ಈಗಷ್ಟೇ ಪ್ರಪಂಚ ನೋಡುತ್ತಿರುವ ಅದೆಷ್ಟೋ ಮಕ್ಕಳು ಇಂದು ಕಾಮುಕರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಬಾಲ್ಯದಲ್ಲಿ ಆಗುವ ಮಾನಸಿಕ ಆಘಾತಕ್ಕೆ ಸರಿಯಾದ ಸಮಯದಲ್ಲಿ ಸಾಂತ್ವನ, ಮಾರ್ಗದರ್ಶನ ಸಿಗದೇ ಹೋದರೆ ದೌರ್ಜನ್ಯಕ್ಕೊಳಗಾದವರ ಜೀವನವೇ ಕಮರಿ ಹೋಗುತ್ತದೆ. ಇಂತಹ ಅನೇಕ ಕಥೆಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಕವಿ-ಲೇಖಕಿ ರೂಪ ಅವರು ಶಿಕ್ಷಣ ತಜ್ಞೆ, ಹೋರಾಟಗಾರ್ತಿ ಕೂಡ. ಪ್ರೇರಣಾ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ದೌರ್ಜನ್ಯಕ್ಕೊಳಗಾದ ಮಕ್ಕಳು, ಮಹಿಳೆಯರ ಪರವಾಗಿ ಈ ಸಂಸ್ಥೆಯ ಮೂಲಕ ಹೋರಾಟ ಮಾಡುತ್ತಿದ್ದಾರೆ. ದೌರ್ಜನ್ಯ, ಕಿರುಕುಳಕ್ಕೆ ಒಳಗಾದವರ ನೋವುಗಳನ್ನು ಹತ್ತಿರದಿಂದ ಕಂಡಿರುವ ಅವರು ಅವುಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಕ್ರೂರವಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಈ ಕೃತಿಯಲ್ಲಿದೆ. 18– 20 ವರ್ಷಗಳಿಂದ ವಿವಿಧ ಪತ್ರಿಕೆ, ಪಾಕ್ಷಿಕ, ಅಂತರ್ಜಾಲ ತಾಣಗಳಲ್ಲಿ ಕೂಡ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ.
ರೂಪ ಹಾಸನ ಕ್ರಿಯಾಶೀಲ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಪ್ರೇರಣಾ ವಿಕಾಸ ವೇದಿಕೆಯಿಂದ ಮಕ್ಕಳ ಹಕ್ಕು, ವಿಕಾಸ, ಆರೋಗ್ಯ, ಪುನರ್‌ವಸತಿ, ಶಿಕ್ಷಣ, ಹೀಗೆ ಕಂದಮ್ಮಗಳ ಸರ್ವಾಂಗೀಣ ಅಭಿವೃದ್ದಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ತಮ್ಮನ್ನು ತಾವು ಮಕ್ಕಳ ಕ್ಷೇತ್ರಕ್ಕೆ ಅರ್ಪಿಸಿಕೊಂಡ ಅವರ ಬದ್ಧತೆ ಅನುಕರಣೀಯವಾದದ್ದು. ಕಳೆದ 15-20 ವರ್ಷಗಳಿಂದ ಈ ಕ್ಷೇತ್ರದಲ್ಲಿ ದುಡಿದ ಅವರ ಅನುಭವ, ಅಧ್ಯಯನದ ಹಿನ್ನೆಲೆಯಿಂದ ಮಕ್ಕಳ ವಿವಿಧ ಸಮಸ್ಯೆ, ಪರಿಹಾರ ಕುರಿತು ಬರೆದ ಒಟ್ಟು 48 ಲೇಖನಗಳನ್ನು ’ಕೈ ಚಾಚುತಿವೆ ಕಂದಮ್ಮಗಳು' ಎಂಬ ಕೃತಿಯಲ್ಲಿ ಪ್ರಕಟಿಸಿದ್ದಾರೆ. ಭ್ರೂಣಹತ್ಯೆಯಿಂದ ಬಾಲಕಾರ್ಮಿಕರ ಸಮಸ್ಯೆಯವರೆಗೆ, ಮಕ್ಕಳ ಹಕ್ಕುಗಳಿಂದ ಅವರ ಪ್ರತಿಭೆಯವರೆಗೆ ಎಲ್ಲ ವಿಷಯಗಳನ್ನೂ ಒಳಗೊಂಡ ಈ ಕೃತಿ ಮಹತ್ವದ ದಾಖಲೆಯಾಗಿದೆ. ಶಿಶುಮರಣ, ಕಾಣೆಯಾದ ಮಕ್ಕಳ ಅಂಕಿ ಸಂಖ್ಯೆ, ಸರಕಾರದ ಯೋಜನೆಗಳು, ಮಕ್ಕಳ ಸಾಹಿತ್ಯ, ಮಕ್ಕಳ ಕುರಿತು ಸಮಾಜ ನಿರ್ವಹಿಸಬೇಕಾದ ಕರ್ತವ್ಯ ಇಂಥ ಎಲ್ಲ ವಿಷಯಗಳೂ ಒಂದೇ ಕೃತಿಯಲ್ಲಿ ಲಭಿಸುವಂತೆ ಮಾಡಿದ್ದಾರೆ ರೂಪ ಹಾಸನ, ಚಿಂತನೆ ಚಟುವಟಿಕೆ ಜೊತೆ ಜೊತೆಗೇ ನಡೆದಾಗ ಬರಹಕ್ಕೆ ಅಧಿಕೃತತೆ ಒದಗುತ್ತದೆ. ಇಲ್ಲಿನ ಲೇಖನಗಳಲ್ಲಿ ಲೇಖಕಿಯ ಕಾಳಜಿ ಪ್ರಮುಖವಾಗಿದೆ. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಹಕ್ಕುಗಳ ಹೋರಾಟಗಾರರಿಗೆ ಈ ಕೃತಿ ಉಪಯುಕ್ತ ಕೈಪಿಡಿಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಕೃಪೆ: ಹೊಸತು 2019 ಜನೆವರಿ
©2024 Book Brahma Private Limited.