ಹಳ್ಳಿಯ ಹೊಲದಲ್ಲಿ ಕೆಲಸಕ್ಕೆ ಹೊತ್ತಾರೆ ಹೊರಟ ರೈತಾಪಿ ಜನ ಮಧ್ಯಾಹ್ನದ ಹಸಿವ ನೀಗಲು ಹೊತ್ತೊಯ್ಯುವುದೇ ರೊಟ್ಟಿ ಬುತ್ತಿ. ರೊಟ್ಟಿಬುತ್ತಿ ದೇಹದ ಆಯಾಸ ಕಳೆದರೆ, ಜ್ಞಾನ ಬುತ್ತಿ ಮನಸಿನ ಜಾಡ್ಯ ಕಳೆವುದು. 100 ಚಿಂತನಗಳ ಕೃತಿಯೆ ರೊಟ್ಟಿಬುತ್ತಿ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಈ ಕೃತಿ ನಿತ್ಯ ಜೀವನದ ಜಂಜಾಟಗಳಿಗೆ, ಬೇಸರ ದುಃಖ ದುಮ್ಮಾನಗಳಿಗೆ, ಜಗಳ ತಂಟೆ ತಾಪತ್ರಯಗಳಿಗೆ, ಆಸರ ಬೇಸರಗಳಿಗೆ, ಕೆಡುಕು ಒಡಕುಗಳಿಗೆ, ಆಸೆ ನಿರಾಸೆ, ಆಶಾಭಂಗಗಳಿಗೆ, ಕಸರು ಜಡ್ಡು ದರಿದ್ರ ದುರವಸ್ತೆಗಳಿಗೆ, ದುಷ್ಟ ಕಷ್ಟ ಕರುಬು ಕರ್ಮಗಳಿಗೆ, ಅವ್ಯವಸ್ತೆ ಅಸಂಸ್ಕಾರ ಆಲಸಿ ಅರಾಜಕ ಪೀಡನೆಗಳ ಬಗೆಗೆ ಕಾರಣಗಳ ಸಹಿತ ಪರಿಹಾರ ದಾರಿಯನ್ನು ತೋರಿಸುತ್ತದೆ. ಮಾರ್ಗದರ್ಶಿ ಸೂತ್ರಗಳು ಈ ಕೃತಿಯಲ್ಲಿದೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಿರಿಗೆರೆ ಬೃಹನ್ಮಠದ ಶಾಖಾಮಠವಾದ ಸಾಣೇಹಳ್ಳಿಯ ಪೀಠಾಧ್ಯಕ್ಷರಾಗಿರುತ್ತಾರೆ. ನಿತ್ಯ ನಾನಾ ಆಧ್ಯಾತ್ಮಿಕ, ಶಿಕ್ಷಣಿಕ, ಸಾಮಾಜಿಕ ಮೌಲ್ಯ ನಿರ್ಮಾಣ, ರೈತಾಪಿ ಜನಜಾಗೃತಿ, ಮಾಧ್ಯಮ ಸಂವಹನ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು ಸಿಗುವ ತುಸು ಬಿಡುವುಗಳ ಸಮಯದಲ್ಲಿ ಬೆಳಕಿನ ಕಿಡಿಯಂತ ಚಿಂತನ ಮಂಥನ ನಾಟಕ ವಚನ ಕೃತಿಗಳನ್ನ ರಚಿಸಿರುತ್ತಾರೆ. ಅನ್ನ ಆಶ್ರಯ ಅರಿವಿನ ದಾಸೋಹದ ಜೊತೆ ರಂಗ, ಗ್ರಂಥ ದಾಸೋಹವನ್ನು ಆಧ್ಯ ಕರ್ತವ್ಯಗಳೆಂಬಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ನಾಡಿನ ಪ್ರಗತಿಪರ ಚಿಂತಕರಲ್ಲಿ ಪ್ರಮುಖರಾದ ಸ್ವಾಮೀಜಿಯವರ ರೊಟ್ಟಿಬುತ್ತಿ ಕೃತಿ ನಮ್ಮಲ್ಲಿ ಪ್ರಜ್ಞೆಯ ವಿಸ್ತಾರಕ್ಕೆ ವಿಶಾಲ ಸೋಪಾನವನ್ನೊದಗಿಸುತ್ತದೆ.
©2024 Book Brahma Private Limited.