'ಸಂವಿಧಾನದ ನೆರಳಲ್ಲಿ' (ಸಾಮಾಜಿಕ-ರಾಜಕೀಯ ಬರಹಗಳು) ರಮೇಶ್ ಎಚ್.ಕೆ. ಅವರು ನಿರೂಪಿಸಿರುವ ಕೃತಿ. ಈ ಕೃತಿಗೆ ನಟರಾಜ್ ಹುಳಿಯಾರ್ ಅವರ ದೀರ್ಘ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ 'ಈ ಪುಸ್ತಕಕ್ಕೆ ಮುನ್ನುಡಿಯ ಮಾತುಗಳನ್ನು ಬರೆಯುವಾಗ, ಸುಮಾರು ಇಪ್ಪತ್ತೆಂಟು ವರ್ಷಗಳ ಕೆಳಗೆ ತರುಣ ಮಂತ್ರಿಯಾಗಿದ್ದ ಡಾ. ಎಚ್. ಸಿ. ಮಹದೇವಪ್ಪನವರ ಒಂದು ಬೌದ್ಧಿಕ ಕಾಳಜಿಯಿಂದ ಕರ್ನಾಟಕಕ್ಕೆ ದಕ್ಕಿದ ಒಳ್ಳೆಯ ಫಲಗಳು ನೆನಪಾದವು. ಆ ಕಾಲದಲ್ಲಿ ಕಾಳೇಗೌಡ ನಾಗವಾರರ ಸಲಹೆಯ ಮೇರೆಗೆ ಎಚ್.ಸಿ. ಮಹದೇವಪ್ಪನವರು ಅಂದು ಉಪ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಜೊತೆಗೂಡಿ ರಾಮಮನೋಹರ ಲೋಹಿಯಾ ಸಂಪುಟಗಳನ್ನು ಕನ್ನಡಕ್ಕೆ ತರುವ ಸಂಪಾದಕೀಯ ಸಮಿತಿಯೊಂದನ್ನು ನೇಮಿಸಲು ಕಾರಣರಾದರು. ಆ ಸಮಿತಿಯಲ್ಲಿ ಸಂಪಾದಕನಾಗಿ ಕೆಲಸ ಮಾಡಿದ್ದರಿಂದ ಲೋಹಿಯಾ ಸಮಸ್ತ ಬರಹಗಳ ಅಧ್ಯಯನದ ಅಪೂರ್ವ ಅವಕಾಶ ನನಗೆ ಸಿಕ್ಕಿತು. ಮುಂದೆ ಈ ಚಿಂತನೆಗಳ ಪ್ರೇರಣೆ, ಪ್ರಭಾವಗಳು ಸಾವಿರಾರು ಕನ್ನಡ ಚಿಂತಕ, ಚಿಂತಕಿಯರ ಮೇಲೆ ಆಗಿ, ಈ ಚಿಂತನೆಗಳು ಅವರ ಪ್ರಜ್ಞೆಯನ್ನು ತಿದ್ದಿವೆ. ಈ ಬೆಳವಣಿಗೆ ಮಹದೇವಪ್ಪನವರಲ್ಲೂ ಆಗಿದೆ. ಲೋಹಿಯಾ ಚಿಂತನೆಗಳ ಜೊತೆಗೆ ಅಂಬೇಡ್ಕರ್ ಚಿಂತನೆ ಹಾಗೂ ಜಾತ್ಯತೀತ ನೋಟಗಳೂ ಸೇರಿ ಮಹದೇವಪ್ಪನವರ ಕಾಲಕಾಲದ ಚಿಂತನೆ, ಪ್ರತಿಕ್ರಿಯೆ, ಸ್ಪಂದನಗಳೂ ಹುಟ್ಟಿವೆ. ಇವೆಲ್ಲದರ ಎಳೆಗಳು ಈ ಪುಸ್ತಕದಲ್ಲಿ ಗೆಳೆಯ ರಮೇಶ್ ಒಗ್ಗೂಡಿಸಿರುವ ವಿಶ್ಲೇಷಣೆಗಳಲ್ಲಿ ಅಲ್ಲಲ್ಲಿ ಕಾಣುತ್ತವೆ ಎಂದಿದ್ದಾರೆ.
ಹಾಗೇ ರಾಜಕಾರಣವನ್ನು ವೃತ್ತಿಯಾಗಿ ಸ್ವೀಕರಿಸಿರುವ ಡಾ. ಮಹದೇವಪ್ಪನವರು ಅಧಿಕಾರವಲಯಗಳ ಒಳಗೂ ಹೊರಗೂ ಇದ್ದಾಗಲೂ ದಲಿತ ಚಳುವಳಿ, ಜಾಗತೀಕರಣ, ಜಾತೀಯತೆ, ಕೋಮುದ್ವೇಷ ಮುಂತಾದ ವಿಷಯಗಳ ಬಗ್ಗೆ ಸ್ಪಷ್ಟವಾಗಿ, ಖಚಿತ ಚೌಕಟ್ಟುಗಳಲ್ಲಿ ಮಾತಾಡುತ್ತಾ ಬಂದಿರುವುದನ್ನು ಹಲವು ವೇದಿಕೆಗಳಲ್ಲಿ ಕೇಳಿಸಿಕೊಂಡಿದ್ದೇನೆ. ಈ ಎಲ್ಲ ವಲಯಗಳ ಬಗ್ಗೆ ಅವರು ತಮ್ಮ ನಿತ್ಯದ ಓದಿನ ಮೂಲಕ ಅರಿತಿದ್ದನ್ನು ಹಾಗೂ ತಮ್ಮ ಸುತ್ತಣ ವಾಸ್ತವಗಳ ಮೂಲಕ ಹುಟ್ಟಿದ ಅರಿವನ್ನು ಸರಳ ಭಾಷೆಯಲ್ಲಿ ಜನರಿಗೆ ಮುಟ್ಟಿಸುತ್ತಾ ಬಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು ಅಧಿಕಾರವಲಯದ ಹೊರಗಿದ್ದಾಗ, ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ, ಒಟ್ಟು ವಿರೋಧ ಪಕ್ಷಗಳ ರಾಜಕಾರಣದ ಥಿಂಕ್ ಟ್ಯಾಂಕ್ ಆಗಿ ಕೂಡ ತಮ್ಮ ಬೌದ್ಧಿಕ ಕೆಲಸ ಮುಂದುವರಿಸಿದ್ದಾರೆ. ಇವೆಲ್ಲದರ ಫಲವಾಗಿ ಈ ಪುಸ್ತಕದ ತಕ್ಷಣದ ಸಮಕಾಲೀನ ಚಿಂತನೆಗಳು ನಮ್ಮೆದುರಿಗಿವೆ. ಕಳೆದ ಐದು ವರ್ಷಗಳಲ್ಲಿ ಇಂಡಿಯಾ, ಹಾಗೂ ಮುಖ್ಯವಾಗಿ ಕರ್ನಾಟಕ, ಎದುರಾದ ನೂರಾರು ರಾಜಕೀಯ, ಆರ್ಥಿಕ, ಸಾಮಾಜಿಕ ಸವಾಲುಗಳ ಬಗ್ಗೆ ಮಹದೇವಪ್ಪನವರು ಮಾಡಿರುವ ಇಲ್ಲಿನ ನೂರಕ್ಕೂ ಹೆಚ್ಚು ವಿಶ್ಲೇಷಣೆಗಳಲ್ಲಿ ಅವರ ಖಡಕ್ ಟೀಕೆಗಳಿವೆ; ಜೊತೆಗೆ, ಈ ಹಿಂದೆ ವಿವಿಧ ಇಲಾಖೆಗಳ ಸಚಿವರಾಗಿ ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರ ನಿತ್ಯದ ಪ್ರತಿಕ್ರಿಯೆಗಳಲ್ಲಿ ಟೀಕೆ ಮಾತ್ರವಲ್ಲದೆ, ರಚನಾತ್ಮಕ ಸಲಹೆಗಳೂ ಇವೆ ಎಂದಿದ್ದಾರೆ.
ಎಚ್.ಕೆ. ರಮೇಶ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಸಾಹಿತ್ಯ, ರಂಗಭೂಮಿ, ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಬರವಣಿಗೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕಥೆ, ಕವನ, ಅನುವಾದ, ನಿರೂಪಣೆ, ವೈಚಾರಿಕ ಬರಹ, ರಾಜಕೀಯ ವಿಶ್ಲೇಷಣೆ, ನಾಟಕ, ಸಿನಿಮಾ ವಿಮರ್ಶೆ ಇವರ ಆಸಕ್ತಿಯ ಕ್ಷೇತ್ರವಾಗಿದ್ದು ಇವರ ಒಂದು ಕವನ ಸಂಕಲನ ಪ್ರಕಟವಾಗಿದೆ. ಜನಪರವಾದ ಸೈದ್ಧಾಂತಿಕ ನಿಲುವುಗಳಲ್ಲಿ ನಂಬಿಕೆ ಇಟ್ಟಿರುವ ಇವರು ಸೈದ್ಧಾಂತಿಕ ನಾಯಕರೊಂದಿಗೆ ರಾಜಕೀಯ ವಲಯದಲ್ಲಿ ತಮ್ಮ ಕೆಲಸಗಳನ್ನು ಮುಂದುವರೆಸಿದ್ದಾರೆ. ಎಚ್.ಸಿ. ಮಹದೇವಪ್ಪ ಅವರ ಸಮಕಾಲೀನ ರಾಜಕೀಯ ಚಿಂತನೆಗಳನ್ನು 'ಸಂವಿಧಾನದ ನೆರಳಿನಲ್ಲಿ' ಎಂಬ ಕೃತಿಯಲ್ಲಿ ನಿರೂಪಿಸಿದ್ದಾರೆ. ...
READ MORE