‘ಹಿಂದತ್ವ ರಾಜಕಾರಣ ಅಂದು ಇಂದು ಮುಂದು’ ಕೃತಿಯು ಬಿ. ಶ್ರೀಪಾದ ಅವರ ಆಕರಗ್ರಂಥ. ಕೃತಿಗೆ ಬೆನ್ನುಡಿ ಬರೆದಿರುವ ದಿನೇಶ್ ಅಮೀನ್ ಮಟ್ಟು ಅವರು, ‘ಇತಿಹಾಸದುದ್ದಕ್ಕೂ ವಿಕೃತಿಗೆ ಬಲಿಯಾಗುತ್ತಾ ಬಂದ ನಮ್ಮ ಧರ್ಮ ಸಂಸ್ಕೃತಿ , ರಾಜಕೀಯಗಳೆಲ್ಲ ಮೇಲ್ನೋಟಕ್ಕೆ ಕಾಣುವಷ್ಟು ಸತ್ಯ, ಸರಳ, ಸುಂದರವಾಗಿಲ್ಲ. ಅಧ್ಯಯನ ಮತ್ತು ಸ್ಪಷ್ಟ ತಾತ್ವಿಕ ಜ್ಞಾನ ಇಲ್ಲದ ಯಾರಿಗೂ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಉದಾಹರಣೆಗೆ ಧರ್ಮ ಎನ್ನುವುದು ಯಾವುದು? ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ನರೇಂದ್ರ ಮೋದಿ ಇಲ್ಲವೇ ಭಾಗವತ್ ಸಾಂಸ್ಕೃತಿಕ ರಾಜಕಾರಣದ ಮೂಲಕ ಹೇಳುತ್ತಿರುವುದುದೇ?. ಇದನ್ನು ಪಕ್ಷ ಮತ್ತು ಪರಿವಾರದ ನಾಯಕರು ಜಂಟಿ ಸಾರಥಿಗಳಾಗಿ ಮುನ್ನಡೆಸುತ್ತಿದ್ದಾರೆ. ದೇವರು, ಧರ್ಮ, ಹಬ್ಬ, ಹಾಡು, ನೃತ್ಯ, ಯೋಗ, ಕಲೆ, ಸಂಗೀತ, ಇತಿಹಾಸ, ಇತಿಹಾಸ ಪುರುಷರು, ಸಮಾಜ ಸುಧಾಕರು ಹೀಗೆ ಎಲ್ಲವೂ ಎಲ್ಲರೂ ಈ ಸಾಂಸ್ಕೃತಿಕ ರಾಜಕಾರಣದ ಹತಾರುಗಳಾಗುತ್ತಿದ್ದಾರೆ. ಕೋಮುವಾದ ಎನ್ನುವುದು ಮೂಲತಃ ಮನುಷ್ಯ ವಿರೋಧಿ, ಅಷ್ಟು ಮಾತ್ರವಲ್ಲ ವರ್ಣಾಶ್ರಮ ವ್ಯವಸ್ಥೆಯ ಕೆಳಪಾದ ದಲ್ಲಿರುವ ದಲಿತರು ಮತ್ತು ಹಿಂದುಳಿದ ಜಾತಿಗಳ ಕೋಮುವಾದ ಜೀವವಿರೋಧಿ. ಹೀಗಿದ್ದರೂ ಧರ್ಮದ ಬಾಲಬುಡುಕರು ಹೆಸರಲ್ಲಿ ಶೋಷಣೆಗೀಡಾದವರನ್ನೇ ಕೋಮುವಾದದ ರಾಜಕಾರಣಕ್ಕೆ ಕಾಲಾಳುಗಳಾಗಿ ಬಳಸುತ್ತಿದ್ದಾರೆ. ‘ಹಿಂದುತ್ವ ಅಂದು’, ‘ಹಿಂದುತ್ವ ರಾಜಕಾರಣದ ನೆಲೆಗಳು, ಅಸ್ತ್ರಗಳು’ ಮತ್ತು‘ಹಿಂದುತ್ವ ಇಂದು ಮುಂದು’ ಎಂಬ ಮೂರು ಭಾಗಗಳ ಈ ಪುಸ್ತಕ ಕೋಮುವಾದದ ರಾಜಕಾರಣ ಗೋಡೆಯಿಂದ ಮೋದಿವರೆಗೆ ಬೆಳೆದುಬಂದ ಬಗೆಯನ್ನು ವಿಸ್ತಾರವಾಗಿ, ದಾಖಲೆಗಳು ಮತ್ತು ತರ್ಕಬದ್ಧ ಅಭಿಪ್ರಾಯಗಳ ಮೂಲಕ ಶ್ರೀಪಾದ ದಾಖಲಿಸಿದ್ದಾರೆ. ಅನೇಕಾನೇಕ ಗೊಂದಲಗಳನ್ನು ನಿವಾರಿಸುವ ಮತ್ತು ಚರ್ಚೆ-ಸಂವಾದಗಳಿಗೆ ಅಗತ್ಯವಾದ ಆಕರ ಗ್ರಂಥವಾಗಿ ಈ ಪುಸ್ತಕ ರೂಪುಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.