ಡಾ. ಎಫ್. ಟಿ. ಹಳ್ಳಿಕೇರಿ ಮತ್ತು ಎನ್.ಬಿ. ವಿರುಪಾಕ್ಷಿ ಅವರು 2012ರಲ್ಲಿ ಕಲಬುರ್ಗಿ ಅವರ ಕುರಿತು ’ಮಾರ್ಗದ ಮಹಾವಾಕ್ಯಗಳು’ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದರು. ’ಹಾದಿಯ ಹೆಜ್ಜೆಗಳು’ ಕೃತಿಯಲ್ಲಿದ್ದ ಲೇಖನಗಳ ಜೊತೆಗೆ ಇನ್ನೂ 13 ಹೊಸ ವಿಚಾರಗಳನ್ನು ಅವರು ಇಲ್ಲಿ ಪ್ರಕಟಿಸಿದ್ದಾರೆ.
ಕನ್ನಡ ಸಂಶೋಧನ ಕ್ಷೇತ್ರದ ಬಹುದೊಡ್ಡ ಹೆಸರು ಎಂ.ಎಂ.ಕಲಬುರ್ಗಿ. ಕನ್ನಡ ಭಾಷೆ, ಸಾಹಿತ್ಯ, ಶಾಸನ, ಹಸ್ತಪ್ರತಿ, ಗ್ರಂಥಸಂಪಾದನೆ, ಚರಿತ್ರೆ, ಧರ್ಮ, ಜನಪದ ಹೀಗೆ ಹತ್ತುಹಲವು ವಿಷಯಗಳ ಕುರಿತು ಕೈಕೊಂಡ ಸಂಶೋಧನೆ ವೈವಿಧ್ಯಮಯ. ವಿಶೇಷವಾಗಿ ವಚನ ಸಾಹಿತ್ಯ, ಲಿಂಗಾಯತ ಸಂಸ್ಕೃತಿ, ಸ್ಥಳೀಯ ಚರಿತ್ರೆ ಹಾಗೂ ಕುರುಬ ಸಮಾಜದ ಬಗೆಗಿನ ಅವರ ಶೋಧಗಳು ಸಂಶೋಧನ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಹೀಗಾಗಿ ಸಂಶೋಧನೆಯ ಹಾದಿಯಲ್ಲಿ ಅನೇಕ ಅಗ್ನಿಕುಂಡಗಳನ್ನು ತುಳಿಯುತ್ತ ಕಣ್ಣಮುಂದಿನ ಬೆಳಕಿಗಾಗಿ ಹಂಬಲಿಸುತ್ತ ಮಹಾಮಾರ್ಗ ನಿರ್ಮಿಸಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಡಾ. ಕಲಬುರ್ಗಿ ಅವರು ನಿರಂತರವಾಗಿ ಕೈಕೊಂಡ ಸಂಶೋಧನೆಯ ಫಲವಾಗಿ ನೂರಕ್ಕೂ ಹೆಚ್ಚು ಕೃತಿಗಳು ಹಾಗೂ ಐದನೂರಕ್ಕೂ ಹೆಚ್ಚು ಸಂಶೋಧನ ಸಂಪ್ರಬಂಧಗಳು ಪ್ರಕಟವಾಗಿವೆ. ಮಾರ್ಗ ಹೆಸರಿನ ಆರು ಸಂಪುಟಗಳು ಅವರ ಸಂಶೋಧನೆಯ ಸಾಧನೆ ಮತ್ತು ವ್ಯಾಪಿಗೆ ಹಿಡಿದ ಕನ್ನಡಿಯಂತಿವೆ. ಈ ಎಲ್ಲಾ ಕೃತಿ ಹಾಗೂ ಸಂಪ್ರಬಂಧಗಳಲ್ಲಿನ ಚಿಂತನನಿಷ್ಟ ವ್ಯಾಖ್ಯೆಗಳನ್ನು ಹೊರತೆಗೆದು ವಿಷಯಾನುಸಾರ ವರ್ಗೀಕರಿಸಿ, “ಮಾರ್ಗದ ಮಹಾವಾಕ್ಯಗಳು” ಎಂಬ ಈ ಕೃತಿಯಲ್ಲಿ ಕ್ರಮಬದ್ದವಾಗಿ ಅಳವಡಿಸಲಾಗಿದೆ. - ಡಾ.ಎಫ್.ಟಿ.ಹಳ್ಳಿಕೇರಿ ಹಾಗೂ ಎನ್. ವಿರೂಪಾಕ್ಷಿ ಅವರು ಈ ಸಂಪುಟವನ್ನು ವ್ಯವಸ್ಥಿತವಾಗಿ ಸಂಯೋಜಿಸಿದ್ದಾರೆ. ಸಂಶೋಧನೆ, ಹಸ್ತಪ್ರತಿ-ಗ್ರಂಥಸಂಪಾದನೆ, ಶಾಸನ-ಪುರಾತತ್ಯ, ಪ್ರಾಚೀನ ಸಾಹಿತ್ಯ, ನಾಮವಿಜ್ಞಾನ, ಚರಿತ್ರೆ, ಸಮಾಜ-ಪರಿಸರ ಹೀಗೆ ಇಪ್ಪತ್ತಾರು ಭಾಗಗಳಲ್ಲಿ ವಿಚಾರಪೂರ್ಣವಾದ ಮಹಾವಾಕ್ಯಗಳು ಇಲ್ಲಿ ಅಡಕಗೊಂಡಿವೆ. ಇಲ್ಲಿನ ಪ್ರತಿಯೊಂದು ಮಹಾವಾಕ್ಯಕ್ಕೂ ತನ್ನದೇ ಆದ ಅನನ್ಯತೆಯಿದೆ;ಅಸ್ತಿತ್ವವಿದೆ. ಹೀಗಾಗಿ ಸಂಶೋಧಕರಿಗೆ ವಿದ್ಯಾರ್ಥಿಗಳಿಗೆ ಈ ಸಂಪುಟವು ಸಹಾಯಕಾರಿಯಾಗುತ್ತದೆ.
©2024 Book Brahma Private Limited.