ಪ್ರತಿ ಮಾತನ್ನೂ ಮತ್ತೆ ಮತ್ತೆ ಯೋಚಿಸಿಯೇ ಆಡುವ ಹಿರಿಯ ಲೇಖಕ, ಚಿಂತಕ ದೇವನೂರ ಮಹಾದೇವ ಅವರ ಹೊಸ ಕೃತಿ ʻಆರ್‍ಎಸ್‍ಎಸ್ ಆಳ ಮತ್ತು ಅಗಲʼ. ಆರ್ ಎಸ್ ಎಸ್ ಎಂಬ ಸಂಸ್ಥೆಯ ಕುರಿತು ಅದರ ಸರಸಂಘಚಾಲಕರೇ ಆಗಿದ್ದ ಗೋಳ್ವಾಲ್ಕರ, ಸಾವರ್ಕರ ಅವರ ಬರಹಗಳಿಂದಲೆ ಎತ್ತಿಕೊಂಡ ಅಂಕಿಅಂಶಗಳೊಂದಿಗೆ ಈ ಕೃತಿಯಲ್ಲಿ ದೇವನೂರರು ಮಾತನಾಡಿದ್ದಾರೆ. ಅವರ ಎಂದಿನ ಮನಮುಟ್ಟುವ ಶೈಲಿ, ಸಾಮಾಜಿಕ ಕಥನವನ್ನು ಕಡೆದು ನಿಲ್ಲಸಿಡುವ ಅಂತಃಕರಣದ ದನಿ ಇಲ್ಲಿದೆ. ಅವರು ಎತ್ತಿರುವ ಪ್ರಶ್ನೆಗಳು ಈ ಕಾಲದ ಪ್ರಶ್ನೆಗಳಾಗಿ ಗಾಢವಾಗುತ್ತವೆ. ಇನ್ನು, ಪುಸ್ತಕದ ಬಗ್ಗೆ ಸ್ವತಃ ಲೇಖಕರೇ ಹೇಳುವಂತೆ, “ಆರ್‌ಎಸ್‌ಎಸ್‌ನ నిజ ಸ್ವರೂಪವನ್ನು ಮತ್ತು ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿ ಜನರ ಮುಂದಿಡುವ ಒಂದು ಪ್ರಯತ್ನ ಇದು. ಈ ದೇಶವನ್ನು ಆಎಸ್‌ಎಸ್ ಎತ್ತ ಒಯ್ಯಲು ಶ್ರಮಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮತ್ತು ಈ ಸಂಘಟನೆಯ ಬಗ್ಗೆ ಇರುವ ಗ್ರಹಿಕೆ ಹಾಗೂ ಆ ಸಂಘಟನೆಯ ನಿಜ ಬಣ್ಣದ ನಡುವೆ ಇರುವ ಅಂತರವನ್ನು ಜನರಿಗೆ ಮನದಟ್ಟು ಮಾಡಬೇಕೆಂಬುದರ ದಿಕ್ಕಲ್ಲಿ ಒಂದು ಹೆಜ್ಜೆ.
ನಮ್ಮ ಜಾನಪದ ಕಥೆಗಳಲ್ಲಿ ಏಳು ಸಮುದ್ರಗಳ ಆಚೆಯಲ್ಲಿರುವ ಗುಹೆಯಲ್ಲಿ ತನ್ನ ಪ್ರಾಣವನ್ನು ಗಿಣಿ ರೂಪದಲ್ಲಿ ಬಚ್ಚಿಟ್ಟು, ಲೋಕಕ್ಕೆ ಬಂದು ಅವಾಂತರ ಮಾಡುತ್ತಾ ಯದ್ವಾತದ್ವಾ ವರ್ತಿಸುವ ಮಾಯಾವಿಯ ಕತೆ ಬರುತ್ತದೆ. ಅವನು ಮೊದಲೇ ಜೊತೆಗೆ ವೇಷಧಾರಿ. ಅವನ ರೂಪಗಳು ಅನೇಕ. ವಶೀಕರಣದಲ್ಲೂ ನಿಸ್ಸಿಮ. ಅವನಿಗೆ ಏನೇ ಮಾಡಿದರೂ ಏನೂ ಆಗುವುದಿಲ್ಲವಂತೆ. ಯಾಕೆಂದರೆ ಅವನ ಪ್ರಾಣ ಯಾವುದೋ ಗುಹೆಯಲ್ಲಿ ಗಿಣಿ ರೂಪದಲ್ಲಿ ಸುರಕ್ಷಿತವಾಗಿರುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಏನಾದರೂ ಮಾಡಲೇಬೇಕು ಎಂದರೆ ಮೊದಲು ಅದರ ಪ್ರಾಣ ಎಲ್ಲಿದೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ. ಹುಡುಕಬೇಕಾಗಿದೆ. ಅಂತಹದ್ದೊಂದು ಪ್ರಯತ್ನದ ಭಾಗವಾಗಿ ಆರ್‌ಎಸ್‌ಎಸ್‌ನ ಗತಕಾಲದ ಪುರಾತನ ವಾಸನೆಯ ಬಾವಿಗೆ ಇಣುಕಿ ನೋಡಿದೆ. ಕಂಡ ದೃಶ್ಯ ಘೋರವಾಗಿದೆ. ಈ ಪುಟಾಣಿ ಪುಸ್ತಿಕೆಯಲ್ಲಿರುವುದು ಅದರ ಒಂದು ತುಣುಕು ಅಷ್ಟೆ. ಮುಂದೆ ವಿಸ್ತೃತವಾಗಿ ಬರೆಯುವವರಿಗೆ ಇದು ಒಂದಿಷ್ಟು ಪ್ರೇರಣೆಯಾದರೂ ಅದೇ ಸಾರ್ಥಕ” ಎಂದು ಹೇಳಿದ್ದಾರೆ.
ಪುಸ್ತಕದ ಮುನ್ನುಡಿಯಲ್ಲಿ ಮೊದಲ ಮಾತು, ಆರ್.ಎಸ್.ಎಸ್ ಪ್ರಾಣ ಎಲ್ಲೆಲ್ಲಿದೆ, ಹೀಗೆಲ್ಲಾ ದಾಖಲೆಗಳು ಮಾತಾಡುತ್ತಿವೆ!, ಇಂದು ವರ್ತಮಾನದಲ್ಲಿ.., ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಮರ್ಮ ಹಾಗೂ ಈಗ ಶೀರ್ಷಿಕೆಗಳಲ್ಲಿ ಲೇಖನಗಳಿವೆ.
©2024 Book Brahma Private Limited.