ಇಂದು ಮೀಸಲಾತಿಯ ಪರ ವಿರುದ್ಧ ಚರ್ಚೆ ತೀವ್ರವಾಗುತ್ತಿದೆಯೇ ಹೊರತು, ಅಷ್ಟೇ ಆವೇಶದಲ್ಲಿ ಜಾತಿ ಪದ್ಧತಿಯ ಬಗ್ಗೆ ಚರ್ಚೆಗಳಾಗುತ್ತಿಲ್ಲ. ಇಂದು ಮೀಸಲಾತಿಯ ಕುರಿತಂತೆ ನಾಚಿಕೆ ಪಡುವವರು, ಜಾತಿಯ ಅಸಮಾನತೆಯ ಕುರಿತಂತೆ ನಾಚಿಕೆ ಪಡುವುದು ತೀರಾ ಕಡಿಮೆ. ಎಲ್ಲಿಯವರೆಗೆ ಜಾತಿ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರುತ್ತದೆ. ಮೀಸಲಾತಿ ಅಳಿಸುವುದಕ್ಕೆ ಇರುವ ಒಂದೇ ದಾರಿಯೆಂದರೆ ಜಾತಿ ಅಸಮಾನತೆಯನ್ನು ಇಲ್ಲವಾಗಿಸಿ, ಕೆಳಜಾತಿಯ ಜನರನ್ನು ಸಬಲರನ್ನಾಗಿ ಮಾಡುವುದು. ದುರಂತವೆಂದರೆ ಇಂದು ದುರ್ಬಲ ಜಾತಿಗಳಿಗಾಗಿ ನೀಡುವ ಮೀಸಲಾತಿಯನ್ನು ಸಬಲ ಜಾತಿಗಳು ತಮ್ಮ ಜನಸಂಖ್ಯೆಯನ್ನು ಮತ್ತು ರಾಜಕೀಯ ಶಕ್ತಿಯನ್ನು ಇಟ್ಟುಕೊಂಡು ತಮ್ಮದಾಗಿಸಲು ಯತ್ನಿಸುತ್ತಿವೆ. ಈ ಎಲ್ಲ ಹಿನ್ನೆಲೆಗಳನ್ನು ಇಟ್ಟುಕೊಂಡು ಪ್ರೊ. ಎಚ್. ಲಿಂಗಪ್ಪ ಅವರು 'ಮೀಸಲಾತಿ ತಲ್ಲಣ' ಕೃತಿಯನ್ನು ಬರೆದಿದ್ದಾರೆ. ಮೀಸಲಾತಿ ತಲ್ಲಣ ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಮೊದಲನೆಯದು ಪೀಠಿಕೆಯ ರೂಪದಲ್ಲಿದ್ದರೆ ಇದಾದ ಬಳಿಕ ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಸಾಮಾಜಿಕ ಸಂಘರ್ಷಗಳನ್ನು ಇಟ್ಟುಕೊಂಡು ಮೀಸಲಾತಿಯ ಒಳ ರಾಜಕೀಯಗಳನ್ನು ಅವರು ತೆರೆದಿಡುವ ಪ್ರಯತ್ನ ನಡೆಸುತ್ತಾರೆ. ಈ ಕೃತಿಯು ಕೇವಲ ಮೀಸಲಾತಿಯ ಅಂಕಿಸಂಕಿಗಳಿಗಷ್ಟೇ ಸೀಮಿತವಾಗದೆ, ಶೋಷಿತ ತಳಸಮುದಾಯ ಎದುರಿಸುತ್ತಾ ಬಂದಿರುವ ಬೇರೆ ಬೇರೆ ರೀತಿಯ ದೌರ್ಜನ್ಯಗಳನ್ನೂ ವಿಶ್ಲೇಷಿಸಲು ಪ್ರಯತ್ನಿಸುತ್ತದೆ.
©2024 Book Brahma Private Limited.