‘ಬೌದ್ಧ ಮತ ಮತ್ತು ಡಾ.ಬಿ.ಆರ್.ಅಂಬೇಡ್ಕರ್’ ಲೇಖಕ ಹೆಚ್. ವೆಂಕಟೇಶ್ ಅವರ ವೈಚಾರಿಕ ಕೃತಿ. ಈ ಕೃತಿಯ ಕುರಿತು ಬರೆಯುತ್ತಾ ‘ಮಾನವತಾವಾದಿ, ರಾಜ್ಯಾಂಗ ರಚನಕಾರ, ದಲಿತ ಜನಾಂಗದ ಹಿತಕ್ಕಾಗಿ ಹೋರಾಡಿದ ಏಕೈಕ ಕ್ರಾಂತಿಕಾರಿ ರಾಷ್ಟ್ರನಾಯಕರಾದ ಡಾ.ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ತಿಳಿದಿರುವ ದಲಿತ ಜನರೇ ಅತ್ಯಲ್ಪ ಎಂದರೆ ಆಶ್ಚರ್ಯವಾಗಬಹುದು, ಆದರೆ ಅದು ಸತ್ಯ, ಅದರಲ್ಲೂ ವಿದ್ಯಾವಂತ ದಲಿತರು ರಾಜ್ಯಾಂಗದ ರೀತ್ಯ ಏನೆಲ್ಲಾ ಸವಲತ್ತುಗಳನ್ನು ಪಡೆಯಬೇಕೋ ಅವೆಲ್ಲವನ್ನೂ ಪಡೆದರೂ, ಅಂಥಹ ವಿದ್ಯಾವಂತ ದಲಿತರು ಈ ಮಹಾಪುರುಷನ ಬಗ್ಗೆ ಉದಾಸೀನತೆ ತೋರುತ್ತಿರುವುದು ನಿಜಕ್ಕೂ ಖಂಡನಾರ್ಹ.
ಇನ್ನು ಅವರ ತತ್ವ, ಆದರ್ಶ, ಜೀವನ ಮತ್ತು ಸಾಧನೆಗಳ ಬಗ್ಗೆ ತಿಳಿಯುವ ಅಥವಾ ಹಳ್ಳಿಯಲ್ಲಿರುವ ಅವಿದ್ಯಾವಂತ ದಲಿತ ಜನಕ್ಕೆ ಅವರ ಬದುಕು ಮತ್ತು ಹೋರಾಟದ ಬಗ್ಗೆಯಾದರೂ ತಿಳುವಳಿಕೆ ನೀಡದಿರುವುದು ಶೋಚನೀಯ. ದಲಿತ ವಿದ್ಯಾವಂತ ಜನರ ಉದಾಸೀನತೆಯನ್ನು ನನ್ನ ಭಾರತೀಯ ಅಸ್ಪೃಶ್ಯರಿಗೆ ಡಾ. ಅಂಬೇಡ್ಕರ್‌ರವರ ಕೊಡುಗೆ” ಎಂಬ ಕೃತಿಯಲ್ಲಿ ಸ್ಪಷ್ಟಿಕರಿಸಿದ್ದೇನೆ ಎನ್ನುತ್ತಾರೆ ಲೇಖಕ ಹೆಚ್. ವೆಂಕಟೇಶ್. ಇಂದಿನ ಯುವ ಪೀಳಿಗೆಯು ಕ್ರಾಂತಿಮನೋಭಾವ ಹೊಂದಿದ್ದು ಅವರಾದರೂ ಈ ಮಹಾಪುರುಷನ ಬಗ್ಗೆ ತಿಳಿದು, ತಿಳಿಯದ ದಲಿತ ಜನಕ್ಕೆ ತಿಳುವಳಿಕೆ ನೀಡುತ್ತಾರೆಂಬ ಮಹದಾಸೆಯಿಂದ ಡಾ. ಬಿ. ಆರ್. ಅಂಬೇಡ್ಕರ್‌ರವರ ಜೀವನ ಮತ್ತು ಸಾಧನೆಗಳು ತತ್ವ ಮತ್ತು ಆದರ್ಶಗಳ ಬಗ್ಗೆ ಕೃತಿಗಳನ್ನು ಬರೆಯಬೇಕೆಂಬ ಹಂಬಲದಿಂದ ಲೇಖಕರು ಈ ಕೃತಿಯನ್ನು ಪ್ರಕಟಿಸಿದ್ದಾರೆ.