ಡಾ.ಎಂ.ಡಿ.ಒಕ್ಕುಂದ ಅವರ’ ’ಭಾರತ-ಧಾರ್ಮಿಕ ಹಿಂಸೆ ಹಾಗೂ ಸೌಹಾರ್ದತೆ ’ಕೃತಿ ನಮ್ಮ ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ಮತೀಯ ಹಿಂಸೆ ಮತ್ತು ಸೌಹಾರ್ಧತೆಗಳು ಹುಟ್ಟಿ ಬೆಳೆದ ಪರಿಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಚರಿತ್ರೆಯ ಸಾಮಗ್ರಿಯನ್ನು ವಸ್ತುನಿಷ್ಠವಾಗಿ ಬಳಸಿ ಕೊಂಡು ಮತೀಯ ಮೂಲಭೂತವಾದವನ್ನು ಬಿತ್ತುವ ಶಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ.
ಎಲ್ಲ ಕಾಲಕ್ಕೂ ಆಳುವ ವರ್ಗಗಳು ದುಡಿಯುವ ವರ್ಗಗಳ ಹೆಚ್ಚುವರಿ ಉತ್ಪಾದನಾ ಮೌಲ್ಯವನ್ನು ಕಬಳಿಸಲು ಹೂಡುವ ಹುನ್ನಾರಗಳು - ತಂತ್ರಗಳ ಒಂದು ಪ್ರಬಲ ಅಸ್ತ್ರವಾಗಿ ಮತೀಯ ಭಾವನೆಗಳನ್ನು ಕೆರಳಿಸಿ ದಿಕ್ಕು ತಪ್ಪಿಸಿ ಶೋಷಣೆ ಮುಂದುವರೆಸುತ್ತ ತಮ್ಮ ಯಜಮಾನಿಕೆಯನ್ನು ಮುಂದುವರೆಸಿಕೊಂಡು ಬರುತ್ತಿರುವುದನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.
ಆಧುನಿಕ ಕಾಲದಲ್ಲಿ ಚರಿತ್ರೆಯನ್ನು ವಿಕೃತಗೊಳಿಸಿ ಈ ಸಾಮ್ರಾಜ್ಯವಾದಿ-ಮತೀಯವಾದಿ ಲಾಭ ಹೊಂದುವ ಸ್ವಾರ್ಥಿಗಳು ಸೌಹಾರ್ಧತೆಗೆ ಭಂಗ ತಂದು ಮತೀಯ ಕಿಚ್ಚು ಹೆಚ್ಚಿಸುತ್ತಿರುವ ಕುರಿತೂ ಲೇಖಕರು ಈ ಕೃತಿಯಲ್ಲಿ ಗಮನ ಸೆಳೆಯುತ್ತಾರೆ.
'ಧರ್ಮ' ಮತ್ತು 'ಮತ' ಪರಿಕಲ್ಪನೆಗಳನ್ನು ಪರ್ಯಾಯಗಳಂತೆ ಇಲ್ಲಿ ಬಳಸಿಕೊಳ್ಳಲಾಗಿದೆ ಎನ್ನಬಹುದು. ಮಹಾತ್ಮ ಗಾಂಧೀಜಿ ಧರ್ಮದ ಪ್ರತಿಪಾದಕರಾಗಿದ್ದರು. ಸಾವರ್ಕರ್, ಗೋಳ್ವಾಲ್ಕರ್ ಮತದ ಪ್ರತಿಪಾದಕರಾಗಿದ್ದರು. ಈ ಹಿನ್ನೆಲೆಯಲ್ಲಿ ಧರ್ಮ-ಮತ, ಸಹನೆ, ಅಸಹನೆ, ಅಹಿಂಸೆ-ಹಿಂಸೆಗಳನ್ನು ಅವಲೋಕಿಸುತ್ತಾ ಒಟ್ಟಾರೆ ಒಕ್ಕುಂದ ಅವರು ಒಂದು ಆರೋಗ್ಯಕರ ರಾಷ್ಟ್ರವನ್ನೂ, ಬಹು ಸಾಮರಸ್ಯಗಳ ಭಾರತೀಯ ಸಮಾಜವನ್ನೂ ಕಟ್ಟಬಯಸುವ ಕ್ರಿಯಾಶೀಲ ಲೇಖಕರಾಗಿ, ಸೃಜನಶೀಲ ಬರಹದಲ್ಲಿ ಓದುಗರಿಗೆ ಈ ಕೃತಿ ನೀಡಿದ್ದಾರೆ.
ಹಿಂಸೆಯ ಮೀಮಾಂಸೆಯ ಅನಾವರಣ
ರಾಷ್ಟ', 'ದೇಶಪ್ರೇಮ', 'ಗೋವು' ಮುಂತಾದ ಭಾವವೇಶದ ಮಾತುಗಳು ನಾಗರೀಕ ಸಮಾಜದ ಸ್ವಾಸ್ಥ್ಯವನ್ನೇ ಹಾಗೂ ಸೌಹಾರ್ದತೆ ಕೆಡಿಸುತ್ತಿರುವ ಈ ಕಾಲಘಟ್ಟದಲ್ಲಿ ಪ್ರಾಧ್ಯಾಪಕ ಮತ್ತು ಪ್ರಗತಿಪರ ಹೋರಾಟಗಾರರಾದ ಎಂ.ಡಿ. ಒಕ್ಕಂದ ಅವರ 'ಧಾರ್ಮಿಕ ಹಿಂಸೆ ಮತ್ತು ಸೌಹಾರ್ದತೆ' ಪುಸ್ತಕ ಪ್ರಕಟವಾಗಿದೆ. ಈ ಹೊತ್ತಿಗೆಯ ಶೀರ್ಷಿಕೆಯೇ ಸೂಚಿಸುವಂತೆ ಇದು ಧರ್ಮ ಮತ್ತು ರಾಜಕಾರಣದ ಅಪವಿತ್ರ ನೆಲೆಗಳು ಮತ್ತು ಇದರಿಂದ ಸ್ವಾಸ್ಥ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ವಿಶ್ಲೇಶಿಸುತ್ತದೆ. ಎಲ್ಲಾ ಬಗೆಯ ಹಿಂಸೆಗಳಿಗೂ ಧಾರ್ಮಿಕ ಕೆಸರಾಟಕ್ಕೂ ಇರುವ ಸಂಬಂಧ ಮತ್ತು ಇತಿಹಾಸದ ವ್ಯವಸ್ಥಿತ ತಿರುಚುವಿಕೆಯ ಐಡಿಯಾಲಜಿ ಕುರಿತು ಲೇಖಕರು ಇಲ್ಲಿ ಬೆಳಕು ಚೆಲ್ಲಿದ್ದಾರೆ. ನಾಗರೀಕತೆಯ ಬೆಳವಣಿಗೆಯ ಚಾರಿತ್ರಿಕ ಘಟ್ಟಗಳನ್ನು ವಿಶ್ಲೇಷಸುತ್ತಾ, ಸೌಹಾರ್ದತೆಯ ನೆಲೆಗಳನ್ನು ತನ್ನ ಮೌಲ್ಯವಾಗಿ ಸ್ವೀಕರಿಸಿದ ಅನೇಕ ಸಮುದಾಯಗಳು ಈ ಸಿದ್ಧಮಾದರಿ ತಿರುಚುವಿಕೆಯ ರಾಜಕಾರಣದಿಂದಾಗಿ ತಮ್ಮ ಶಾಂತಿಯ ನೆಲೆಗಳನ್ನು ಕಳೆದುಕೊಳ್ಳುತ್ತಿರುವುದನ್ನು ಎಂ.ಡಿ. ಒಕ್ಕುಂದ ಇಲ್ಲಿ ದಾಖಲಿಸಿದ್ದಾರೆ. ಮುಖ್ಯವಾಗಿ ಮುಸ್ಲಿಂ ರಾಜರು ಮತ್ತು ಅವರ ಆಡಳಿತಾವಧಿಯನ್ನು ಕೇವಲ ಮತೀಯ ದೃಷ್ಟಿಕೋನದಿಂದ ಮಾತ್ರ ನೋಡುತ್ತಿರುವ ಹಿಂದಿರುವ ಮನಃಸ್ಥಿತಿಯನ್ನು ಲೇಖಕರು ನಿರಾಕರಿಸಿ ಅದು ಪ್ರಭುತ್ವ ಮತ್ತು ವೈದಿಕಶಾದಿ ಪರಂಪರೆಯ ಹುನ್ನಾರ ಎಂದು ಹೇಳುತ್ತಾರೆ. ಮುಂದುವರೆದು, ಸಮಕಾಲೀನ ಕಾಲಘಟ್ಟದಲ್ಲಿ ಬಲಪಂಥೀಯ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಕೋಮುವಾದಿ ಮೀಮಾಂಸೆಯನ್ನು ವ್ಯವಸ್ಥಿತವಾಗಿ ಮುನ್ನಲೆಗೆ ತಂದಿರುವ ಹಿಂದಿರುವ ನೈಜ ರಾಜಕೀಯ ಕಾರಣಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗೆಯ ಚಾರಿತ್ರಿಕ ತಿರುಚುವಿಕೆಗೆ ಇರುವ ರಾಜಕೀಯ ಮತ್ತು ಧಾರ್ಮಿಕ ಆಯಾಮಗಳ ವಿಶ್ಲೇಷಣೆ ಈ ಪುಸ್ತಕದ ಒಂದು ಮುಖ್ಯ ಆಶಯವಾಗಿದೆ. ಅಂದರೆ, ಈ ಪಠ್ಯವು ಹಿಂಸೆಯ ಮೀಮಾಂಸೆಯನ್ನು ಅನಾವರಣಗೊಳಿಸುವ ಪ್ರಯತ್ನವಾಗಿದೆ ಎಂದೂ ನಾವು ತಿಳಿಯಬಹುದು. ಹಿಂದೂ-ಮುಸ್ಲಿಂ ಸಮುದಾಯಗಳಿಗೆ ಇರುವ ಮತೀಯ ದ್ವೇಷ, ಅನುಮಾನ ಮತ್ತು ಆಗುತ್ತಿರುವ ಗಲಭೆಗೆ ಚರಿತ್ರೆಯನ್ನು 'ಸ್ವ-ಅನ್ಯ' ಎಂಬ ಕೃತಕ ವಿಭಜನೆಯಲ್ಲಿ ನೋಡುತಿರುವುದು ಕಾರಣ ಎಂದು ವಾದಿಸುತ್ತಾ, ಕೋಮುವಾದಿ ಇತಿಹಾಸವು ಟಿಪ್ಪು ಮುಂತಾದ ಮುಸ್ಲಿಂ ದೊರೆಗಳನ್ನು ರಾಕ್ಷಸರಂತೆ ಚಿತ್ರಿಸುತ್ತಿರುವುದನ್ನು ಮತ್ತು ಹಿಂದೂ ಸಾಮಾಜದ (ಉದಾ: ವಿಜಯನಗರ) ಕಾಲಘಟ್ಟವನ್ನು ವಿಜೃಂಭಿಸುತ್ತಿರುವ ನೋಟ ಕ್ರಮ ಧಾರ್ಮಿಕ ಹಿಂಸೆಗೆ ಕಾರಣವಾಗಿದೆ ಎಂದು ಹೇಳುತ್ತಾರೆ. ಒಂದು ಬಗೆಯ ಕಲ್ಪಿತ ಆತಂಕವನ್ನು - ಸೃಷ್ಟಿಸಿ ಜನ ಸಮುದಾಯಗಳ ನಡುವೆ ಇರುವ ಸೌಹಾರ್ದವನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಲಪಂಥೀಯ ಸಂಘಟನೆಗಳ ಕುರಿತು ತೀವ್ರ ಆಕ್ರೋಶ ಇಲ್ಲಿ ವ್ಯಕ್ತವಾಗಿದೆ. ಗತಕಾಲದ ವಿಜೃಂಭಣೆಯ ಮತ್ತು ಶಿವಾಜಿ ರೀತಿಯ ಐಕಾನ್‌ಗಳನ್ನು ಆರಾಧಿಸುವುದಕ್ಕೆ ಇದೇ ಬಗೆಯ ಕೃತಕ ಕೋಮುವಾದಿ ದೃಷ್ಟಿಕೋನ ಇರುವುದನ್ನು ಲೇಖಕರು ಇಲ್ಲಿ ಗುರುತಿಸುತ್ತಾರೆ. ಇದು ಲೇಖಕರ ಪಿಎಚ್.ಡಿ. ಪ್ರಬಂಧವೂ ಆಗಿರುವುದರಿಂದ ರಾಷ್ಟ್ರ, ಹಿಂಸೆ, ಧರ್ಮ ಮುಂತಾದ ಪಾರಿಭಾಷಿಕ ಪದಗಳಿಗೆ ಇರುವ ಪ್ರಾಥಮಿಕ ಅರ್ಥವನ್ನು ಸಹ ಇಲ್ಲಿ ನೀಡಲಾಗಿದೆ.
ನಿಜವಾಗಿಯೂ ನೋಡುವುದಾದರೆ, ಈ ಪುಸ್ತಕದ ಕೊನೆಯ ಭಾಗದಲ್ಲಿರುವ ಕನ್ನಡ ಕಾವ್ಯ ಪರಂಪರೆಯನ್ನು ಧಾರ್ಮಿಕ ಸಿದ್ಧಮಾದರಿ ಚೌಕಟ್ಟು ಮತ್ತು ಸೌಹಾರ್ದದ ನೆಲೆಯಿಂದ ಮಾಡಿರುವ ವಿಶ್ಲೇಷಣೆ ಬಹಳ ಮುಖ್ಯವಾದ ಭಾಗ. ಆದರೆ ಈ ವಿಶ್ಲೇಷಣೆಗೆ ಚಿಕ್ಕಜಾಗವನ್ನು ಮೀಸಲಾಗಿಟ್ಟಿರುವುದು ದೊಡ್ಡ ಕೊರತೆಯಾಗಿದೆ. ಮುಖ್ಯವಾಗಿ, ಕುವೆಂಪು ಮತ್ತು ಅಡಿಗರ ಕಾವ್ಯವನ್ನು ತೀವ್ರ ಪರೀಕ್ಷೆಗೆ ಒಡ್ಡಿರುವ ಲೇಖಕರು ಮಹಾ ಮಾನವತಾವಾದಿಯಾದ ಕುವೆಂಪು ಅವರ ಕಾವ್ಯ ಕೂಡ 'ಮುಸ್ಲಿಂ ಸಮುದಾಯವನ್ನು ಬಹಳ ಸೀಮಿತ ಅರ್ಥದಲ್ಲಿ ಸ್ವೀಕರಿಸಿದೆ' ಎಂದು ಅಭಿಪ್ರಾಯ ಪಡುತ್ತಾರೆ. ಈ ಬಗೆಯ ಸೀಮಿತ ಮತೀಯ ರಾಷ್ಪವಾದೀ ನೆಲೆಗೆ ಕುವೆಂಪು ಅವರ ದೃಷ್ಟಿಕೋನದ ಜೊತೆಗೆ ಆ ಕಾಲಘಟ್ಟವನ್ನು ಸಹ ವಿಶ್ಲೇಷಿಸಬೇಕೆಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ. (ಪು. 152) ಮುಸ್ಲಿಂಮರ ರಾಕ್ಷಸೀಕರಣ ಕುವೆಂಪು ಅವರ 'ಹಂಪಿಯ ಭೀಮ' ರೀತಿಯ ಕಾವ್ಯದಲ್ಲೂ ಪ್ರಕಟವಾಗಿದೆ ಎಂದು ವಾದಿಸಿ, ಮಹಾಕಾವ್ಯಗಳ ಕುವೆಂಪು ಬೇರೆ ಮತ್ತು ಮತೀಯವಾದೀ ಚರಿತ್ರೆಯ ಭಾಗವಾಗಿ ಬಂದಿರುವ ಹುಸಿ ರೋಷವನ್ನು ವ್ಯಕ್ತಪಡಿಸುವ ಕುವೆಂಪು ನೆಲೆ ಬೇರೆ ಎಂದು ವಿಶ್ಲೇಷಿಸುತ್ತಾರೆ.ಕವಿಯೊಬ್ಬನ ರೂಪಕ ಶಕ್ತಿಗೂ ಹಾಗೂ ಆತನ ರಾಜಕೀಯ ನಿಲುವುಗಳಿಗೂ ಇರುವ ವೈರುಧ್ಯವನ್ನು ಇಲ್ಲಿ ಗುರುತಿಸಲಾಗಿದೆ.
ಅಂತೆಯೇ ಗೋಪಾಲಕೃಷ್ಣ ಅಡಿಗರ ಬಲಪಂಥೀಯ ನಿಲುವನ್ನು ಪ್ರಶ್ನಿಸಿ, ಅಡಿಗರ ಕವಿತೆಗಿರುವ ಈ ಆಯಾಮಕ್ಕೆ ಕನ್ನಡ ಸಾಂಸ್ಕೃತಿಕ ಲೋಕ ಏಕೆ 'ಮೌನ' ಪ್ರತಿಕ್ರಿಯೆ ನೀಡಿದೆ ಎಂದು ಪ್ರಶ್ನಿಸಿದ್ದಾರೆ. ಅಡಿಗರ ಬಲಪಂಥೀಯತೆಯ ಒಲವಿಗೆ ಕಾರಣಗಳನ್ನು ಹುಡುಕುತ್ತಾ 'ಪ್ರತಿ ತಿಂಗಳೂ ಅಡಿಗರಿಗೆ ಕೇಶವ ಕೃಪಾದಿಂದ ಸಂದಾಯವಾದ ಆರ್ಥಿಕ ಸದಾಯವೂ' ಇರಬಹುದೆಂಬ ಲಂಕೇಶರ ವಾದವನ್ನು ಮುಂದಿಡುವುದು ಕುತೂಹಲಕಾರಿಯಾಗಿದೆ. ಆದರೆ ಅಡಿಗರಂತಹ ಒಬ್ಬ ಕವಿ 'ಆರ್ಥಿಕ ಸಹಾಯ'ಕ್ಕಾಗಿ ಕಾವ್ಯದಲ್ಲಿ ಕೃತಜ್ಞತೆಯನ್ನು ಸಲ್ಲಿಸುವ ಒತ್ತಡಕ್ಕೆ ಒಳಗಾಗುತ್ತಾರೆಯೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಅಡಿಗರ ಸೈನಿಕ ಭಾಷೆ, ಸಿದ್ದಾಂತದ ಸರಳೀಕರಣ ಮುಂತಾದವುಗಳನ್ನು ಪ್ರಸ್ತಾಪಿಸುತ್ತಾ, ಇಡೀ ಕನ್ನಡ ಕಾವ್ಯ ಪರಂಪರೆಯನ್ನು ಪುನರ್ ವ್ಯಾಖ್ಯಾನಕ್ಕೆ ಒತ್ತಾಯಿಸುವ ಲೇಖಕರ ನಿಲುವನ್ನು ನಾವು ಇಲ್ಲಿ ಗಮನಿಸಬಹುದು. ಏನೇ ಇರಲಿ, ಅಡಿಗರ ಕಾವ್ಯಕ್ಕಾಗಲಿ ಅಥವಾ ಕುವೆಂಪು ಕಾವ್ಯಕ್ಕಾಗಲಿ ಇನ್ನೂ ಹಲವು ಬಗೆಯ ವಿಶಾಲ ಹರವು ಇರುವದನ್ನು ನಾವು ಮರೆಯಕೂಡದು. ಒಟ್ಟಾರೆಯಾಗಿ, ಪುಸ್ತಕದ ಕೊನೆಯ ಭಾಗ ಇಡೀ ಪುಸ್ತಕದ ಮಹತ್ವದ ಮತ್ತು ಇನ್ನೂ ಹೆಚ್ಚಿನ ವಿಶ್ಲೇಷಣೆಯನ್ನು ಬೇಡುವ ಭಾಗವಾಗಿದೆ.
-ಟಿ. ಅವಿನಾಶ್
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಸೆಪ್ಟಂಬರ್ 2018)
©2024 Book Brahma Private Limited.