‘ಮಿಡಿವ ಮನ’ ಜಿ.ಎನ್. ರಂಗನಾಥರಾವ್ ಅವರ ವಿಶಿಷ್ಯ ಸಂಯೋಜನೆಯ ಬರಹಗಳ ಸಂಗ್ರಹ. ಪತ್ರಿಕೋದ್ಯಮಿಯೊಬ್ಬ ನೀಡಬಹುದಾದ ಮಾಹಿತಿ, ವಿಮರ್ಶಕನೊಬ್ಬನ ವಿಶ್ಲೇಷಣೆ, ಚಿಂತಕನ ವಿಚಾರಧಾರೆ- ಇವು ಮೂರು ಅಂಶಗಳು ಹದವಾಗಿ ಬೆರೆತು ಬರಹಗಳು ಓದುಗರನ್ನು ಹಿಡಿದಿಡುತ್ತವೆ. ಇಲ್ಲಿರುವ ಬಹುತೇಕ ಬರಹಗಳು ವ್ಯಕ್ತಿಚಿತ್ರಣಗಳು ಎಂದು ಕರೆಯಬಹುದಾದ ಪ್ರಕಾರಕ್ಕೆ ಸೇರಿದವುಗಳು. ಈ ಬರಹದ ಕೇಂದ್ರಬಿಂದು ಸಾಹಿತ್ಯವಾಗಿದ್ದು, ಕೇಂದ್ರದ ಪರಿಧಿಯಲ್ಲೇ ಸೃಜನಶೀಲಗೊಳ್ಳುತ್ತಾ , ಸುತ್ತಲ ಪ್ರಪಂಚದ ಆಗುಹೋಗುಗಳನ್ನು ಗಮನಿಸುತ್ತಾ , ಅವುಗಳಿಗೆ ಸ್ಪಂದಿಸುತ್ತಾ ಹೋಗುತ್ತದೆ. ಆದರೆ ಅವು ವ್ಯಕ್ತಿ, ಬರಹಗಾರ ಹಾಗೂ ವ್ಯಕ್ತಿಯ ಸಂಬಂಧದ ಸುತ್ತ ಹೆಣೆದಿರುವ ಬರಹಗಳಲ್ಲ. ಆ ವ್ಯಕ್ತಿಗಳ ಸಾರ್ವಜನಿಕ ಕ್ಷೇತ್ರದ ಮುಖವನ್ನು ಅವರ ಬರಹ-ಚಿಂತನೆಗಳ ಜೊತೆ ಮುಖಾಮುಖಿಯಾಗಿಸಿ ಮಾಡಿದ ವಿಶ್ಲೇಷಣೆಗಳಿಗೆ ಇಲ್ಲಿ ಪ್ರಾಧಾನ್ಯ, ಸಕಾಲದ ಜೊತೆ ತ್ರಿಕಾಲಗಳನ್ನು ಜೋಡಿಸಿ ಇಲ್ಲಿನ ಬರಹಗಳು ಕೇವಲ ಇಂದಿನ ಸಂದರ್ಭಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಜಿ.ಎನ್.ಆರ್ ತಮ್ಮ ಬರಹಗಳಲ್ಲಿ ಅರ್ಥೈಸುತ್ತಾರೆ. ಈ ಕೃತಿ ರಚನೆಯ ಹಿಂದೆ ಜಿ.ಎನ್.ಆರ್ ಅವರ ಸುದೀರ್ಘ ಅಧ್ಯಯನ ಹಾಗೂ ಬರಹಗಳ ಬಗೆಗಿನ ನೈತಿಕ ಶ್ರದ್ಧೆ ಕೆಲಸ ಮಾಡಿದೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE