯುವುದೂ ಇಲ್ಲ, ಇದನ್ನರಿತೇ ಮಿತ್ರ ವೆಂಕಟೇಶ ಬೇವಿನಬೆಂಚಿ ಅವರು ತಮ್ಮ 'ಉರಿವ ಬತ್ತಿಯ ಬೆಳಕಿನ ಧ್ಯಾನ' ಕೃತಿಯ ಮೂಲಕ ಜನಮಾನಸದಲ್ಲಿ ತಾತ್ವಿಕ ನೆಲೆಗಟ್ಟನ್ನು ಗಟ್ಟಿಗೊಳಿಸಿ, ವಿಚಾರಕ್ರಾಂತಿಯನ್ನು ವಿಸ್ತಾರಗೊಳಿಸಲು ಹೊರಟಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕ ಹಾಗೂ ಬುದ್ಧನ ವಿಚಾರಧಾರೆಗಳಿಂದ ಪ್ರೇರಿತಗೊಂಡ ದಲಿತ ಚಳುವಳಿಗಳ ಭಾಗವಾಗಿಯೇ ಸಾಗಿಬಂದ ವೆಂಕಟೇಶ ಅವರ ಬರವಣಿಗೆ ಸದಾ ಸ್ವಸ್ಥ ಸಮಾಜದ ನಿರ್ಮಾಣ ಮತ್ತು ದಲಿತರ ಬದುಕಿಗೆ ಬಲವನ್ನು ತುಂಬುವ ಕನಸುಗಳೊಂದಿಗೆ ಸಾಗುವುದನ್ನು ನಾವು ಕಾಣುತ್ತೇವೆ. ಸಾಮಾಜಿಕ ಅನಿಷ್ಟಗಳನ್ನು ವಾಸ್ತವಪ್ರಜ್ಞೆಯಿಂದ ಹಾಗೂ ಚಿಕಿತ್ಸಕ ದೃಷ್ಟಿಯಿಂದ ವಿಮರ್ಶಿಸಿ, ವಿಶ್ಲೇಷಿಸಿ ಅವುಗಳಿಗೊಂದು ನಿಖರ ಪರಿಹಾರ ಸೂಚಿಸುವ ಲೇಖನಗಳು ಈ ಕೃತಿಯಲ್ಲಿವೆ ಎಂಬುದೇ ಸಂತಸದ ಸಂಗತಿ. ಈ “ಉರಿವ ಬತ್ತಿಯ ಬೆಳಕಿನ ಧ್ಯಾನ'ವು ಅಂಬೇಡ್ಕರ್ ಅವರ ವೈಚಾರಿಕ ಪ್ರಖರತೆಯನ್ನೂ, ಬುದ್ಧನ ಬೆರಳುಗಳ ನೇವರಿಕೆಯ ಸಂತೈಸುವಿಕೆಯನ್ನೂ ಸಹೃದಯನ ಹೃದಯಕ್ಕೆ ಸಂವಹಿಸುತ್ತದೆ. ದಲಿತರ ಬಾಳಿಗೆ ಬೆಳಕನ್ನು ತೋರಿದಂತಹ ಬುದ್ಧ, ಅಂಬೇಡ್ಕರ್, ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಫುಲೆ, ತಂದೆ ರಾಮಸ್ವಾಮಿ ಪೆರಿಯಾರ್, ಸಾಹು ಮಹಾರಾಜ್, ದಲಿತ ನೇತಾರ ಬಿ. ಕೃಷ್ಣಪ್ಪ ಮೊದಲಾದವರ ವೈಚಾರಿಕ ನಿಲುವುಗಳ ಸಮರ್ಥ ಪ್ರತಿಪಾದನೆಯನ್ನು ಈ ಕೃತಿಯಲ್ಲಿ ವೆಂಕಟೇಶ ಬೇವಿನಬೆಂಚಿ ಅವರು ಮಾಡಿದ್ದಾರೆ.
ವೆಂಕಟೇಶ ಬೇವಿನಬೆಂಚಿ ಅವರು ಮೂಲತಃ ರಾಯಚೂರು ತಾಲೂಕಿನ ಬೇವಿನಬೆಂಚಿ ಗ್ರಾಮದವರು. ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಪದವಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿ ಪ್ರಗತಿಪರ ಚಳುವಳಿಗಳಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ 2006 ರಿಂದ 2008ರವರೆಗೆ ಖಾಸಗಿ ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಾಹಣೆ ಮಾಡಿದ್ದಾರೆ. 2008ರಲ್ಲಿ ಆಕಾಶವಾಣಿಯಲ್ಲಿ ನಿರ್ವಾಹಕರಾಗಿ ಸೇವೆಗೆ ಮಾಡಿದ್ದಾರೆ. ಹವ್ಯಾಸಿ ಬರಹಗಾರರಾದ ಅವರು ರಾಜ್ಯದ ಇತರ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಶಸ್ತಿಗಳು: ಡಾ.ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ಫೇಲೋಶಿಪ್ ಕೃತಿಗಳು : ಉರಿವ ಬತ್ತಿಯ ಬೆಳಕಿನ ಧ್ಯಾನ, ಒಡಲಾಳ:ಮೀಸಲಾತಿ ...
READ MORE