‘ದೇವರು’ ಹಿರಿಯ ಲೇಖಕ ಎ.ಎನ್. ಮೂರ್ತಿರಾವ್ ಅವರ ವೈಚಾರಿಕ ಬರಹಗಳ ಸಂಕಲನ. ದೇವರ ಅಸ್ತಿತ್ವದ ಕುರಿತು ಒಬ್ಬೊಬ್ಬರದೂ ಒಂದೊಂದು ಅಭಿಪ್ರಾಯ. ಇದು ಪುರಾತನ ಕಾಲದಲ್ಲಿಂದಲೂ ನಡೆದುಬಂದಿರುವ ಚರ್ಚೆ. ಆದರೆ ಈ ಪ್ರಶ್ನೆಗೆ ಸ್ಪಷ್ಟ ಉತ್ತರವೆಂಬುದಿಲ್ಲ. ಇದೇ ಪ್ರಶ್ನೆಯನ್ನು ಮುಂದಿಟ್ಟು ದೇವರ ಅಸ್ತಿತ್ವ, ಸ್ವರೂಪದ ಬಗ್ಗೆ ವಿಮರ್ಶಿಸಿ ಬರೆದ ಕೃತಿಯೇ “ದೇವರು”. ಮಾನವರಲ್ಲಿ ದೇವರ ಬಗ್ಗೆ ಬೆಳೆದ ಕಲ್ಪನೆ, ಆಚರಣೆ, ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ ಇವರ ಬಗ್ಗೆ ಪ್ರಚಲಿತ ಇರುವ ಕಥೆಗಳ ಮೂಲಕ ತೆಗೆದ ಗುಣಾವಾಗುಣಗಳಿಂದ ಇವರು ನಮಗೆ ಬೇಕಿರುವ ದೇವರಲ್ಲವೆಂದು, ನಮಗೆ ಬೇಕಿರುವುದು ಭಕ್ತಿಯನ್ನೂ ಬೇಡದ ಪ್ರೇಮ ಸ್ವರೂಪನಾದ ದೇವರು, ಅಂತಹ ದೇವರಿದ್ದರೆ ಒಳ್ಳೆಯದೆಂದು ಆದರೆ ಇರದಿರುವುದು ವಿಷಾದನೀಯವೆಂದು, ಉಪನಿಷತ್ತಿನ ಬ್ರಹ್ಮದ ಮಿತಿಯನ್ನು ತಿಳಿಸಿ ಕೊನೆಗೆ “ದೇವರೆಂದರೆ ಮೌಲ್ಯಗಳು, ಅವುಗಳ ಧ್ಯಾನ, ಕಾರ್ಯಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರುವುದೇ ಧರ್ಮ”ಎಂದು ಕಂಡುಕೋಳ್ಳುವ ಮೂಲಕ ಕೃತಿಯನ್ನು ಮುಗಿಸಿದ್ದಾರೆ. ಆಸ್ತಿಕರಿಗೆ ನೋವುಂಟಾಗದಂತೆ ಕೃತಿ ರಚಿಸಿರುವುದು ಮೂರ್ತಿರಾಯರ ಹೆಗ್ಗಳಿಕೆ. ಅಸ್ತಿಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ತುಂಬಾ ಅಚ್ಚುಕಟ್ಟಾಗಿ ಮಾಡಿರುವುದು ಈ ಕೃತಿಯಲ್ಲಿ ಕಂಡುಬರುತ್ತದೆ.
©2024 Book Brahma Private Limited.