ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್ ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು.
ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1927), ಅಸಿಸ್ಟೆಂಟ್ ಪ್ರೊಫೆಸರ್ (1940) ಆಗಿ ಕಾರ್ಯನಿರ್ವಹಿಸಿದ್ದರು. ೧೯೪0ರಿಂದ ೧೯೪೩ವರೆಗೆ ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ (1940-43), ಆಕಾಶವಾಣಿಯ ಸಹಾಯಕ ನಿರ್ದೇಶಕ (1943), ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥ (1948) ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, 1955ರಲ್ಲಿ ನಿವೃತ್ತಿ ಹೊಂದಿದರು.
ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ (1955), ಪರಿಷತ್ತಿನ ಅಧ್ಯಕ್ಷ (1954-560) ಆಗಿದ್ದರು. ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ಟ್ ಕನ್ನಡ ಶಾಖೆಯ ಸಂಚಾಲಕ ಅಧ್ಯಕ್ಷರಾಗಿ 4 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೆಂಟ್ರಲ್ ಪ್ರೋಗ್ರಾಂ ಅಡ್ವೈಸರಿ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಪರ ವಯಸ್ಕನ ಅಮೇರಿಕ ಯಾತ್ರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಚಿತ್ರಗಳು ಮತ್ತು ಪತ್ರಗಳು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(1977)), ಸಮಗ್ರ ಸಾಹಿತ್ಯಕ್ಕೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಡಿ.ಲಿಟ್. ಪ್ರಶಸ್ತಿ, ‘ದೇವರು’ ಗ್ರಂಥಕ್ಕೆ ಪಂಪ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ. ಕೈವಾರಗಳಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 56ನೇ ಕನ್ನಡ ಸಾಹಿತ್ಯ ಸಮ್ಮೇಳನ (1984) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎ.ಎನ್. ಮೂರ್ತಿರಾವ್‍ರು ತಮ್ಮ 104ನೇ ವಯಸ್ಸಿನಲ್ಲಿ 2003ರ ಆಗಸ್ಟ್ 23ರಂದು ನಿಧನರಾದರು.
ಹಗಲುಕನಸುಗಳು, ಅಲೆಯುವ ಮನ, ಮಿನುಗು ಮಿಂಚು (ಪ್ರಬಂಧ ಸಂಕಲನ), ಬಿಎಂಶ್ರೀ, ಪೂರ್ವಸೂರಿಗಳೊಡನೆ, ಶೇಕ್ಸ್ ಪಿಯರ್, ಮಾಸ್ತಿಯವರ ಕಥೆಗಳು (ವಿಮರ್ಶಾ ಕೃತಿಗಳು), ಆಷಾಢಭೂತಿ, ಮೋಲಿಯೇರನ ೨ ನಾಟಕಗಳು, ಚಂಡಮಾರುತ(ನಾಟಕಗಳು), ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು `ದಿ ರಿಟರ್ನ್ ಟು ದಿ ಸಾಯಲ್’ ಎಂದು ಅನುವಾದಿಸಿದ್ದಾರೆ.