‘ಪ್ರಜೆ ಮತ್ತು ಪ್ರಜ್ಞೆ’ ಲೇಖಕ ನಾ. ದಿವಾಕರ ಅವರ ವೈಚಾರಿಕ ಲೇಖನ ಸಂಕಲನ. ಈ ಕೃತಿಗೆ ಪ್ರೊ. ಕಾಳೇಗೌಡ ನಾಗವಾರ ಅವರ ಮುನ್ನುಡಿ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ ನಮ್ಮ ಸಮಾಜದ ಹಾಗೂ ಸಕಲ ಜೀವಿಗಳ ಬದುಕಿನ ಆರೋಗ್ಯದ ಬಗ್ಗೆ ತೆರೆದ ಮನಸ್ಸಿನ ಧ್ಯಾನಸ್ಥ ಸ್ಥಿತಿಯಲ್ಲಿ ಯೋಚಿಸುವ ಜೀವಿಸುವ ಮತ್ತು ಬರೆಯುವ ನಮ್ಮ ಸುತ್ತಲ ಸಂವೇದನಾಶೀಲ ಬರಹಗಾರರಲ್ಲಿ ಗೆಳೆಯರಾದ ನಾ.ದಿವಾಕರ ಅವರು ಸಹ ಪ್ರಮುಖರಾಗಿದ್ದಾರೆ. ಜನಸಮುದಾಯದ ಏಳಿಗೆಗೆ ಕಂಟಕಪ್ರಾಯವಾಗುವ ಯಾವುದೇ ಘಟನೆ, ನಿರ್ಣಯ ಮತ್ತು ದುಷ್ಟ ಅಮಾನವೀಯ ಚಟುವಟಿಕೆಗಳನ್ನು ಕಿಂಚಿತ್ತೂ ಸಹಿಸದ ಇವರು ಮಂಗಳಕರ ಆಲೋಚನೆ ಹಾಗೂ ಕ್ರಿಯೆಯಲ್ಲಿ ಸದಾ ತಲ್ಲೀನರಾಗಿರುವುದನ್ನು ಕಂಡರೆ ಹೃದಯ ತುಂಬಿ ಬರುತ್ತದೆ ಎಂದಿದ್ದಾರೆ ಕಾಳೇಗೌಡ ನಾಗವಾರ. ಜೊತೆಗೆ ಈ ಬಗೆಯ ಬದ್ಧತೆಯ ಲೇಖಕರಾಗಿರುವ ನಾ. ದಿವಾಕರ ಅವರು ಇದೀಗ ಹೊರತರುತ್ತಿರುವ ಪ್ರಜೆ ಮತ್ತು ಪ್ರಜ್ಞೆ ಎಂಬ ಎಂಬತ್ತಮೂರು ವೈಚಾರಿಕ ಲೇಖನಗಳ ಸುಮಾರು ಐನೂರು ಪುಟಗಳಷ್ಟು ದೊಡ್ಡ ಗಾತ್ರದ ವಿವೇಚನಾ ಸಂಪುಟ ಪ್ರಕಟವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ತಮ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜಾತ್ಯಾತೀತವೂ, ಧರ್ಮಾತೀತವೂ, ಸಕಲಹಿತದಾಯಕವೂ ಆದ ವಾತಾವರಣವನ್ನು ಸಂಪೂರ್ಣವಾಗಿ ಉಂಟುಮಾಡಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕ, ಸಾಹಿತಿ, ಪತ್ರಕರ್ತ ಮತ್ತು ಜನಪ್ರತಿನಿಧಿಗಳಲ್ಲಿ ಇದ್ದೇ ತೀರಬೇಕೆನ್ನುವ ಘನೋದ್ಧೇಶಗಳ ಈ ಲೇಖಕರು ತಮ್ಮೆಲ್ಲ ಬರಹಗಳಲ್ಲಿ ಈ ದಿಕ್ಕಿನಲ್ಲಿ ಜಾಗರೂರತೆಯಿಂದ ಮುನ್ನಡೆಯದ ಅವಿವೇಕಿಗಳ ಮತ್ತು ಸಮಯಸಾಧಕರ ವರ್ತನೆಗಳು ಎಷ್ಟೊಂದು ಆಘಾತಕಾರಿ ಪರಿಸ್ಥಿತಿಗೆ ಕಾರಣವಾಗುತ್ತವೆಂಬುದನ್ನು ಸಕಾರಣವಾಗಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.