ಲೇಖಕ ಬಸವರಾಜ ಕೋಡಗುಂಟಿ ಅವರ ಲೇಖನಗಳ ಸಂಕಲನ-ತಾಯ್ಮಾತಿನ ಶಿಕ್ಶಣ. ಪ್ರಾಥಮಿಕ ಶಿಕ್ಷಣಕ್ಕೆ ತಾಯ್ಮಾತಿನ ಶಿಕ್ಷಣ ಎಂಬುದು ಲೇಖಕರ ಅಭಿಪ್ರಾಯ. ಮಕ್ಕಳಲ್ಲಿ ಸೃಜನಶೀಲ ವಿಕಾಸಕ್ಕೆ ನೆರವಾಗುವ ತಾಯ್ಮಾತಿನ ಶಿಕ್ಷಣವು ಅಗತ್ಯವಾಗಿ ನೀಡಬೇಕು. ದೇಸಿ ಹಾಗೂ ದೇಶೀಯವಾಗಿಯೂ ಉದ್ಯೋಗ ಸೌಲಭ್ಯಕ್ಕೂ ಅನುಕೂಲವಾಗುತ್ತದೆ. ದೇಶ-ಪ್ರಾದೇಶಿಕವಾಗಿಯೂ ಅಭಿಮಾನ ಬೆಳೆಯುತ್ತದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣವೆಂದರೆ, ಇಂಗ್ಲಿಷ್ ಬರದವರು ಶಿಕ್ಷಕರಾಗಿ ಇಂಗ್ಲಿಷ್ ಪಾಠವನ್ನು ಮಕ್ಕಳಿಗೆ ಇಂಗ್ಲಿಷಿನಲ್ಲಿ ಕಲಿಸುವವರು ಎಂದೇ ಲೇಖಕರು ವ್ಯಾಖ್ಯಾನಿಸುತ್ತಾರೆ. ಅದಕ್ಕಾಗಿ ಪ್ರಾಥಮಿಕ ಹಂತದಲ್ಲಿ ತಾಯ್ಮಾತಿನ ಶಿಕ್ಷಣವೇ ಉತ್ತಮ ಹಾಗೂ ಪರಿಣಾಮಕಾರಿ. ತಿಳಿಯದ ಮತ್ತು ನಮ್ಮದಲ್ಲದ ಭಾಷೆಯಲ್ಲಿ ಕಲಿಯುವುದು, ಅದಕ್ಕಾಗಿ ಪರೀಕ್ಷೆ ಬರೆಯುವುದು, ಇಂತಹ ವ್ಯವಸ್ಥೆಯಲ್ಲಿ ನಮ್ಮ ಅರಿವನ್ನು ನಮ್ಮದಲ್ಲದ ಭಾಷೆಗಾಗಿ ಒತ್ತೆ ಇಡುವಂತಾಗಿದೆ. ಇದು ಎಂಥ ಸಮಾನತೆ ಎಂದು ಪ್ರಶ್ನಿಸುತ್ತಾರೆ. ಮಾತ್ರವಲ್ಲ; ಸತ್ಯ ಶಿಕ್ಷಾ ಅಭಿಯಾನ ಸತ್ವ ಭಾಷಾ ಅಭಿಯಾನವಾಗಬೇಕು ಎಂದೂ ಆಶಿಸುತ್ತಾರೆ. ಇಂತಹ ಚಿಂತನೆಗಳ ಸಂಗ್ರಹ ರೂಪ ಈ ಕೃತಿ.
ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು. ...
READ MORE