ರಂಗಕರ್ಮಿ, ಸಾಹಿತಿ, ಲೇಖಕ, ನಿವೃತ್ತ ಪ್ರಾಧ್ಯಾಪಕ ಪ್ರೊ ರಾಮದಾಸ್ ಅವರ ಬರವಣಿಗೆಗಳ ಸಂಕಲನ ’ದಾಸ ಭಾರತ’.
ಕೃತಿಯ ಕುರಿತು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿರುವ ಮುಖ್ಯ ಮಾತುಗಳು ಹೀಗಿವೆ: ’ವಾಸ್ತವಕ್ಕೆ ವಾಸ್ತವವಾದಿಯಾಗಿ ಸ್ಪಂದಿಸುವುದಿಲ್ಲ; ಆಳವಾದ ಹೃದಯವಂತಿಕೆಯಿಂದ, ಮುಗ್ಧತೆಯಿಂದ ಸ್ಪಂದಿಸುವುದು, ಒಳ್ಳೆಯ ಕಲೆಗೆ ಮುಗ್ಧತೆಯ ಒಡನಾಟ ಬೇಕು! ಒಮ್ಮೆ ಮಹಾಕಾವ್ಯವೊಂದರ ರಚನೆಯಾದ ಮೇಲೆ ರಚನೆಯಾಗಿ ಅದು ಸಮುದಾಯದ ಭಾಗವಾಗಿ ಸಮುದಾಯದ ಸುಪ್ತಮನದಲ್ಲಿ ಅನನ್ಯವಾಗಿ ಸೇರಿಕೊಂಡ ಮೇಲೆ ಮುಂದಿನ ಕವಿಗಳ ಸೃಷ್ಟಿಶೀಲತೆಯ ದಾರಿ ಎಂದರೆ-ಮತ್ತೆ ಈ ಮಹಾಕಾವ್ಯದ ಬಸಿರಿನಿಂದ ತುಂಡು ತುಣುಕುಗಳನ್ನು ಹಿಸಿದು, ಯುಕ್ತ-ಕಂಡಂತೆ ಬೆಳೆಸುತ್ತ ಹೋಗುವುದು. ಒಂದೊಂದು ಪಾತ್ರಗಳನ್ನು ಕೇಂದ್ರಸ್ಥಾನದಲ್ಲಿರಿಸುತ್ತ ಅವುಗಳ ದೃಷ್ಟಿಕೋನದ ಸುತ್ತ ಕಥನವನ್ನು ಬೆಳೆಸುತ್ತ ಹೋಗುವುದು. ಇದು ತುಪ್ಪದ ಕೊಡದಲ್ಲಿ ತುಣುಕುಗಳನ್ನು ಇನ್ನೊಮ್ಮೆ ಬೆಳೆಯಿಸಿದಂತೇ ಕವಿ ಪ್ರತಿಭೆ ಎಂಬ ತುಪ್ಪದ ಕೊಡ! ಪಾತ್ರಗಳನ್ನು ಮತ್ತೆ ಮತ್ತೆ ಕಟ್ಟುವುದು; ಮುರಿದು ಕಟ್ಟುವುದು; ಬಗೆಬಗೆಗಳಲ್ಲಿ ಕಟ್ಟುವುದು; ಕಟ್ಟುವಾಗ ಮುರಿಯುವ ಹೊಳಹು; ಮುರಿಯುವಾಗ ಕಟ್ಟುವ ಹೊಳಹು-ಇದು ಅದೃಷ್ಟದ ಜೊತೆಗಿನ ಆಟ. ಆಟವಾಡುತ್ತಲೇ ಅದೃಷ್ಟವನ್ನು ತಮಗೆ ಬೇಕಾದಂತೆ ರೂಪಿಸುವ ಆಟವೂ ಹೌದು, ಕ್ಷಮೆ ಇರಲಿ-ನನಗೊಮೊಮ್ಮೆ ಅನ್ನಿಸುತ್ತದೆ; ತುಪ್ಪದ ಕೊಡದಲ್ಲಿ ಬೆಳೆದ ನೂರೊಂದು ಮಕ್ಕಳಲ್ಲಿ ವಾಸ್ತವವಾದವೂ ಒಂದು ಎಂದು! ಈ ಮಾತನ್ನು ಇನ್ನಷ್ಟು ವಾಸ್ತರ್ವಗೊಳಿಸಬೇಕೆಂದರೆ, ವಾಸ್ತವವಾದವು ನೂರೊಂದು ಮಕ್ಕಳಲ್ಲಿ ಎಲ್ಲರಿಗಿಂತ ಭಿನ್ನವಾಗಿರುವ-ವಿಕರ್ಣನಂತೆ! ನಮ್ಮ ರಾಮದಾಸರು ತಮ್ಮ 'ದಾಸಭಾರತ'ವನ್ನು ಬರೆಯುತ್ತ ಬರೆಯುತ್ತ ತಮ್ಮನ್ನು ತಾವೇ ಮೀರುತ್ತಿದ್ದಾರೆ; ತಮ್ಮ ವಾಸ್ತವವಾದವನ್ನೂ ಮೀರುತ್ತಿದ್ದಾರೆ ಎನ್ನಿಸುತ್ತದೆ. 'ಜಯ' ಮತ್ತೆ ಮತ್ತೆ ಜನ್ಮವೆತ್ತುತ್ತಲೇ ಇರುತ್ತಾಳೆ ಎನ್ನುತ್ತಾರೆ. ಆದರೂ ಎಲ್ಲ ಅರ್ಥವಾಯಿತು ಎನ್ನುವಂತಿಲ್ಲ-ಎನ್ನುತ್ತಾರೆ. ಅರ್ಥವಾಗಲಿಲ್ಲ ಎನ್ನುವ ಮಾತು ಯಾವುದು ಅರ್ಥವಾಗಲಿಲ್ಲವೋ ಅದನ್ನು ಪ್ರೀತಿಸಲು ಎರವಾಗಬೇಕು ಎನ್ನುವ ಮಾತಂತೂ ಅಲ್ಲ ಎನ್ನುವುದು ಅವರಿಗೆ ತಿಳಿದುಬಿಟ್ಟಿದೆ. ಪ್ರತ್ಯುತ, ಅರ್ಥವಾಗದೆ ಇದ್ದುದು ಆ ಕಾರಣದಿಂದಲೇ, ನಮ್ಮಲ್ಲಿ ಇನ್ನಷ್ಟು ಪ್ರೀತಿಯನ್ನು ಉಂಟುಮಾಡುತ್ತಿದೆ ಎನ್ನುವುದನ್ನೂ ರಾಮದಾಸರು ಅನುಭವಿಸುತ್ತಿದ್ದಾರೆ. ದಾಸಭಾರತದ ಕೊನೆಯ ಸಾಲು ಹೀಗಿದೆ: “ಜಯ ಮತ್ತೆ ಮತ್ತೆ ಜನ್ಮವೆತ್ತುತ್ತಲೇ ಇರುತ್ತಾಳೆ ಅರ್ಥವಾಗದ ಬದುಕು ಸಾಗುತ್ತಿರುತ್ತದೆ!" ಈ ಸಾಲಿಗೆ, ಅರ್ಥದ ಹಂಗಿಲ್ಲದೆ ಎಂಬೆರಡು ಪದಗಳನ್ನು ಸೇರಿಸಿ, ಅರ್ಥವಾಗದ ಬದುಕು ಅರ್ಥದ ಹಂಗಿಲ್ಲದೆ ಸಾಗುತ್ತಿರುತ್ತದೆ ಎಂದು ಗೆಳೆಯ ರಾಮದಾಸರಿಗೆ ಅಭಿನಂದನೆಗಳನ್ನು ಹೇಳುತ್ತೇನೆ...
©2024 Book Brahma Private Limited.