‘ಕನ್ನಡ ಪ್ರಜ್ಞೆಯ ಸುತ್ತಮುತ್ತ ' ಸಂಪಾದಕರಾದ ಗೀತಾ ಡಿ.ಸಿ ಹಾಗೂ ನಾಗರೇಖಾ ಗಾಂವಕರ ಅವರ ಸಂಪಾದಿತ ಕೃತಿಯಾಗಿದೆ. ನಾಡು-ನುಡಿ-ಚಿಂತನೆಯನ್ನು ಒಳಗೊಂಡಿದೆ. 'ಭಾವ ಸಂವಹನದ ಜೀವಾಳವೇ ಭಾಷೆ. ಅದರಲ್ಲೂ ಮಾತೃಭಾಷೆಯ ಮೂಲಕವೇ ನಮ್ಮೆಲ್ಲರ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚುವುದು ಹಾಗೂ ಒಂದು ಭಾಷೆ ಜೀವಂತಿಕೆಯಿಂದಿರುವುದು' ಎನ್ನುತ್ತಾರೆ ಭಾಷಾ ವಿಜ್ಞಾನಿಗಳು. ಶಿಕ್ಷಣದಲ್ಲಿ ಭಾಷಾ ಬೋಧನೆ ಮತ್ತು ಭಾಷಾ ಕೌಶಲ್ಯಗಳನ್ನು ಬೆಳೆಸುವಂತಹ ಹಲವಾರು ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಇದರೊಂದಿಗೆ ನಮ್ಮ ನಾಡಿನಲ್ಲಿ ನಮ್ಮ ಭಾಷೆಯನ್ನೇ ಕಡೆಗಣಿಸುತ್ತಾ ಅನಾದರದಿಂದ ಕಾಣುತ್ತಾ ಬಂದಿರುವುದೂ ನಡೆದೇ ಇದೆ. ಇದರ ಪರಿಣಾಮವನ್ನು ಪದವಿ ಹಂತಕ್ಕೆ ಬಂದ ವಿದ್ಯಾರ್ಥಿಗಳಲ್ಲಿ ಕಾಣುತ್ತಿದ್ದೇವೆ. ಕನ್ನಡದ ಬಗೆಗೆ ಅಭಿಮಾನವಿದ್ದರೂ, ಕನ್ನಡದ ಪದಬಳಕೆ ಮಾತಿನಲ್ಲೂ ಕಡಿಮೆಯಾಗಿ, ಬರೆಯುವಾಗಂತೂ, ಒಂದು ವಾಕ್ಯವನ್ನೂ ಸರಿಯಾಗಿ ಬರೆಯಲಾಗದ ಸ್ಥಿತಿಗೆ ನಾವೇ ನಮ್ಮ ಮಕ್ಕಳನ್ನು ದೂಡುತ್ತಿದ್ದೇವೆ. ಇಷ್ಟು ಸಾಲದೆಂಬಂತೆ ಸದ್ಯದ ಪರಿಸ್ಥಿತಿಯಲ್ಲಿ ಪಠ್ಯಕ್ರಮದ ಭಾಗವಾಗಿದ್ದ ಭಾಷಾ ಬೋಧನೆಯಲ್ಲಿ ಕಡಿತಗೊಳಿಸುವ, ಕೇವಲ ಯಾಂತ್ರಿಕವಾಗಿ ಅಂಕಗಳಿಕೆಗೆ ಮಾತ್ರ ಕನ್ನಡ ಭಾಷೆಯನ್ನು ಸೀಮಿತಗೊಳಿಸಿಕೊಂಡಿರುವುದು ಚಾಲನೆಯಲ್ಲಿದೆ! ಭಾಷಾ ತರಗತಿಗಳೆಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ತಾತ್ಸಾರ ಮನೆಮಾಡಿದೆ! ನಮ್ಮ ನಾಡು ನುಡಿಗಳನ್ನು ಇದರ ಮೂಲಕ ಸಾವಿರಾರು ವರ್ಷಗಳಿಂದ ಹರಿದು ಬಂದಿರುವ ನಮ್ಮದೇ ಬದುಕಿನ ವೈವಿಧ್ಯಗಳನ್ನು ನಮಗರಿವಿಲ್ಲದೆಯೇ ಪಕ್ಕಕ್ಕೇ ಸರಿಸುತ್ತಾ, ನಿಧಾನವಾಗಿ ಕಾಲುಬುಡದಲ್ಲಿನ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂದು ಅನಿಸುತ್ತಿರುವ ಕಾಲಘಟ್ಟವಿದು ಎಂದಿದ್ದಾರೆ ಸಂಪಾದಕರು.
©2024 Book Brahma Private Limited.