‘ಗೋಹತ್ಯೆ ನಿಷೇಧದ ಸುತ್ತಲಿನ ರಾಜಕೀಯ ’ ಕೃತಿಯು ಬಿ. ಗಂಗಾಧರಮೂರ್ತಿ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಂ.ಡಿ ಒಕ್ಕುಂದ, ‘ಗೋವಿನ ಪವಿತ್ರತೆಯ ಪ್ರಶ್ನೆ ಇಂದು ದಲಿತರನ್ನೂ ದಾರಿ ತಪ್ಪಿಸುತ್ತದೆ. ಕೆಳವರ್ಗಗಳು ತಮ್ಮ ಆಹಾರವ್ಯವಸ್ಥೆಯನ್ನು ಬಿಟ್ಟು ಕೊಡುತ್ತಿದ್ದಾರೆ. ಅವರ ಹಸಿವಿನ ಪ್ರಮಾಣ ಹೆಚ್ಚುತ್ತಿದೆ. ಶಿಕ್ಷಣ, ಬಡತನ, ಆಹಾರ ಎಲ್ಲದರಲ್ಲೂ ತಮ್ಮ ನಿಜವಾದ ಬಂಧುಗಳಾಗಿರುವ ಅಲ್ಪ ಸಂಖ್ಯಾತರನ್ನು ದ್ವೇಷಿಸತೊಡಗಿದ್ದಾರೆ. ಪುರೋಹಿತಶಾಹಿ ರಾಜಕಾರಣದ ಅರಿವಿಲ್ಲದೇ ಮುಗ್ಧವಾಗಿ ಬಲಿಪಶು ಗಳಾಗುತ್ತಿದ್ದಾರೆ. ಅಂಬೇಡ್ಕರ್ ಮೂರ್ತಿಗೆ ಅಪಮಾನವಾದರೆ ದಲಿತ ಸಮುದಾಯ, ಕನಕದಾಸನಿಗ ಅಪಮಾನಿಸಿದರೆ ಕುರುಬ ಸಮುದಾಯ, ಮಹ್ಮದ್ ಹೆಸರಿಗೆ ಧಕ್ಕೆಯಾದರೆ ಮುಸ್ಲಿಂ ಸಮುದಾಯ ರೌದ್ರಾವತಾರ ತಾಳುತ್ತಾರೆ. ಹೀಗೆ ಇನ್ನೂ ಹಲವಾರು ತಳಸಮುದಾಯಗಳು ತಾವು ಗುರುತಿಸಿಕೊಂಡಿರುವ `ಪವಿತ್ರ‘ ವಸ್ತುವಿಷಯ ವ್ಯಕ್ತಿಗಳಿಗೆ ಅಪಮಾನಗಳು ನಡೆದರೆ ಪುಟಿದೇಳುತ್ತವೆ. ಅದು ಅನಿವಾರ್ಯ ಕೂಡ. ಆದರೆ ತಮ್ಮ ಆಹಾರ ವ್ಯವಸ್ಥೆ ಅದರ ಗುಂಟ ಬೆಳೆದು ಬಂದಿರುವ ಸಾಂಸ್ಕೃತಿಕ ಅನನ್ಯತೆಗಳ ಮೇಲೆ ತಾವೇ ಆರಿಸಿ ಕಳಿಸಿದ ಸರಕಾರದಿಂದ ನೇರವಾದ ಆಕ್ರಮಣ ನಡೆದೂ ಅದರ ವಿರುದ್ಧ ದೊಡ್ಡ ಪ್ರಮಾಣದ ಹೋರಾಟವನ್ನು ಹುಟ್ಟು ಹಾಕದಿರುವುದು ಆಶ್ಚರ್ಯದ ಸಂಗತಿ. ರಾಜಕಾರಣದ ಅಧಿಕಾರಿಗಳಿಗೆ ಈ ಸಮುದಾಯಗಳ ನಾಯಕರುಗಳು ಕೂಡ ತಮ್ಮನ್ನು ಮಾರಿಕೊಂಡಿರುವುದೂ ಕೂಡ ಇದಕ್ಕೆ ಕಾರಣ. `ಅಹಿಂದ‘ ಸಂಘಟನೆ ಅಹಿಂದ ವರ್ಗದ ಮೇಲಾಗುತ್ತಿರುವ ಈ ಸಾಂಸ್ಕೃತಿಕ ಹಲ್ಲೆಯನ್ನು ವಿರೋಧಿಸಿ ಹೋರಾಟ ಹುಟ್ಟುಹಾಕದೇ ಇರುವುದು ಅದರ ಹಿಂದಿನ ರಾಜಕೀಯ ಅವಕಾಶವಾದಿತನವು ಕಾರಣವಾಗಿದೆ. ಈಗಲಾದರೂ, ಈ ವರ್ಗಗಳು ಎಚ್ಚರಗೊಳ್ಳದಿದ್ದರೆ ಅವರ ಆಹಾರ ಮಾತ್ರವಲ್ಲ, ಅವರ ಬದುಕನ್ನು ಕಿತ್ತುಕೊಳ್ಳುವ ದಿನಗಳು ದೂರವಿಲ್ಲ’ ಎನ್ನುವ ಮೂಲಕ ಕೃತಿಯು, ಯಾವ ದಿಕ್ಕಿನಲ್ಲಿ ಚಿಂತನೆ ನಡೆಸುತ್ತಿದೆ ಎಂಬುದನ್ನು ತೋರಿದ್ದಾರೆ.
©2024 Book Brahma Private Limited.