ಭಾರತದಲ್ಲಿ ರಾಜಕಾರಣ ಕಾರ್ಪೋರೇಟ್ ಉದ್ಯಮಿಗಳ ಹಿಡಿತದಲ್ಲಿದೆ. ಕಾರ್ಪೋರೇಟ್ ಉದ್ಯಮ ರಾಜಕಾರಣಿಗಳ ಹಿಡಿತದಲ್ಲಿದೆ. ಇದು ಕಾಂಗ್ರೆಸ್ ಅಥವಾ ಬಿಜೆಪಿ ಆಳ್ವಿಕೆಯ ಪ್ರಶ್ನೆಯಲ್ಲ. ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಬಂಡವಾಳಶಾಹಿ ಪ್ರಭುತ್ವ ಮತ್ತು ಕಾರ್ಪೋರೇಟ್ ಆಳ್ವಿಕೆಯ ಪ್ರಶ್ನೆ, ಈ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರದ ಡಿಜಿಟಲೀಕರಣ, ಅಮಾನ್ಯೀಕರಣ ಮತ್ತು ಖಾಸಗೀಕರಣದ ಭರಾಟೆ ಭಾರತದ ಶ್ರಮಜೀವಿಗಳ ಬದುಕನ್ನು ಮೂರಾಬಟ್ಟೆ ಮಾಡಿದೆ ಎನ್ನುವ ಲೇಖಕರು ’ಇದು ಮೋದಿ ಸರ್ಕಾರದ ಏಕಪಕ್ಷೀಯ ನಿರ್ಧಾರವೂ ಅಲ್ಲ, ಆಡಳಿತ ನೀತಿಯೂ ಅಲ್ಲ, ಇಂದಿರಾಗಾಂಧಿ ತುರ್ತುಪರಿಸ್ಥಿತಿಯ ನಂತರ ಮರಳಿ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಭಾರತದ ಅರ್ಥವ್ಯವಸ್ಥೆ ಜಾಗತೀಕರಣದ ಹಾದಿ ತುಳಿದಿರುವುದನ್ನು ಸಮಕಾಲೀನ ಇತಿಹಾಸದ ಅಧ್ಯಯನದಿಂದ ಅರಿಯಬಹುದು’ ಎಂದಿದ್ದಾರೆ.
ಅಮಾನ್ಯೀಕರಣ ಕೇವಲ ಡಿಜಿಟಲೀಕರಣದ ಸಾಧನವಲ್ಲ. ಭಾರತದ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಸಮರ್ಪಿಸುವ ಬೃಹತ್ ಯೋಜನೆಯನ್ನು ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ನರಸಿಂಹರಾವ್, ಐ.ಕೆ ಗುಜ್ರಾಲ್, ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರಗಳು ಹಾಕಿರುವ ತಳಪಾಯದ ಮೇಲೆ ನರೇಂದ್ರ ಮೋದಿ ನವ ಉದಾರವಾದದ ಸೌಧವನ್ನು ನಿರ್ಮಿಸುತ್ತಿದ್ದಾರೆ. ಹಾಗಾಗಿಯೇ ಅಧಿಕಾರ ರಾಜಕಾರಣ ಮತ್ತು ಬಂಡವಾಳದ ಹಿತಾಸಕ್ತಿಯ ನಡುವೆ ಸಮನ್ವಯ ಸಾಧಿಸುವುದು ಸಾಧ್ಯವಾಗಿದೆ. ಈ ಸಮನ್ವಯ ಸಾಮಾಜಿಕ ಸೌಹಾರ್ದತೆಯನ್ನೂ ನಾಶಪಡಿಸುತ್ತಿದೆ ಎಂಬ ಅಭಿಪ್ರಾಯ ಲೇಖಕರದು.
©2024 Book Brahma Private Limited.