ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್. ದ್ವಾರಕಾನಾಥ್ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಈ ಸಂಕಲನದಲ್ಲಿ ಸಂಕಲಿಸಲಾಗಿದೆ. ಈ ಸಂಗ್ರಹದಲ್ಲಿ ಒಟ್ಟು 90ಲೇಖನಗಳಿವೆ. ದನಿ ಇಲ್ಲದವರಿಗೆ ಧ್ವನಿಯಾದ ಅಂಬೇಡ್ಕರ್ ಅವರು ’ಮೂಕನಾಯಕ’ ಆಗಿದ್ದರು. ಅದನ್ನೇ ಸೂಚಿಸುವಂತೆ ಈ ಪುಸ್ತಕದ ಶೀರ್ಷಿಕೆಯಿದೆ. ಶೋಷಿತರ- ನೊಂದವರ ಕುರಿತ ಬರೆಹಗಳು ಕಾಳಜಿಯಿಂದ ಕೂಡಿದವುಗಳಾಗಿವೆ.
ಡಾ. ಸಿ. ಎಸ್. ದ್ವಾರಕಾನಾಥ್ ಅವರ ಬರಹ ವಿಶೇಷವಾಗಿ ಪತ್ರಿಕಾ ಶೈಲಿಯದು. 'ಲಂಕೇಶ್ ಪತ್ರಿಕೆ'ಯ ಮೂಲಕ ಅವರು ಬರೆಹದ ಲೋಕಕ್ಕೆ ಹೆಚ್ಚು ಪರಿಚಿತರಾದರೂ, ನಾಡಿನ ಹಲವಾರು ಪತ್ರಿಕೆಗಳಿಗೂ ಲೇಖನಗಳನ್ನು ಬರೆದಿದ್ದಾರೆ. 'ಲಂಕೇಶ್ ಪತ್ರಿಕೆ'ಯ ಲೇಖನಗಳನ್ನು ಹೊರತುಪಡಿಸಿದಂತೆ ಉಳಿದ ಪತ್ರಿಕೆಗಳಿಗೆ ಬರೆದ ಲೇಖನಗಳು ಇದರಲ್ಲಿ ಸೇರಿವೆ. ಅಸಮಾನ ಭಾರತ, ಮಾಧ್ಯಮಗಳ ವೈದಿಕಶಾಹಿತನ, ಕಿಂಚಿತ್ತೂ ಕಾಳಜಿ ಇಲ್ಲದ ರಾಜಕಾರಣ, ಮೇಲ್ವರ್ಗಗಳ ದ್ವೇಷಾಸೂಯೆ, ತಳಸಮುದಾಯಗಳ ಮುಗ್ಧತೆ, ಅನನ್ಯತೆ, ಅವರ ಬಡತನ, ದಾರಿದ್ರ ಕುರಿತು ದ್ವಾರಕಾನಾಥ್ ಬರೆದಿರುವ ಸುಮಾರು ತೊಂಭತ್ತಾರು ಲೇಖನಗಳ ಸಂಗ್ರಹವನ್ನು ವಿ. ಹರೀಶ್ ಕುಮಾರ್ ಅಚ್ಚುಕಟ್ಟಾಗಿ ಸಂಕಲಿಸಿದ್ದಾರೆ. ಈ ಕೃತಿಯಲ್ಲಿ ಶತಮಾನಗಳಿಂದ ದಮನಿತರಾದ ಹಲವು ಅಲಕ್ಷಿತ ಸಮುದಾಯಗಳನ್ನು ಗುರುತಿಸಿ ಅವರ ಸಮಸ್ಯೆಗಳ ಬಗ್ಗೆ ಕ್ಷಕಿರಣ ಬೀರಿ ಬರೆದ ಲೇಖನಗಳಿವೆ. ’ಅಂಬೇಡ್ಕರ್ ಮೆದುಳು, ಲೋಹಿಯಾರ ಹೃದಯ ಹಾಗೂ ಗಾಂಧೀಜಿಯ ದೇಹ ನನ್ನಲ್ಲಿದೆ' ಎನ್ನುವ ದ್ವಾರಕಾನಾಥ್ ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ಮಾಡಿದ ಕೆಲಸಗಳ ಸಂದರ್ಭದಲ್ಲಿ ಕಂಡ ಅನುಭವಗಳನ್ನು ಆಧರಿಸಿ ಬರೆದ ಲೇಖನಗಳ ಮೂಲಕ ಈ ಪುಸ್ತಕದಲ್ಲಿ ಭಾರತದ 'ಬಹುತ್ವದ ದರ್ಶನ’ ಮಾಡಿಸುತ್ತಾರೆ. ಇಲ್ಲಿಯ ಲೇಖನಗಳಲ್ಲಿ ಯಾವುದನ್ನೂ ನಿರಾಕರಿಸುವಂತಿಲ್ಲ. ಟಿಪ್ಪು ಸುಲ್ತಾನ, ಖುಷವಂತಸಿಂಗ್, ನಾಲ್ವಡಿ ಕೃಷ್ಣರಾಜ ಒಡೆಯರ್, ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಬಗ್ಗೆ, ದಕ್ಕಲರ ಸ್ವಾತಂತ್ರ್ಯ ಉತ್ಸವವನ್ನು ಹಂಚಿಕೊಂಡಿರುವ ರೀತಿ, ತೃತೀಯ ಲಿಂಗಿಗಳ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿಂದ ಬರೆದಿರುವ ಲೇಖನಗಳ ಮೂಲಕ ಜಗತ್ತಿನ ಎಲ್ಲ ವಿಷಯಗಳು ಅನಾವರಣಗೊಂಡಿವೆ.
- ಎನ್. ಆಶಾ,
ಕೃಪೆ: ಹೊಸತು - ಜನವರಿ 2019
©2024 Book Brahma Private Limited.