ಕಾಲದ ಕನ್ನಡಿ

Author : ಚಿನ್ನಸ್ವಾಮಿ ಡಿ

Pages 124

₹ 90.00




Year of Publication: 2019
Published by: ಶ್ರೀಕ್ಷೇತ್ರ ಪ್ರಕಾಶನ,
Address:  # 287, F-21, ರಾಮಾನುಜ ರಸ್ತೆ, ಕೋಟೆ ಮೊಹಲ್ಲ, ಮೈಸೂರು-04
Phone: 8904431029

Synopsys

‘ಕಾಲದ ಕನ್ನಡಿ’ ಲೇಖಕ ಚಿನ್ನಸ್ವಾಮಿ ಡಿ. ಬ್ಯಾಡಮೂಡ್ಲು ಅವರ ಲೇಖನಗಳ ಸಂಕಲನ. ಒಟ್ಟು 14 ಲೇಖನಗಳಿವೆ. ಬಸವಣ್ಣ, ಮರುಳಸಿದ್ಧ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಮುಳ್ಳೂರು ನಾಗರಾಜು, ಡಾ.ಸಿದ್ಧಲಿಂಗಯ್ಯ ಹಾಗೂ ತುಕಾರಾಂ ಅವರ ಬದುಕು-ಬರಹಗಳನ್ನೊಳಗೊಂಡಿವೆ. ಅಲ್ಲದೆ, ದುಡಿಮೆಯಲ್ಲಿನ ಮಹಿಳೆಯರ ಸ್ಥಿತಿ-ಗತಿಗಳು ಹಾಗೂ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರ ಚಿತ್ರಣಕ್ಕೆ ಸಂಬಂಧಪಟ್ಟ ವಿಶೇಷ ಲೇಖನಗಳು ಸೇರ್ಪಡೆಯಾಗಿವೆ.

ಕೃತಿಗೆ ಮುನ್ನುಡಿ ಬರೆದ ಲೇಖಕ ರಾಜಶೇಖರ ಜಮದಂಡಿ ಅವರು ‘ಇಲ್ಲಿನ ಲೇಖನಗಳನ್ನು ನಾನು ಗಮನಿಸಿದಂತೆಯೆ ಚಿನ್ನಸ್ವಾಮಿಯವರಲ್ಲಿ ನಿರಂತರ ಅಧ್ಯಯನ ಮತ್ತು ಬರವಣಿಗೆ ಕಂಡುಬರುತ್ತದೆ. ಪ್ರತಿ ಲೇಖನ ಸಿದ್ಧಪಡಿಸುವಲ್ಲಿ ಪೂರಕ ಮಾಹಿತಿಗಳು ಸಂಗ್ರಹಣೆ, ವಿಶ್ಲೇಷಣೆ, ವಿವರಣೆಗಳು ಅಗತ್ಯಕ್ಕನುಗುಣವಾಗಿ ಒದಗಿಸಿದ್ದಾರೆ. ಆಯಾ ಲೇಖನಗಳ ಕೊನೆಯಲ್ಲಿ ನೀಡಿರುವ ಕೃತಿಗಳ ಪಟ್ಟಿ ಅವರ ಗಂಭೀರ ಓದಿಗೆ ಸಾಕ್ಷಿಯಾಗಿವೆ.’ ಎಂದು ಪ್ರಶಂಸಿಸಿದ್ದಾರೆ. 

 

About the Author

ಚಿನ್ನಸ್ವಾಮಿ ಡಿ

ಲೇಖಕ ಚಿನ್ನಸ್ವಾಮಿ ಡಿ. ಡಿ. ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದವರು. ತಾಯಿ ಗುರುಸಿದ್ದಮ್ಮ, ತಂದೆ ದೊಡ್ಡಸಿದ್ದಯ್ಯ. ಪ್ರಾಥಮಿಕ ಶಿಕ್ಷಣವನ್ನು ಬ್ಯಾಡಮೂಡ್ಲು, ಹಾಗೂ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರದನಹಳ್ಳಿಯಲ್ಲಿ,  ಪಿ.ಯು.ಸಿ. ಮತ್ತು ಪದವಿಯನ್ನು ಚಾಮರಾಜನಗರದಲ್ಲಿ, ಸ್ನಾತಕೋತ್ತರ ಹಾಗೂ ಎಂ.ಫಿಲ್. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಬಿ.ಇಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ,, ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನಲ್ಲಿ, ತೆಲುಗು ಭಾಷೆ ಡಿಪ್ಲೋಮಾವನ್ನು ಪೂರೈಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ನಾಟಕಗಳಲ್ಲಿ ಬುದ್ಧ ಬಸವ ಅಂಬೇಡ್ಕರ್” ವಿಷಯವಾಗಿ ಸಂಶೋಧನಾ ವಿದ್ಯಾರ್ಥಿ. ಅವರ ಮೊದಲ ವಿಮರ್ಶೆ ಕೃತಿಯಾದ ‘ನೆಲದೊಡಲು'ನ್ನು ಹೊರತಂದಿದ್ದಾರೆ ಮಹಿಳಾ ಸಬಲೀಕರಣದಲ್ಲಿ ಅಂಬೇಡ್ಕರ್, ...

READ MORE

Reviews

‘ಕಾಲದ ಕನ್ನಡಿ’ ಗೆ ಸಾಹಿತಿ ರಾಜಶೇಖರ ಜಮದಂಡಿ ಅವರ ಮುನ್ನುಡಿ

 ಬಸವಣ್ಣನವರ ಬಗೆಗಿರುವ ಅವರ ಆರಂಭದ ಲೇಖನವು 12ನೇ ಶತಮಾನದ ವಾಸ್ತವ ಚಿತ್ರಣದೊಂದಿಗೆ ಅನಾವರಣಗೊಂಡಿದೆ. ಅಂದಿನ ಶರಣರಲ್ಲಿದ್ದ ವೈಚಾರಿಕ ಪ್ರಜ್ಞೆ ಎಂದೆಂದಿಗೂ ಪ್ರಸ್ತುತ. ವಚನಗಳ ಅಧ್ಯಯನವೆಂದರೆ ಮುಂದಾಲೋಚನೆಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಎಂದರ್ಥ. ಶರಣರ ಶಿಸ್ತುಬದ್ಧ ಕಾಯಕ-ದಾಸೋಹಗಳು ಇಂದಿಗೂ ದಾರಿದೀಪವಾಗಿವೆ. ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ, ಸಮೂಹದ ಶಕ್ತಿ, ಸಮಾಜೋ-ಧಾರ್ಮಿಕಾಭಿವೃದ್ಧಿಗೆ ಅವರು ಸದಾ ಚಿಂತನಶೀಲರಾಗಿದ್ದರು. “ಬರೆದಂತೆಯೇ ಬದುಕು - ಬದುಕಿದಂತೆಯೆ ಬರಹ” ಎಂಬ ಅವರ ಧೋರಣೆ ಸಾರ್ವಕಾಲಿಕ ನಾಯಕತ್ವದ ಗುಣಕ್ಕೆ ಸಾಕ್ಷಿ ಎಂಬುದನ್ನು ಚಿನ್ನಸ್ವಾಮಿಯವರು ಈ ಲೇಖನದಲ್ಲಿ ವಿಶದಪಡಿಸಿದ್ದಾರೆ. ಬಸವಣ್ಣನವರ ಸಮಕಾಲೀನರಾಗಿದ್ದ ಮರುಳಸಿದ್ಧರು ಅರವತ್ತೆಂಟು ಸಾವಿರ ವಚನಗಳ ರಚನೆ ಮಾಡಿದ್ದರೆಂಬುದು ಸಿದ್ಧರಾಮಣ್ಣ ತನ್ನದೊಂದು ವಚನದಲ್ಲಿ ತಿಳಿಸಿದ್ದಾರೆ. ಬಹುಶಃ ಕಾಲದ ಹೊಡೆತಕ್ಕೆ ಅವರ ವಚನಗಳು ಕಾಣೆಯಾಗಿ ಒಂದೇ ವಚನ ದೊರೆತಿದೆ. ವಚನಕಾರರಂತೆ ಇವರು ಜಾತಿ, ಮೂಢನಂಬಿಕೆ, ಯಜ್ಞಯಾಗಾದಿಗಳ ವಿರುದ್ಧ ಹೋರಾಡಿ, ಅಸ್ಪøಶ್ಯತೆ ಧಿಕ್ಕರಿಸಿದ್ದಲ್ಲದೆ ನಿಸ್ಸೀಮ ಸಾಧನೆಯಲ್ಲಿ ಮುನ್ನಡೆದವರೆಂಬುದನ್ನು ವಿವರಿಸಲಾಗಿದೆ. ನಮ್ಮ ದೇಶದ ಮಹಾಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರರ ಸಂವಿಧಾನಾತ್ಮಕ ಚಿಂತನೆಗಳು ಪ್ರತಿಯೊಬ್ಬರಲ್ಲಿನ ಮನುಷ್ಯತ್ವವನ್ನು ಜಾಗೃತಗೊಳಿಸುವಂತಿವೆ. ಅವರು ಜಾತಿ, ಹಣ, ಅಧಿಕಾರ, ಅಂತಸ್ತುಗಳಲ್ಲಿನ ತಾರತಮ್ಯಗಳ ನಿವಾರಣೆಗಾಗಿ ಜೀವನದುದ್ದಕ್ಕೂ ಕಂಕಣಬದ್ಧರಾಗಿದ್ದರು. “ಮಾನವಕುಲಂ ತಾನೊಂದೇ ವಲಂ” ಎಂಬ ಪಂಪನ ವಾಣಿಯನ್ನು ಮರು ರಚನೆಗೈದ ಅಂಬೇಡ್ಕರರಲ್ಲಿನ ಸಾಮಾಜಿಕ ಪ್ರಜ್ಞೆ ಬೌದ್ಧಿಕ ಚಿಂತನೆಗಳು ಹೇಗಿದ್ದವು ಎಂಬುದನ್ನು ಚಿನ್ನಸ್ವಾಮಿಯವರು ಎಳೆಎಳೆಯಾಗಿ ಚಿತ್ರಿಸಿದ್ದಾರೆ. “ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಿರುತ್ತಾರೆ” ಎಂಬ ಮಾತಿದೆ. ದೈಹಿಕ-ಬೌದ್ಧಿಕ ವ್ಯಕ್ತಿತ್ವದಲ್ಲಿ ಶಕ್ತಿ-ಯುಕ್ತಿಯನ್ನು ಹೊಂದಿರುವ ಮಹಿಳೆಯರ ಭಾವನೆಗಳನ್ನು ಸರಿಯಾಗಿ ಸಮಾಜ ಅರ್ಥೈಸಿಕೊಳ್ಳಬೇಕಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಗೆ ಉತ್ತಮ ಸ್ಥಾನ-ಮಾನಗಳು ಲಭ್ಯವಾಗಿದೆ. ಈ ರೀತಿಯ ಸವಲತ್ತುಗಳು ಕಲ್ಪಿಸುವ ನಿಟ್ಟಿನಲ್ಲಿ ಡಾ.ಅಂಬೇಡ್ಕರರ ಚಿಂತನ-ಮಂಥನಗಳು ಆಧಾರವಾಗಿದ್ದವು ಎಂಬುದನ್ನು ಯಾರೂ ಮರೆಯಲಾರದು. ಮಹಿಳಾ ವಿಮೋಚನೆ, ಮಹಿಳಾ ಹಕ್ಕು-ಬಾದ್ಯತೆ, ಮಹಿಳಾಭಿವೃದ್ಧಿ ಇತ್ಯಾದಿ ಕುರಿತಾಗಿ ಸಂವಿಧಾನಾತ್ಮಕವಾದ ಅಂಬೇಡ್ಕರರ ವಾದಗಳು ಇಂದಿಗೂ ಸ್ತುತ್ಯಾರ್ಹ. ಸ್ತ್ರೀ-ಪುರುಷ ಒಂದೇ ನಾಣ್ಯದ ಎರಡು ಮುಖಗಳಾಗಿರುವುದಲ್ಲದೆ ಅರ್ಧನಾರೀಶ್ವರ ಪರಿಕಲ್ಪನೆಯು ಸಮಾನ ಅವಕಾಶಗಳಿಗೆ ನಾಂದಿಯಾಗಿದೆ. ಇಂತಹ ವಿಚಾರಗಳನ್ನು “ಮಹಿಳಾ ಸಬಲೀಕರಣ” ಎಂಬ ಲೇಖನದಲ್ಲಿ ಚಿನ್ನಸ್ವಾಮಿಯವರು ಕೂಲಂಕಷವಾಗಿ ವಿವರಿಸಿದ್ದಾರೆ. ಹಾಗೆಯೇ ಅಂಬೇಡ್ಕರ್ ಅವರ ವಿಚಾರಧಾರೆಗಳ ಅರಿವು ಜನಮಾನಸದಲ್ಲಿ ನಿಚ್ಚಂಪೊಸತಾಗಿ ಅವಿರ್ಭವಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಾಚೀನತೆಯಿಂದ ಆಧುನಿಕತೆಯವರೆಗೆ ನಾಗರೀಕತೆ ಬೆಳೆದಂತೆಯೇ, ಉತ್ಪಾದನಾ ಸಾಮಥ್ರ್ಯ ಹೆಚ್ಚಾಗುತ್ತಾ ಸಾಗಿದೆ. ಇದರಿಂದ ಆರ್ಥಿಕ ಕ್ಷೇತ್ರವೂ ಬದಲಾವಣೆಯತ್ತ ಮುನ್ನಡೆದಿದೆ. ದೇಶದ ಆರ್ಥಿಕ ಸ್ಥಿತಿ-ಗತಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಈ ಹಿನ್ನಲೆಯಲ್ಲಿ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾ ದುಡಿಮೆಗೆ ಶರಣಾಗಲೇಬೇಕು. ಅದು ಕೃಷಿ, ಕೈಗಾರಿಕೆ, ಸಾರಿಗೆ, ಶಿಕ್ಷಣ, ಯಾವುದೇ ಆಗಿರಬಹುದು. ಪ್ರತಿಯೊಬ್ಬರ ದುಡಿಮೆ ಹಾಗೂ ಉಳಿತಾಯಗಳು ದೇಶದ ಆರ್ಥಿಕ ಭದ್ರತೆಗೆ ಅನುಕೂಲಕರವಾಗಿರುತ್ತವೆ. ಇಂತಹ ಯೋಚನೆಗಳನ್ನು ಅಂಬೇಡ್ಕರರ ಚಿಂತನೆಗಳ ಮೂಲಕ ಈ ಲೇಖನದಲ್ಲಿ ಚಿನ್ನಸ್ವಾಮಿಯವರು ವಿಶ್ಲೇಷಿಸಿದ್ದಾರೆ. ಮೇಲೆ ತಿಳಿಸಿದಂತೆ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷನ ಸರಿಸಮಾನವಾಗಿ ಸಾಧಿಸಿ ತೋರಿಸುತ್ತಿದ್ದಾಳೆ. ಆದರೆ ಅವರಲ್ಲಿ ಒಗ್ಗಟ್ಟಿನ ಪ್ರಶ್ನೆ-ಸಂಘಟನಾ ಪ್ರಶ್ನೆ ಎದುರಾಗಿದೆ. ಬೇರೆ ಬೇರೆ ಉದ್ದಿಮೆ (ಕೃಷಿ, ಕೈಗಾರಿಕೆ, ಬ್ಯಾಂಕ್) ಗಳಲ್ಲಿ ಅವರಿಗೆ ಸರಿಯಾದ ಸವಲತ್ತುಗಳ ಕೊರತೆಯಿದೆ. ಅವರ ದುಡಿಮೆಯ ಸಂದರ್ಭದಲ್ಲಿ ಆಗುವ ಶೋಷಣೆ, ಅನ್ಯಾಯ, ತಾರತಮ್ಯಗಳಂತಹ ಸಮಸ್ಯೆಗಳ ನಿವಾರಣೆಯ ಎಚ್ಚರಿಕೆಗಳು ಅತ್ಯಗತ್ಯ. ಈಗಲೂ ಮಹಿಳೆಯರಿಗೆ ಕೆಲವು ಸಂದರ್ಭಗಳಲ್ಲಿ ಸ್ವತಂತ್ರವಾದ ಅವರ ಆಲೋಚನೆಗಳಿಗೆ ಬೆಲೆ ನೀಡಲಾಗುತ್ತಿಲ್ಲ. ಅವರಿಗೆ ಬದುಕಿನ- ಸಾಮಾಜಿಕ ಭದ್ರತೆ ಇದ್ದಾಗ್ಯೂ ಅವರ ದುರ್ಬಳಕೆ ಹೆಚ್ಚಾಗುತ್ತಿರುವುದು ಶೋಚನೀಯ. ಅವರು ಅಬಲೆಯರೆಂಬ ಹಣೆಪಟ್ಟಿಯಿಂದ ಹೊರ ಬರುವಲ್ಲಿ ಪೂರ್ವಗ್ರಹಪೀಡಿತರಾದ ಪುರುಷ ಸಮಾಜದ ಕಾಣದ ಕೈವಾಡವಿದೆ. ಈ ರೀತಿಯಾದ ಅನೇಕ ವಿಚಾರಗಳನ್ನು “ಅಸಂಘಟಿತ ವಲಯದ ಮಹಿಳಾ ದುಡಿಮೆಗಾರರ ಸ್ಥಿತಿ-ಗತಿ” ಎಂಬ ಲೇಖನದಲ್ಲಿ ಚಿನ್ನಸ್ವಾಮಿ ಮನೋಜ್ಞವಾಗಿ ಚರ್ಚಿಸಿದ್ದಾರೆ. ರಂಗಭೂಮಿ ಎಂಬುದು ಕೇವಲ ಮನರಂಜನೆಯಲ್ಲ, ಅದು ಮನುಷ್ಯನ ಇತಿ-ಮಿತಿಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಿದೆ. “ರಂಗಭೂಮಿಯಲ್ಲಿ ಮಹಿಳಾಗನ್ನಡಿ” ಎಂಬ ಲೇಖನದಲ್ಲಿ ಹವ್ಯಾಸಿ ಮತ್ತು ವೃತ್ತಿರಂಗಭೂಮಿಗಳ ಪರಿಚಯದ ಮೂಲಕ ಮಹಿಳಾ ಪಾತ್ರ ಪರಿಚಯದ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ರಂಗಭೂಮಿಯೆಂದರೆ ತಕ್ಷಣ ನೆನಪಾಗುವುದು ಉತ್ತರ ಕರ್ನಾಟಕದ ನಾಟಕ ಕಂಪನಿಗಳು. ಆರಂಭದಲ್ಲಿ ಸ್ತ್ರೀಯರಿಗೆ ಅಭಿನಯಿಸಲು ಅವಕಾಶವಿರಲಿಲ್ಲ. ಸ್ತ್ರೀಪಾತ್ರಗಳನ್ನು ಅಂದು ಪುರುಷರೇ ವಹಿಸಿಕೊಳ್ಳುತ್ತಿದ್ದರು. ಕಾಲಕ್ರಮೇಣ ಸ್ತ್ರೀಯರೂ ಮುಂದೆ ಬಂದರೆಂಬ ವಿಚಾರವನ್ನು ಕೆಲ ನಾಟಕ ಕಂಪನಿಗಳ ಪರಿಚಯದಲ್ಲಿ ಚಿನ್ನಸ್ವಾಮಿ ಪ್ರಸ್ತುತ ಪಡಿಸಿದ್ದಾರೆ. ಕುವೆಂಪು ಅವರ ‘ಜಲಗಾರ’ ನಾಟಕ ಪರಿಚಯದೊಂದಿಗೆ ಶ್ರೇಷ್ಠ-ಕನಿಷ್ಠತೆಗಳನ್ನು ಮುಖಾಮುಖಿಯಾಗಿಸಲಾಗಿದೆ. ಕಾಯಕದಲ್ಲಿಯೇ ಶಿವದರ್ಶನ ವ್ಯಕ್ತವಾಗುವ ಪರಿಕಲ್ಪನೆಯನ್ನು ಕುವೆಂಪು ಸಮರ್ಥವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ಕಂಡುಬರುವ ಅಸಮಾನತೆಗಳನ್ನು ಪ್ರತಿಬಿಂಬಿಸುವ ಹಿನ್ನೆಲೆಯೊಂದಿಗೆ ನಾಟಕದ ಪಾತ್ರಗಳನ್ನು ಸಂದರ್ಭಾನುಸಾರ ಚಿತ್ರಿಸಿದ್ದಾರೆ. ಪೂರಕ ಪಾತ್ರಗಳ ಸಂಭಾಷಣೆಯ ಮೂಲಕ ಸಾಮಾಜಿಕ ವ್ಯವಸ್ಥೆಗೆ ಕನ್ನಡಿಯಂತಿರುವುದು ಸ್ತುತ್ಯಾರ್ಹ. ಈ ನಾಟಕದ ವಿಷಯ ವಸ್ತುಗಳು ವಾಸ್ತವಿಕತೆಗೆ ಹೇಗೆ ಹತ್ತಿರವಾಗಿವೆ? ಹಾಗೂ ಇದರಲ್ಲಿನ ವೈಚಾರಿಕತೆಯ ಓದುಗರಿಗೆ ಚಿಂತನಾತ್ಮಕವಾಗಿ ಹೇಗೆ ಅನಾವರಣವಾಗಿದೆ? ಎಂಬಂತಹ ಅಂಶಗಳನ್ನು ಚರ್ಚಾತ್ಮಕವಾಗಿ ಚಿನ್ನಸ್ವಾಮಿ ವಿವರಿಸಿರುವ ಬಗೆಯೂ ಗಮನಾರ್ಹ. ಬುದ್ಧನ ವೈರಾಗ್ಯ ಜೀವನಕ್ಕೆ ರೋಗಿ, ಮುದುಕ, ಸಾವು, ಸನ್ಯಾಸಿಯೊಂದೇ ಕಾರಣವಲ್ಲ. ಜೀವ, ಜಲ, ನೆಲವೂ ಕಾರಣವಾಗಿರುವುದು. ನಾಟಕಕಾರರಾದ ಮ.ನ.ಜವರಯ್ಯನವರು ಈ ಅಂಶಗಳೊಂದಿಗೆ ಬುದ್ಧನ ಕುರಿತಾದ ನಾಟಕವನ್ನು ರಚಿಸಿದ್ದಾರೆ. ಈ ನಾಟಕದೊಂದಿಗೆ ಅಶ್ವಘೋಷನ ‘ಬುದ್ಧ ಚರಿತೆ’ ಕುವೆಂಪು ಅವರ ‘ಮಹಾರಾತ್ರಿ’ ಕಾರಂತರ ‘ಕಿಸಾಗೋತಮಿ’, ಮಾಸ್ತಿಯವರ ‘ಯಶೋಧರಾ’ ಮೊದಲಾದ ಕೃತಿಗಳೊಂದಿಗೆ ಚಿನ್ನಸ್ವಾಮಿ ತೌಲನಿಕವಾಗಿ ವಿವೇಚಿಸಿದ್ದಾರೆ. ಹಾಗೆಯೇ ಈ ನಾಟಕದ ಆಶಯ ನುಡಿಯಾದ “ಜೀವ ಜೀವಗಳ ನಡುವಿನ ಪ್ರೀತಿ ಇಲ್ಲದಿದ್ರೆ ಜೀವ ಸಂಕುಲವೇ ಗಂಡಾಂತರಕ್ಕೀಡಾಗುತ್ತದೆ” ಎಂಬ ಮಾತು ಆರೋಗ್ಯಕರ ಸಮಾಜಕ್ಕೆ ಸಾಕ್ಷಿಯಾಗಿದೆ ಎಂಬುದರ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಮೈಸೂರು-ಚಾಮರಾಜನಗರ ಭಾಗದಲ್ಲಿ ಶೋಷಿತರ ಧ್ವನಿಯಾಗಿದ್ದ ಮುಳ್ಳೂರು ನಾಗರಾಜರ ಸಾಹಿತ್ಯ ಮತ್ತು ಬದುಕನ್ನು ಸಮಯೋಚಿತವಾಗಿ ಚಿತ್ರಿಸಿರುವುದು ಮಹತ್ವಪೂರ್ಣ. “ನೆಲದ ಜೋಗುಳ” ಎಂಬ ಮಹಾಕಾವ್ಯವನ್ನು ಸುದೀರ್ಘವಾಗಿ ಚರ್ಚಿಸಿದ್ದರೂ, ವರ್ತಮಾನದ ಸಾಂಸ್ಕøತಿಕ ಅವಶ್ಯಕತೆಯ ಹಿನ್ನಲೆಯಲ್ಲಿ ಪುನರ್ ವಾಖ್ಯಾನಕ್ಕೊಳಪಟ್ಟಿದೆ. ಈ ಕಾವ್ಯದಲ್ಲಿನ ಚಿತ್ರಣ ಪೌರಾಣಿಕವಾಗಿದ್ದರೂ, ಸಮಕಾಲೀನ ದಲಿತ ಚಿತ್ರಣದ ಮೂಲಕ ಅನುಸಂಧಾನ ಮಾಡಲಾಗಿದೆ ಎಂಬುದನ್ನು ಚಿನ್ನಸ್ವಾಮಿ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಅದೇ ರೀತಿಯಲ್ಲಿ ದಲಿತ ಸಾಹಿತ್ಯದ ಮೇರು ಕವಿಯಾದ ಡಾ.ಸಿದ್ಧಲಿಂಗಯ್ಯನವರ ಬದುಕು-ಬರಹ, ಹೋರಾಟ, ಸಂಘಟನೆಗಳನ್ನೂ ಸ್ಥೂಲವಾಗಿ ಕಟ್ಟಿಕೊಟ್ಟಿದ್ದಾರೆ. ತುಕಾರಾಂ ಅವರ ‘ಕಳ್ಳಬೂಸ’ ಕಥೆಯಲ್ಲಿ ಮೂಡಿಬಂದಿರುವ ಮಾನವೀಯತೆ ಮತ್ತು ಪರಿಸರ ಪ್ರಜ್ಞೆಯನ್ನು ವಿವರಿಸಿದ್ದಾರೆ. ಈ ಕಳ್ಳಬೂಸ ಎಂಬ ನಾಮಸೂಚಿ ಬಂದಿರುವುದರ ಸೂಕ್ಷ್ಮತೆಯನ್ನು ಕುತೂಹಲಕರವಾದ ರೀತಿಯಲ್ಲಿ ಬಯಲು ಮಾಡಿದ್ದಾರೆ. ಈ ಹೆಸರು ಮೇಲ್ವರ್ಗದವರ ದೌರ್ಜನ್ಯದ ಸಂಕೇತವಾಗಿರಬಹುದು ಹಾಗೂ ತಳವರ್ಗದವರ ಹಸಿವನ್ನು ನೀಗಿಸುವ ಮಾಧ್ಯಮವಾಗಿ ಕಾಣುವ ರೀತಿಯಾಗಿರಬಹುದು ಎಂಬ ವಿಚಾರಗಳನ್ನು ನಿರೂಪಿಸಿದ್ದಾರೆ.

Related Books